Rahul Gandhi and Supreme Court 
ಸುದ್ದಿಗಳು

'ರಾಹುಲ್ ದುರಹಂಕಾರಿ, ಮೋದಿ ಉಪನಾಮ ಹೇಳಿಕೆಗೆ ಕ್ಷಮೆ ಕೇಳಿಲ್ಲ': ಸುಪ್ರೀಂಗೆ ಪ್ರತಿಕ್ರಿಯೆ ನೀಡಿದ ಪೂರ್ಣೇಶ್ ಮೋದಿ

ರಾಹುಲ್ ಅವರಿಗೆ ನೀಡಲಾದ ಶಿಕ್ಷೆಗೆ ತಡೆ ನೀಡುವುದರ ವಿರುದ್ಧ ಪ್ರತಿಕ್ರಿಯೆ ನೀಡಿರುವ ಪೂರ್ಣೇಶ್ ಮೋದಿ ʼರಾಹುಲ್ ತಮ್ಮ ಅಜಾಗರೂಕ ಮತ್ತು ದುರುದ್ದೇಶಪೂರಿತ ಮಾತುಗಳಿಂದ ಸಂಪೂರ್ಣವಾಗಿ ನಿಷ್ಕಳಂಕ ವ್ಯಕ್ತಿಗಳನ್ನು ಕೆಣಕಿದ್ದಾರೆʼ ಎಂದಿದ್ದಾರೆ.

Bar & Bench

ʼಎಲ್ಲಾ ಕಳ್ಳರಿಗೂ ಮೋದಿ ಉಪನಾಮ ಏಕಿದೆʼ ಎಂಬ ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕ್ಷಮೆ ಯಾಚಿಸುವ ಬದಲು ದುರಹಂಕಾರ ತೋರಿದ್ದಾರೆ ಎಂದು ರಾಹುಲ್‌ ವಿರುದ್ಧ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆ ಹೂಡಿರುವ ದೂರುದಾರರು ಸುಪ್ರೀಂ ಕೋರ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ [ರಾಹುಲ್ ಗಾಂಧಿ ಮತ್ತು ಪೂರ್ಣೇಶ್ ಈಶ್ವರಭಾಯಿ ಮೋದಿ ಇನ್ನಿತರರ ನಡುವಣ ಪ್ರಕರಣ].

ರಾಹುಲ್‌ ಅವರಿಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನೀಡಿದ್ದ ಶಿಕ್ಷೆಗೆ ತಡೆ ನೀಡುವುದರ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರತಿಕ್ರಿಯಿಸಿರುವ ದೂರುದಾರ ಹಾಗೂ ಬಿಜೆಪಿ ನಾಯಕ ಪೂರ್ಣೇಶ್‌ ಮೋದಿ ʼರಾಹುಲ್ ಅವರು ತಮ್ಮ ಅಜಾಗರೂಕ ಮತ್ತು ದುರುದ್ದೇಶಪೂರಿತ ಮಾತುಗಳಿಂದ ಸಂಪೂರ್ಣವಾಗಿ ನಿಷ್ಕಳಂಕ ವ್ಯಕ್ತಿಗಳ ವರ್ಗವನ್ನು ಕೆಣಕಿದ್ದಾರೆʼ ಎಂದಿದ್ದಾರೆ.

"ವಿಚಾರಣಾ ನ್ಯಾಯಾಲಯ ಶಿಕ್ಷೆ ವಿಧಿಸುವ ಸಮಯದಲ್ಲಿ, ಅರ್ಜಿದಾರರು ತಪ್ಪಿಗೆ ಪಶ್ಚಾತ್ತಾಪವನ್ನಾಗಲಿ ಹಾಗೂ ಪರಿತಾಪವನ್ನಾಗಲಿ ತೋರದೆ ಅಹಂಕಾರ ಪ್ರದರ್ಶಿಸಿದರು… ಅರ್ಜಿದಾರರು ತಮಗೆ ಯಾವುದೇ ರೀತಿಯಲ್ಲಿ ತೊಂದರೆ ಕೊಡದ ನಿಷ್ಕಳಂಕ ರಹಿತವಾದ ಬೃಹತ್‌ ವರ್ಗದ ವ್ಯಕ್ತಿಗಳ ವಿರುದ್ಧ ದುರುದ್ದೇಶಪೂರ್ವಕವಾಗಿ ಮತ್ತು ಅಜಾಗರೂಕತೆಯಿಂದ ನಿಂದನೀಯ ಪದಗಳನ್ನು ಬಳಸಿದ್ದಾರೆ" ಎಂದು ಪ್ರತಿಕ್ರಿಯೆಯಲ್ಲಿ ತಿಳಿಸಲಾಗಿದೆ.

ಗುಜರಾತ್‌ನ ಸೂರತ್‌ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ತನ್ನನ್ನು ದೋಷಿ ಎಂದು ಘೋಷಿಸಿ ಎರಡು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದ ಆದೇಶಕ್ಕೆ ತಡೆ ಕೋರಿ ರಾಹುಲ್‌ ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯೆಯಾಗಿ ಪೂರ್ಣೇಶ್‌ ಈ ಪ್ರತಿಕ್ರಿಯೆ ನೀಡಿದ್ದಾರೆ.

ಕರ್ನಾಟಕದ ಕೋಲಾರ ಕ್ಷೇತ್ರದಲ್ಲಿ 2019ರಲ್ಲಿ ನಡೆದ ಚುನಾವಣಾ  ಸಮಾವೇಶದ ವೇಳೆ ನೀಡಿದ್ದ ಹೇಳಿಕೆಗಾಗಿ ರಾಹುಲ್‌ ತಪ್ಪಿತಸ್ಥರು ಎಂದು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ತೀರ್ಪು ನೀಡಿತ್ತು. ನರೇಂದ್ರ ಮೋದಿ ಅವರನ್ನು ನೀರವ್ ಮೋದಿ ಮತ್ತು ಲಲಿತ್ ಮೋದಿಯಂತಹ ಪರಾರಿಯಾದ ವ್ಯಕ್ತಿಗಳೊಂದಿಗೆ ರಾಹುಲ್‌ ಹೋಲಿಸಿದ್ದರು. ಆದರೆ ಮೋದಿ ಎಂಬ ಉಪನಾಮ ಇರುವ ಎಲ್ಲರಿಗೂ ಈ ಹೇಳಿಕೆ ಕಳಂಕ ತಂದಿದೆ ಎಂಬುದು ಪೂರ್ಣೇಶ್‌ ಅವರ ವಾದವಾಗಿತ್ತು. ತೀರ್ಪಿನ ಪರಿಣಾಮ ಕೇರಳದ ವಯನಾಡಿನಿಂದ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದ ರಾಹುಲ್‌ ಅವರನ್ನು ಸಂಸತ್‌ ಸ್ಥಾನದಿಂದ ಅನರ್ಹಗೊಳಿಸಲಾಗಿದೆ.

ತೀರ್ಪನ್ನು ಪ್ರಶ್ನಿಸಿ ರಾಹುಲ್‌ ಗುಜರಾತ್‌ ಹೈಕೋರ್ಟ್‌ ಮೊರೆ ಹೋದರೂ ಅದು ಫಲ ನೀಡಿರಲಿಲ್ಲ. ಇದರಿಂದಾಗಿ ಅವರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ತಿಂಗಳ ಆರಂಭದಲ್ಲಿ ಅರ್ಜಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಬೇಕು ಎಂದು ಪೂರ್ಣೇಶ್‌ ಮೋದಿ ಹಾಗೂ ಗುಜರಾತ್‌ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚಿಸಿತ್ತು.