Bidar sedition matter 
ಸುದ್ದಿಗಳು

ಬೀದರ್ ಘಟನೆ: ಶಾಲಾಮಕ್ಕಳ ವಿಚಾರಣೆ ವೇಳೆ ಸಮವಸ್ತ್ರ ಧರಿಸಿದ್ದ ಪೊಲೀಸರ ವಿರುದ್ಧ ಕೈಗೊಂಡ ಕ್ರಮ ತಿಳಿಸಿ ಎಂದ ಹೈಕೋರ್ಟ್

ಸಮವಸ್ತ್ರ ಧರಿಸಿರುವ ವಿದ್ಯಾರ್ಥಿಗಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸುವುದು ಬಾಲ ನ್ಯಾಯ ಕಾಯಿದೆಯಡಿ ಗಂಭೀರ ಪ್ರಕರಣವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

Bar & Bench

ಬೀದರ್‌ ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ವಿದ್ಯಾರ್ಥಿಗಳ ವಿಚಾರಣೆ ನಡೆಸುವಾಗ ಸಮವಸ್ತ್ರ ಧರಿಸಿ ಬಂದೂಕು ಇರಿಸಿಕೊಂಡಿದ್ದ ಪೊಲೀಸ್‌ ಅಧಿಕಾರಿಗಳ ವಿರುದ್ಧ ತೆಗೆದುಕೊಂಡ ಕ್ರಮದ ಬಗ್ಗೆ ಪೊಲೀಸ್‌ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಅಫಿಡವಿಟ್‌ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಸೋಮವಾರ ಸೂಚಿಸಿದೆ.

ಸಮವಸ್ತ್ರ ಧರಿಸಿರುವ ವಿದ್ಯಾರ್ಥಿಗಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸುವುದು ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ 2015ರ ನಿಯಮಗಳಡಿ ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸಿದ ಗಂಭೀರ ಪ್ರಕರಣವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಪೌರತ್ವ ತಿದ್ದುಪಡಿ ಕಾಯಿದೆಗೆ ಸಂಬಂಧಿಸಿದಂತೆ ಪ್ರದರ್ಶಿಸಿದ ನಾಟಕದ ಬಗ್ಗೆ ಅಪ್ರಾಪ್ತ ವಿದ್ಯಾರ್ಥಿಗಳ ವಿಚಾರಣೆ ನಡೆಸಿದ ಬಗ್ಗೆ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಎನ್ ಎಸ್ ಸಂಜಯ್ ಗೌಡ ಅವರಿದ್ದ ಪೀಠ ವಿಚಾರಣೆ ನಡೆಸಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿದಾರರು ಸಲ್ಲಿಸಿದ ಛಾಯಾಚಿತ್ರಗಳನ್ನು ಪರಿಶೀಲಿಸಿದ ನಂತರ ಪೀಠ ಈ ನಿರ್ದೇಶನ ನೀಡಿದೆ.

ಮಕ್ಕಳ ಹಕ್ಕುಗಳ ಉಲ್ಲಂಘನೆ ಮರುಕಳಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನಗಳನ್ನು ನೀಡುವುದನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ.

"ಸಮವಸ್ತ್ರದಲ್ಲಿರುವ ಪೋಲಿಸ್ ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ಇದು ಹೀಗೆ ಮುಂದುವರಿಯಲು ಸಾಧ್ಯವಿಲ್ಲ. ಮಕ್ಕಳು ಇದಕ್ಕೆ ಏಕೆ ತುತ್ತಾಗಬೇಕು? ಅಲ್ಲಿದ್ದ ಬೇರೆ ಅಧಿಕಾರಿಗಳ ವಿವರಣೆ ಏನು? ಛಾಯಾಚಿತ್ರಗಳನ್ನು ನೋಡಿ. ಇದು ಕಾನೂನಿಗೆ ವಿರುದ್ಧವಾಗಿದೆ” ಎಂದು ಪೀಠ ಹೇಳಿತು. "ಶಸ್ತ್ರಾಸ್ತ್ರಗಳನ್ನಿರಿಸಿಕೊಂಡು ವಿದ್ಯಾರ್ಥಿಗಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದರು. ಕಾನೂನಿನಲ್ಲಿ ಇದಕ್ಕೆ ಅನುಮತಿ ಇದೆಯೇ?” ಎಂದು ಕೂಡ ನ್ಯಾಯಾಲಯ ಪ್ರಶ್ನಿಸಿತು.

