Basanagouda R Patil, D K Shivakumar, CBI and Karnataka HC 
ಸುದ್ದಿಗಳು

[ಡಿಕೆಶಿ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣ] ಇ ಡಿ ಪ್ರಕರಣ ರದ್ದತಿ ಪರಿಣಾಮ ಬೀರದು: ಹೈಕೋರ್ಟ್‌ನಲ್ಲಿ ಸಿಬಿಐ ವಾದ

ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ಹಿಂಪಡೆದು ಸರ್ಕಾರ ಆದೇಶ ಹೊರಡಿಸಬಹುದೇ? ಒಂದೊಮ್ಮೆ ಸರ್ಕಾರಕ್ಕೆ ಆ ಅಧಿಕಾರ ಇದೆ ಎಂದು ಘೋಷಿಸಿದರೆ ಈಗಾಗಲೇ ದಾಖಲಿಸಲಾಗಿರುವ ಎಫ್‌ಐಆರ್‌ಗೆ ಅಡ್ಡಿಯಾಗುವುದೇ? ಎಂದು ಪ್ರಶ್ನಿಸಿದ ಸಿಬಿಐ.

Siddesh M S

ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ವಿರುದ್ಧ ಜಾರಿ ನಿರ್ದೇಶನಾಲಯ ದಾಖಲಿಸಿದ್ದ ಪ್ರಕರಣದ ರದ್ದತಿಯು ತಾನು ತನಿಖೆ ನಡೆಸುತ್ತಿರುವ ಪ್ರಕರಣದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕೇಂದ್ರೀಯ ತನಿಖಾ ದಳ (ಸಿಬಿಐ) ಗುರುವಾರ ಕರ್ನಾಟಕ ಹೈಕೋರ್ಟ್‌ನಲ್ಲಿ ವಾದಿಸಿತು.

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿರುದ್ಧದ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ನೀಡಿದ್ದ ಅನುಮತಿ ಹಿಂಪಡೆದಿದ್ದ ಕ್ರಮ ಪ್ರಶ್ನಿಸಿ ಸಿಬಿಐ ಮತ್ತು ಬಿಜೆಪಿ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಕೆ ಸೋಮಶೇಖರ್‌ ಮತ್ತು ಉಮೇಶ್‌ ಎಂ. ಅಡಿಗ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ಸಿಬಿಐ ಪರವಾಗಿ ವಾದಿಸಿದ ವಿಶೇಷ ಸರ್ಕಾರಿ ಅಭಿಯೋಜಕರಾದ ಪಿ ಪ್ರಸನ್ನ ಕುಮಾರ್‌ “ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ಹಿಂಪಡೆದಿರುವ ಆಕ್ಷೇಪಾರ್ಹವಾದ ಆದೇಶವನ್ನು ರಾಜ್ಯ ಸರ್ಕಾರ ಹೊರಡಿಸಬಹುದೇ? ವಾಸ್ತವದಲ್ಲಿ ಸರ್ಕಾರ ಈ ಆದೇಶ ಮಾಡಲಾಗದು. ಒಂದೊಮ್ಮೆ ರಾಜ್ಯ ಸರ್ಕಾರಕ್ಕೆ ಆ ಅಧಿಕಾರ ಇದೆ ಎಂದು ಘೋಷಿಸಿದರೆ ಈಗಾಗಲೇ ದಾಖಲಿಸಲಾಗಿರುವ ಎಫ್‌ಐಆರ್‌ಗೆ ಅಡ್ಡಿಯಾಗುವುದೇ? ಖಾಜಿ ದೋರ್ಜಿ, ಚಂದ್ರಶೇಖರ್‌ ಪ್ರಕರಣ, ಕಾಮನ್‌ ಕಾಸ್‌ ಪ್ರಕರಣದಲ್ಲಿ ಸಿಬಿಐಗೆ ನೀಡಿರುವ ಅನುಮತಿ ಹಿಂಪಡೆದಿದ್ದರೂ ಸಿಬಿಐ ತನಿಖೆಗೆ ಅಡ್ಡಿಯಾಗಿರಲಿಲ್ಲ” ಎಂದು ವಿವರಿಸಿದರು.

