ಈಗಾಗಲೇ ಅನೇಕ ಮಸೀದಿಗಳಿರುವ ಪ್ರದೇಶದಲ್ಲಿ ಹೊಸ ಮಸೀದಿ ನಿರ್ಮಾಣಕ್ಕೆ ಕೇರಳ ಹೈಕೋರ್ಟ್ ಶುಕ್ರವಾರ ಅನುಮತಿ ನಿರಾಕರಿಸಿದೆ. ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯ ಧಾರ್ಮಿಕ ಕಟ್ಟಡಗಳಿದ್ದು ಜನಸಂಖ್ಯೆಗೆ ಹೋಲಿಸಿದರೆ ಅವುಗಳ ಸಂಖ್ಯೆ ತುಂಬಾ ಹೆಚ್ಚಿದೆ ಎಂದು ಅದು ಹೇಳಿದೆ. [ನೂರುಲ್ ಇಸ್ಲಾಂ ಸಂಸ್ಕಾರಿಕಾ ಸಂಘಂ ಮತ್ತು ಜಿಲ್ಲಾಧಿಕಾರಿ ಇನ್ನಿತರರ ನಡುವಣ ಪ್ರಕರಣ].
ʼದೇವರ ಸ್ವಂತ ನಾಡು ಎಂದು ವ್ಯಾಪಕವಾಗಿ ಹೇಳಲಾಗುವ ಕೇರಳ ಧಾರ್ಮಿಕ ಸ್ಥಳಗಳಿಂದ ತುಂಬಿ ತುಳುಕುತ್ತಿದೆ ಎಂದು ನ್ಯಾಯಮೂರ್ತಿ ಪಿ ವಿ ಕುಂಞಿಕೃಷ್ಣನ್ ಅಭಿಪ್ರಾಯಪಟ್ಟಿದ್ದಾರೆ.
ಯಾವುದೇ ಧಾರ್ಮಿಕ ಸಭಾಂಗಣಗಳು ಅನುಮೋದನೆ ಇಲ್ಲದೆ ಕಾರ್ಯ ನಿರ್ವಹಿಸುತ್ತಿಲ್ಲ ಮತ್ತು ಕೋಮು ಸೌಹಾರ್ದತೆ ಕಾಪಾಡಿಕೊಳ್ಳುತ್ತಿವೆ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ನ್ಯಾಯಾಲಯ ನಿರ್ದೇಶಿಸಿದೆ.
ನ್ಯಾಯಾಲಯದ ಪ್ರಮುಖ ಅವಲೋಕನಗಳು
ಕೇರಳದ ವಿಶಿಷ್ಟ ಭೌಗೋಳಿಕ ಪರಿಸ್ಥಿತಿಯಿಂದಾಗಿ ಇದನ್ನು 'ದೇವರ ಸ್ವಂತ ನಾಡು' ಎಂದು ಕರೆಯಲಾಗುತ್ತದೆ. ಆದರೆ ಧಾರ್ಮಿಕ ಸ್ಥಳಗಳು ಮತ್ತು ಪ್ರಾರ್ಥನಾ ಮಂದಿರಗಳಿಂದ ನಾವು ಬಸವಳಿದಿದ್ದೇವೆ. ಅಪರೂಪದ ಪ್ರಕರಣ ಹೊರತುಪಡಿಸಿ ಯಾವುದೇ ಹೊಸ ಧಾರ್ಮಿಕ ಸ್ಥಳ ಮತ್ತು ಪ್ರಾರ್ಥನಾ ಮಂದಿರಗಳಿಗೆ ಅನುಮತಿ ನೀಡುವ ಸ್ಥಿತಿಯಲ್ಲಿ ನಾವು ಇಲ್ಲ.
ಪವಿತ್ರ ಕುರಾನ್‌ನ ಸಾಲುಗಳು ಮುಸ್ಲಿಂ ಸಮುದಾಯಕ್ಕೆ ಮಸೀದಿಯ ಮಹತ್ವವನ್ನು ಸ್ಪಷ್ಟವಾಗಿ ಎತ್ತಿ ತೋರಿಸುತ್ತವೆ. ಆದರೆ ಆ ಗ್ರಂಥ ಪ್ರತಿ ಮೂಲೆ ಮೂಲೆಯಲ್ಲಿ ಮಸೀದಿ ಸ್ಥಾಪಿಸುವ ಅಗತ್ಯವಿದೆ ಎನ್ನುವುದಿಲ್ಲ.
