Karnataka High Court 
ಸುದ್ದಿಗಳು

[ವಿಹಾನ್‌ ಪ್ರಕರಣ] ಕೆಪಿಐಡಿ ಕಾಯಿದೆ ಸಾಂವಿಧಾನಿಕ ಸಿಂಧುತ್ವ ಪ್ರಶ್ನೆ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

“ಠೇವಣಿ ಇಡುವಂತೆ ವಿಹಾನ್‌ ತಮ್ಮನ್ನು ಪ್ರೇರೇಪಿಸಿದೆ ಎಂದು ಜನರು ದಾಖಲಿಸಿರುವ ದೂರುಗಳ ತನಿಖೆಯನ್ನು ತನಿಖಾ ಸಂಸ್ಥೆ ಮುಂದುರಿಸಬೇಕು. ಇದಕ್ಕೆ ಕಂಪೆನಿಯು ಸಹಕರಿಸಬೇಕು” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

Bar & Bench

ವಿಹಾನ್‌ ಡೈರೆಕ್ಟ್‌ ಸೆಲ್ಲಿಂಗ್‌ (ಇಂಡಿಯಾ) ಪ್ರೈವೇಟ್‌ ಲಿಮಿಟೆಡ್‌ ವಿರುದ್ದ ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ರಕ್ಷಣೆ (ಕೆಪಿಐಡಿ) ಕಾಯಿದೆಯ ಅಡಿ ಕ್ರಮಕೈಗೊಂಡಿರುವುದರ ಸರಿತಪ್ಪಿನ ಬಗ್ಗೆ ನ್ಯಾಯಾಲಯ ಪರಿಶೀಲಿಸುತ್ತಿರುವುದರಿಂದ ಸಂಸ್ಥೆಯ ವಿರುದ್ಧ ದುರುದ್ದೇಶಪೂರಿತ ಕ್ರಮಕೈಗೊಳ್ಳದಂತೆ ಗುರುವಾರ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ನಿರ್ದೇಶಿಸಿದೆ.

ವಿಹಾನ್‌ ಸಂಸ್ಥೆಯು ಕೆಪಿಐಡಿ ಕಾಯಿದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿರುವ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ನೇತೃತ್ವದ ವಿಭಾಗೀಯ ಪೀಠವು ನಡೆಸಿತು. ಅಡ್ವೊಕೇಟ್‌ ಜನರಲ್‌ ಅವರಿಗೆ ನೋಟಿಸ್‌ ಜಾರಿ ಮಾಡಿರುವ ಪೀಠವು ಒಂದು ತಿಂಗಳಲ್ಲಿ ಆಕ್ಷೇಪಣೆ ಸಲ್ಲಿಸಲು ಆದೇಶಿಸಿದೆ.

“ಠೇವಣಿ ಇಡುವಂತೆ ವಿಹಾನ್‌ ತಮ್ಮನ್ನು ಪ್ರೇರೇಪಿಸಿದೆ ಎಂದು ಜನರು ದಾಖಲಿಸಿರುವ ದೂರುಗಳ ತನಿಖೆಯನ್ನು ತನಿಖಾ ಸಂಸ್ಥೆ ಮುಂದುರಿಸಬೇಕು. ಇದಕ್ಕೆ ಕಂಪೆನಿಯು ಸಹಕರಿಸಬೇಕು” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ವಿಚಾರಣೆ ಆರಂಭವಾಗುತ್ತಿದ್ದಂತೆ ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲೆ ಕಾಮಿನಿ ಜೈಸ್ವಾಲ್‌ ಅವರು “ವಿಹಾನ್‌ ಹಣಕಾಸು ಸಂಸ್ಥೆಯಲ್ಲ. ಅದು ಠೇವಣಿಯನ್ನೂ ಸಂಗ್ರಹಿಸುತ್ತಿಲ್ಲ. ವಿಹಾನ್‌ ಇ-ಕಾಮರ್ಸ್‌ ನೇರ ಮಾರಾಟ ಸಂಸ್ಥೆಯಾಗಿದ್ದು, ಹಾಂಕಾಂಗ್‌ನ ಕ್ಯೂ ನೆಟ್‌ ಲಿಮಿಟೆಡ್‌ನ ಉಪ ಫ್ರಾಂಚೈಸಿಯಾಗಿದೆ” ಎಂದರು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲೆ ಎಚ್ ವಾಣಿ ಅವರು “ರಾಜ್ಯದಾದ್ಯಂತ ವಿಹಾನ್‌ ವಿರುದ್ಧ 22 ದೂರುಗಳು ಸಲ್ಲಿಕೆಯಾಗಿವೆ. 440 ಸಂತ್ರಸ್ತರು ಇದ್ದಾರೆ. ತನಿಖೆ ನಡೆಯುತ್ತಿದೆ. ಅರ್ಜಿದಾರರು ತನಿಖೆಗೆ ಸಹಕರಿಸಬೇಕು. ಕೆಪಿಐಡಿ ಕಾಯಿದೆ ಅಡಿ ಅರ್ಜಿದಾರರು ವಿಶೇಷ ನ್ಯಾಯಾಲಯದಲ್ಲಿ ಆಕ್ಷೇಪಾರ್ಹವಾದ ಅಧಿಸೂಚನೆಯ ವಿರುದ್ಧ ತಕರಾರು ಎತ್ತಬಹುದಾಗಿದೆ” ಎಂದರು.

ನ್ಯಾಯಾಲಯವು ವಿಚಾರಣೆಯನ್ನು ಫೆಬ್ರವರಿ 21ಕ್ಕೆ ಮುಂದೂಡಿದೆ.