“ಸಿಬಿಐಗೆ ಅರ್ಜಿ ಸಲ್ಲಿಸಲು ಅಧಿಕಾರವಿಲ್ಲ ಎಂದು ಡಿ ಕೆ ಶಿವಕುಮಾರ್‌ ಪ್ರಶ್ನಿಸಿದ್ದಾರೆ. ಖಂಡಿತವಾಗಿಯೂ ಅನುಮತಿ ನೀಡಿ ಆನಂತರ ಆದೇಶ ಹಿಂಪಡೆದಿರುವುದನ್ನು ಪ್ರಶ್ನಿಸುವ ಅಧಿಕಾರ ಸಿಬಿಐಗೆ ಇದೆ” ಎಂದು ಅರ್ಜಿಯ ಊರ್ಜಿತತ್ವ ಪ್ರತಿಪಾದಿಸಿದರು.

ʼಹಲವು ತಿಂಗಳ ಕಾಲ ಪ್ರಾಥಮಿಕ ತನಿಖೆ ನಡೆಸಿ ಪ್ರಕರಣ ದಾಖಲಿಸಲಾಗಿದೆ. ಹೀಗಾಗಿ, ಜಾರಿ ನಿರ್ದೇಶನಾಲಯದ ಪ್ರಕರಣ ರದ್ದುಪಡಿಸಿರುವುದು ಸಿಬಿಐ ತನಿಖೆ ನಡೆಸುತ್ತಿರುವುದರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಭ್ರಷ್ಟಾಚಾರ ನಿಷೇಧ ಕಾಯಿದೆಯಲ್ಲಿ ಪ್ರೆಡಿಕೇಟ್‌ ಅಫೆನ್ಸ್‌ (ಪಿಎಂಎಲ್‌ಎ ಕಾಯಿದೆಯ ಅನುಸೂಚಿತ ಪಟ್ಟಿಯಡಿ ಪ್ರಕರಣ ದಾಖಲಿಸಲು ಕಾರಣವಾಗುವ ಮೂಲ ಐಪಿಸಿ ಪ್ರಕರಣ) ಕುರಿತು ಯಾವುದೇ ವ್ಯಾಖ್ಯಾನವಿಲ್ಲ” ಎಂದರು.

“ಸಿಬಿಐಯಿಂದ ತೆಗೆದು ಲೋಕಾಯುಕ್ತ ತನಿಖೆಗೆ ಆದಾಯ ಮೀರಿದ ಆಸ್ತಿ ಪ್ರಕರಣ ವಹಿಸಿರುವುದು ರಾಜ್ಯ ಸರ್ಕಾರದ ಕಣ್ಣೊರೆಸುವ ತಂತ್ರವಾಗಿದೆ. ಇಡೀ ತನಿಖೆಯನ್ನು ದಾರಿ ತಪ್ಪಿಸುವ ಮೂಲಕ ಡಿ ಕೆ ಶಿವಕುಮಾರ್‌ ಅವರಿಗೆ ಅನುಕೂಲ ಮಾಡಿಕೊಡುವ ಉದ್ದೇಶವಿದೆ. ಸಿಬಿಐನಿಂದ ಲೋಕಾಯುಕ್ತಕ್ಕೆ ತನಿಖೆ ವರ್ಗಾಯಿಸುವುದಕ್ಕೆ ಯಾವುದೇ ಕಾನೂನಿನ ಬೆಂಬಲವಿಲ್ಲ. ಇಂಥ ನಿರ್ಧಾರವನ್ನು ಹಿಂದೆಂದೂ ಕಂಡೂಕೇಳಿಲ್ಲ. ಸಿಬಿಐಗೆ ನೀಡಿರುವ ಅನುಮತಿ ಹಿಂಪಡೆದಿರುವ ರಾಜ್ಯ ಸರ್ಕಾರದ ಆದೇಶವನ್ನು ವಜಾ ಮಾಡಬೇಕು. ಸಿಬಿಐ ತನಿಖೆ ಪೂರ್ಣಗೊಳಿಸಿ, ವಿಚಾರಣಾಧೀನ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಲು ಅನುಮತಿಸಬೇಕು” ಎಂದು ಕೋರಿದರು.