ಧಾರ್ಮಿಕ ಸಂಸ್ಥೆಗಳು ಮತ್ತು ಪ್ರಾರ್ಥನಾ ಮಂದಿರಗಳಿಂದ ಕೇರಳ ದಣಿದಿದೆ. ಹಿಂದೂ, ಕ್ರೈಸ್ತ, ಮುಸ್ಲಲ್ಮಾನ, ಯಹೂದಿ, ಪಾರ್ಸಿ ಸೇರಿದಂತೆ ಪ್ರತಿಯೊಬ್ಬ ಭಕ್ತರು ತಮ್ಮ ನಿವಾಸದ ಬಳಿ ಧಾರ್ಮಿಕ ಸ್ಥಳ ಮತ್ತು ಪ್ರಾರ್ಥನಾ ಮಂದಿರಗಳನ್ನು ನಿರ್ಮಿಸಲು ಪ್ರಾರಂಭಿಸಿದರೆ, ರಾಜ್ಯ ಕೋಮು ವೈಷಮ್ಯ ಸೇರಿದಂತೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಿರುವ ವಾಣಿಜ್ಯ ಕಟ್ಟಡವನ್ನು ಪ್ರಾರ್ಥನಾ ಮಂದಿರವಾಗಿ ಪರಿವರ್ತಿಸಲು ಅನುಮತಿ ನೀಡಿದರೆ, ಕೋಮು ಸೌಹಾರ್ದತೆಗೆ ಧಕ್ಕೆ ಒದಗುವ ಸಾಧ್ಯತೆಗಳಿವೆ ಎಂದು ಗುಪ್ತಚರ ವರದಿ ಮತ್ತು ಪೊಲೀಸ್ ವರದಿ ಹೇಳುತ್ತದೆ. ಇದು ಸೂಕ್ಷ್ಮ ವಿಷಯವಾಗಿದೆ.
ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ ಮತ್ತು ಆರೋಗ್ಯದ ವ್ಯಾಪ್ತಿಗೆ ಒಳಪಟ್ಟು, ಪ್ರತಿ ಧಾರ್ಮಿಕ ಪಂಗಡ ಅಥವಾ ಅದರ ಯಾವುದೇ ವರ್ಗ ಧಾರ್ಮಿಕ ಮತ್ತು ದತ್ತಿ ಉದ್ದೇಶಗಳಿಗಾಗಿ ಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ನಿರ್ವಹಿಸುವ ಹಕ್ಕು ಪಡೆದಿರುತ್ತದೆ ಎಂದು ಸಂವಿಧಾನದ 26ನೇ (ಎ) ವಿಧಿ ಹೇಳುತ್ತದೆ ಎಂಬುದು ನಿಜ. ಆದರೆ ದೇಶದ ಮೂಲೆ ಮೂಲೆಗಳಲ್ಲಿ ಧಾರ್ಮಿಕ ಸ್ಥಳಗಳನ್ನು ಅವರು ನಿರ್ಮಿಸಬಹುದು ಎಂದು ಇದರರ್ಥವಲ್ಲ. ಕೇರಳ ಬಹಳ ಚಿಕ್ಕ ರಾಜ್ಯ.
ಕಟ್ಟಡದ ವಾಸಸ್ಥಳವನ್ನು ಧಾರ್ಮಿಕ ಸ್ಥಳವಾಗಿ ಬದಲಿಸಲು ಕೂಡ ಮಾರ್ಗಸೂಚಿಗಳು ಅನ್ವಯವಾಗುತ್ತವೆ . ಅಂತಹ ಮಾರ್ಗಸೂಚಿಗಳ ಪ್ರಕಾರ ಹೀಗೆ ಕಟ್ಟಡಗಳನ್ನು ಬದಲಿಸಲು ಸಕ್ಷಮ ಪ್ರಾಧಿಕಾರದ ಅನುಮೋದನೆ ಅಗತ್ಯ.
ಮನುಷ್ಯ ಹೇಗೆ ಧರ್ಮಗಳನ್ನು ಸೃಷ್ಟಿಸಿದ. ಧರ್ಮ ಹೇಗೆ ದೇವರನ್ನು ಸೃಷ್ಟಿಸಿತು ಹಾಗೂ ಅವೆರಡೂ ಕಲೆತು ಜಗತ್ತು ಮತ್ತು ಮಾನವೀಯತೆಯನ್ನು ಹೇಗೆ ಒಡೆದು ಹಾಕಿದವು ಎಂಬುದನ್ನು ಹೇಳುವ ಪ್ರಸಿದ್ಧ ಕವಿ ದಿವಂಗತ ವಯಲಾರ್ ರಾಮವರ್ಮ ಅವರ ಚಲನಚಿತ್ರ ಗೀತೆಯೊಂದನ್ನು ನ್ಯಾ. ಕುಂಞಿಕೃಷ್ಣನ್ ಉಲ್ಲೇಖಿಸಿದರು.
ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಧಿಕಾರಿಗಳ ನಿರ್ಧಾರದಲ್ಲಿ ಹಸ್ತಕ್ಷೇಪ ಮಾಡಲು ಯಾವುದೇ ಕಾರಣ ನ್ಯಾಯಾಲಯಕ್ಕೆ ಕಂಡುಬಂದಿಲ್ಲ ಎಂದ ಪೀಠ ಅರ್ಜಿಯನ್ನು ವಜಾಗೊಳಿಸಿತು.