ಬಳಿಕ, ಡಿವೈಎಸ್‌ಪಿ ಅವರು ಸಲ್ಲಿಸಿದ ಅಫಿಡವಿಟನ್ನು ಪರಿಶೀಲಿಸಿದ ನ್ಯಾಯಾಲಯ ಛಾಯಚಿತ್ರ ಸರಿಯಾಗಿದೆ ಎಂಬುದನ್ನು ಪೊಲೀಸ್‌ ಅಧಿಕಾರಿ ಒಪ್ಪಿಕೊಂಡಿದ್ದಾರೆ. ಆದರೂ ಅರ್ಜಿದಾರರು ಸಲ್ಲಿಸಿದ ಛಾಯಾಚಿತ್ರಗಳ ಕುರಿತು ನ್ಯಾಯಾಲಯಕ್ಕೆ ಅವರು ತಿಳಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತು.

"ಈ ಮನುಷ್ಯನ ಲಜ್ಜೆಗೆಟ್ಟ ವರ್ತನೆ ನೋಡಿ. ಇದನ್ನು ವಿವರಿಸುವಂತೆ ನಾವು ಪೊಲೀಸ್ ಅಧಿಕಾರಿಯನ್ನು ಕೇಳುತ್ತೇವೆ” ಎಂದ ನ್ಯಾಯಾಲಯ ಮುಂದಿನ ವಿಚಾರಣೆ ವೇಳೆಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಪೊಲೀಸ್‌ ಅಧಿಕಾರಿಗೆ ಸೂಚಿಸಿತು.

ಕಳೆದ ವರ್ಷ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ನೋಟಿಸ್ ನೀಡಿತ್ತು, ಆದರೆ ವಿದ್ಯಾರ್ಥಿಗಳ ವಿಚಾರಣೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯವಿಲ್ಲ ಎಂದು ತಿಳಿಸಿ ಮಧ್ಯಂತರ ಆದೇಶಗಳನ್ನು ನೀಡಲು ನಿರಾಕರಿಸಿತ್ತು.

ಈ ಹಿಂದಿನ ವಿಚಾರಣೆಯೊಂದರಲ್ಲಿ, ಕೂಡ ಹೈಕೋರ್ಟ್ ವಿದ್ಯಾರ್ಥಿಗಳನ್ನು ವಿಚಾರಣೆ ಮಾಡಲು ಪೊಲೀಸರಿಗೆ ಸಾಕಷ್ಟು ತರಬೇತಿ ನೀಡಲಾಗಿದೆಯೇ ಎಂದು ಪ್ರಶ್ನಿಸಿತ್ತು. ಇದಕ್ಕೆ, ರಾಜ್ಯವು ವಿದ್ಯಾರ್ಥಿಗಳಿಗೆ ಕೇವಲ ಸಮಾಲೋಚನೆ ನೀಡಲಾಯಿತು ಮತ್ತು ವಿಚಾರಣೆಗೆ ಒಳಪಡಿಸಿಲ್ಲ ಎಂದು ಪ್ರತಿಕ್ರಿಯಿಸಿತ್ತು.

ಪೌರತ್ವ ತಿದ್ದುಪಡಿ ಕಾಯಿದೆ (CAA) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿಯ ಕುರಿತು ಶಾಹೀನ್ ಶಾಲೆಯ 4, 5 ಮತ್ತು 6 ನೇ ತರಗತಿಯ ವಿದ್ಯಾರ್ಥಿಗಳು ನಾಟಕ ಪ್ರದರ್ಶಿಸಿರುವ ಸಂಬಂಧ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸದಸ್ಯರು ದೂರು ಸಲ್ಲಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಮಾನಿಸುವ ಸಂಭಾಷಣೆ ನಾಟಕದಲ್ಲಿದೆ ಎಂದು ಆರೋಪಿಸಲಾಗಿತ್ತು. ತರುವಾಯ ಪೊಲೀಸರು ಶಾಲಾಡಳಿತದ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದರು. ಹೊಸದಾಗಿ ಜಾರಿಗೆ ಬಂದ ಸಿಎಎ ಬಗ್ಗೆ ಸುಳ್ಳು ಮಾಹಿತಿ ನೀಡಲಾಗುತ್ತಿದೆ, ಕಾಯಿದೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಋಣಾತ್ಮಕ ಅಭಿಪ್ರಾಯ ಮೂಡಿಸಲಾಗುತ್ತಿದೆ ಹಾಗೂ ಕೋಮು ಉದ್ವಿಗ್ನತೆಗೆ ಪ್ರಚೋದನೆ ನೀಡಲಾಗುತ್ತಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.

ಘಟನೆಗೆ ಸಂಬಂಧಿಸಿದಂತೆ ಮುಖ್ಯಶಿಕ್ಷಕಿ ಮತ್ತು ವಿದ್ಯಾರ್ಥಿಯೊಬ್ಬರ ತಾಯಿಯನ್ನು ಬಂಧಿಸಲಾಗಿತ್ತು. ನಂತರ ಅವರು ಜಾಮೀನು ಪಡೆದುಕೊಂಡರೆ ಶಾಲಾಡಳಿತ ನಿರೀಕ್ಷಣಾ ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿತ್ತು.