ಮತ್ತೊಬ್ಬ ಅರ್ಜಿದಾರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಪರವಾಗಿ ವಾದಿಸಿದ ವಕೀಲ ದಳವಾಯಿ ವೆಂಕಟೇಶ್‌ ಅವರು “ಉಪಮುಖ್ಯಮಂತ್ರಿ ವಿರುದ್ಧದ ಪ್ರಕರಣವನ್ನು ದಾರಿ ತಪ್ಪಿಸುತ್ತಿರುವುದು ಸಾರ್ವಜನಿಕರ ದೃಷ್ಟಿಯಿಂದ ಆಘಾತಕಾರಿ ಬೆಳವಣಿಗೆ. ನಾವು ಅರ್ಜಿ ಸಲ್ಲಿಸಿದ ಬಳಿಕ ರಾಜ್ಯ ಸರ್ಕಾರವು ಪ್ರಕರಣವನ್ನು ಲೋಕಾಯುಕ್ತ ವಿಚಾರಣೆಗೆ ವಹಿಸಿದೆ” ಎಂದರು.

“ಒಂದು ಪೊಲೀಸ್‌ ಠಾಣೆಯಿಂದ ಮತ್ತೊಂದು ಪೊಲೀಸ್‌ ಠಾಣೆಗೆ ಪ್ರಕರಣ ವರ್ಗಾಯಿಸುವ ಅಧಿಕಾರ ಸರ್ಕಾರಕ್ಕೆ ಇದೆ. ಲೋಕಾಯುಕ್ತಕ್ಕೂ ಸರ್ಕಾರ ಪ್ರಕರಣ ವರ್ಗಾಯಿಸಬಹುದು. ಆದರೆ, ಸಿಬಿಐಗೆ ನೀಡಿರುವ ಪ್ರಕರಣವನ್ನು ಹಿಂಪಡೆದು ಬೇರೆ ಸಂಸ್ಥೆಗೆ ನೀಡಲಾಗದು. ರಾಜ್ಯ ಸರ್ಕಾರದ ಆದೇಶ ಸ್ವೇಚ್ಛೆಯಿಂದ ಕೂಡಿದ್ದು, ಪ್ರಕರಣವನ್ನು ಸಿಬಿಐಯಿಂದ ಹಿಂಪಡೆಯುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ಡಿ ಕೆ ಶಿವಕುಮಾರ್‌ ಅವರನ್ನು ರಕ್ಷಿಸುವ ಕೆಲಸವನ್ನು ಸರ್ಕಾರ ಮಾಡಿದೆ. ಇಂಥ ನಿರ್ಧಾರ ಕೈಗೊಳ್ಳುವುದಕ್ಕೂ ಮುನ್ನ ನ್ಯಾಯಾಲಯದ ಆದೇಶಗಳನ್ನು ಸಂಪುಟ ಸಭೆಯ ಮುಂದೆ ಇಟ್ಟಿಲ್ಲ” ಎಂದು ಆಕ್ಷೇಪಿಸಿದರು.

ಈ ವಾದ ಆಲಿಸಿದ ಪೀಠವು ಪ್ರತಿವಾದಿಗಳ ವಾದವನ್ನು ಆಲಿಸಲು ಮೇ 27ಕ್ಕೆ ದಿನಾಂಕ ನಿಗದಿಪಡಿಸಿ, ವಿಚಾರಣೆ ಮುಂದೂಡಿತು.