Justices P S Dinesh Kumar & T G Shivashankare Gowda, Karnataka HC 
ಸುದ್ದಿಗಳು

ಕಾನೂನು ಬಾಹಿರವಾಗಿ ರೇಡಿಯೊ ಡಯೋಗ್ನಾಸಿಸ್ ವೈದ್ಯಕೀಯ ಸ್ನಾತಕೋತ್ತರ ಪದವಿ ಸೀಟು ಹಂಚಿಕೆ: ಕೆಇಎಗೆ ₹ 5 ಲಕ್ಷ ದಂಡ

ದಂಡದ ಮೊತ್ತದಲ್ಲಿ ₹ 2.5 ಲಕ್ಷ ಮೊತ್ತವನ್ನು ಡಾ. ಸಿ ಕೆ ರಜನಿ ಅವರಿಗೆ ಉಳಿದ ₹ 2.5 ಲಕ್ಷ ಮೊತ್ತವನ್ನು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ (ಕೆಎಸ್‌ಎಲ್‌ಎಸ್‌ಎ) ಹೆಸರಿನಲ್ಲಿ ಠೇವಣಿ ಇರಿಸಬೇಕು ಎಂದು ನ್ಯಾಯಾಲಯ ಆದೇಶ ಮಾಡಿದೆ.

Bar & Bench

ರೇಡಿಯೊ ಡಯೋಗ್ನಾಸಿಸ್ ವೈದ್ಯಕೀಯ ಸ್ನಾತಕೋತ್ತರ ಪದವಿಯ ಸೀಟ್ ಅನ್ನು ಬ್ಲಾಕ್ ಮಾಡುವ ಮೂಲಕ ಕಾನೂನು ಬಾಹಿರವಾಗಿ ಸೀಟು ಹಂಚಿಕೆ ಮಾಡಿದ ಆರೋಪದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ಕರ್ನಾಟಕ ಹೈಕೋರ್ಟ್ ₹ 5 ಲಕ್ಷ ದಂಡ ವಿಧಿಸಿದೆ.

ಈ ಸಂಬಂಧ ಸೀಟು ವಂಚಿತರಾದ ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಡಾ. ಸಿ ಕೆ ರಜನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಪಿ ಎಸ್ ದಿನೇಶ್ ಕುಮಾರ್ ಮತ್ತು ಟಿ ಜಿ ಶಿವಶಂಕರೇಗೌಡ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

"ಅರ್ಜಿದಾರರಿಗೆ ರೇಡಿಯೊ ಡಯೋಗ್ನಾಸಿಸ್​ ಸೀಟನ್ನು ಮರು ಹಂಚಿಕೆ ಮಾಡಬೇಕು" ಎಂದೂ ನ್ಯಾಯಾಲಯ ನಿರ್ದೇಶಿಸಿದೆ. "ದಂಡದ ಮೊತ್ತದಲ್ಲಿ ₹ 2.5 ಲಕ್ಷ ಮೊತ್ತವನ್ನು ಡಾ. ಸಿ ಕೆ ರಜನಿ ಅವರಿಗೆ ಪಾವತಿಸಬೇಕು. ಉಳಿದ ₹ 2.5 ಲಕ್ಷ ಮೊತ್ತವನ್ನು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ (ಕೆಎಸ್‌ಎಲ್‌ಎಸ್‌ಎ) ಹೆಸರಿನಲ್ಲಿ ಠೇವಣಿ ಇರಿಸಬೇಕು" ಎಂದು ಆದೇಶದಲ್ಲಿ ವಿವರಿಸಲಾಗಿದೆ.

ವೈದ್ಯಕೀಯ ಸ್ನಾತಕೋತ್ತರ ವಿಭಾಗದ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರಕ್ಕೆ ಅರ್ಜಿದಾರರು ಪಾವತಿಸಿರುವ ಶುಲ್ಕವನ್ನು ಕಲಬುರಗಿಯ ಎಂ ಆರ್ ವೈದ್ಯಕೀಯ ಕಾಲೇಜಿನ ರೇಡಿಯೊ ಡಯೋಗ್ನಾಸಿಸ್ ಸೀಟಿಗೆ ಸರಿ ಹೊಂದಿಸಬೇಕು" ಎಂದು ಪೀಠ ಆದೇಶದಲ್ಲಿ ಹೇಳಿದೆ.

"2023ರ ಸೆಪ್ಟೆಂಬರ್ 19ರಲ್ಲಿ ನಡೆದ ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ನನಗೆ ಅನ್ಯಾಯವಾಗಿದೆ" ಎಂದು ಆಕ್ಷೇಪಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.