Rahul Gandhi and Bombay High Court
Rahul Gandhi and Bombay High Court 
ಸುದ್ದಿಗಳು

ಬಿಜೆಪಿ ನಾಯಕ ಹೂಡಿರುವ ಮಾನನಷ್ಟ ಮೊಕದ್ದಮೆ ರದ್ದತಿ ಕೋರಿ ಬಾಂಬೆ ಹೈಕೋರ್ಟ್‌ಗೆ ರಾಹುಲ್ ಗಾಂಧಿ ಅರ್ಜಿ

Bar & Bench

ಬಿಜೆಪಿ ನಾಯಕರೊಬ್ಬರು ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಯಲ್ಲಿ ಖುದ್ದು ಹಾಜರಾಗುವಂತೆ ಮುಂಬೈ ನ್ಯಾಯಾಲಯವೊಂದು ನೀಡಿರುವ ಸಮನ್ಸ್ ಆದೇಶ ಪ್ರಶ್ನಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಬಿಜೆಪಿಯ ಮಹೇಶ್ ಹುಕುಮ್‌ಚಂದ್ ಶ್ರೀಶ್ರೀಮಲ್ ಅವರು ರಾಹುಲ್‌ ವಿರುದ್ಧ ಹೂಡಿದ್ದ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ 2019ರ ಆಗಸ್ಟ್ 2ರಂದು ಗಿರ್ಗಾಂವ್‌ನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ವಿಚಾರಣೆ ಆರಂಭಿಸಿತ್ತು.

2018ರ ಸೆಪ್ಟೆಂಬರ್‌ನಲ್ಲಿ ರಾಹುಲ್‌ ರಾಜಸ್ಥಾನದಲ್ಲಿ ನಡೆಸಿದ ಸಮಾವೇಶವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ ಎಂಬುದು ದೂರುದಾರರ ಆರೋಪವಾಗಿದೆ. ಅವರ ಮಾತುಗಳಿಂದಾಗಿ ಮೋದಿ ಅವರನ್ನು ವಿವಿಧ ಸುದ್ದಿ ವಾಹಿನಿಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್‌ ಮಾಡಲಾಯಿತು.

ವೀಡಿಯೊವೊಂದರ ಬಗ್ಗೆ ಉಲ್ಲೇಖಿಸಿ ʼಭಾರತದ ಕಮಾಂಡರ್‌ ಇನ್‌ ಥೀಫ್‌ ಬಗ್ಗೆ ಕರಾಳ ವಾಸ್ತವವೊಂದಿದೆʼ ಎಂದು ರಾಹುಲ್‌ ಟ್ವೀಟ್‌ ಮಾಡಿದ್ದರು. “ಮೋದಿ ಅವರನ್ನು 'ಕಮಾಂಡರ್‌ ಇನ್‌ ಥೀಫ್‌' ಎಂದು ಕರೆಯುವ ಮೂಲಕ ರಾಹುಲ್‌ ಅವರು ಬಿಜೆಪಿಯ ಎಲ್ಲಾ ಸದಸ್ಯರು ಮತ್ತು ಮೋದಿ ಅವರೊಂದಿಗೆ ಸಂಪರ್ಕದಲ್ಲಿರುವ ಎಲ್ಲಾ ಭಾರತೀಯ ನಾಗರಿಕರ ವಿರುದ್ಧ ನೇರ ಕಳ್ಳತನದ ಆರೋಪ ಮಾಡಿದ್ದಾರೆ” ಎಂದು ದೂರುದಾರರು ಆರೋಪಿಸಿದ್ದಾರೆ.

ಆದರೆ ವಕೀಲ ಕುಶಾಲ್ ಮೋರೆ ಅವರ ಮೂಲಕ ಸಲ್ಲಿಸಿದ ರಿಟ್ ಅರ್ಜಿಯಲ್ಲಿ ರಾಹುಲ್‌ ಅವರು “ದೂರುದಾರರ ಸುಪ್ತ ರಾಜಕೀಯ ಅಜೆಂಡಾವನ್ನು ಮುಂದುವರೆಸುವ ಏಕೈಕ ಉದ್ದೇಶದಿಂದ ಪ್ರೇರೇಪಿತವಾದ ಈ ದೂರು ಕ್ಷುಲ್ಲಕ ಮತ್ತು ಹತಾಶೆಯ ದಾವೆಗೆ ಶ್ರೇಷ್ಠ ಉದಾಹರಣೆಯಾಗಿದೆ” ಎಂದು ಹೇಳಿದ್ದಾರೆ.

“ಕೆಳ ಹಂತದ ನ್ಯಾಯಾಲಯ ನೀಡಿರುವ ಆದೇಶ ಯಾಂತ್ರಿಕ ಸ್ವರೂಪದ್ದಾಗಿದ್ದು ವ್ಯಕ್ತಿಯ ವಿರುದ್ಧ ಪ್ರಕ್ರಿಯೆ ನೀಡಲು ಅಗತ್ಯವಿರುವ ಕನಿಷ್ಠ ತಾರ್ಕಿಕತೆಯನ್ನು ಹೊಂದಿಲ್ಲ. ಮಾನಹಾನಿಗೊಳಗಾದ ವ್ಯಕ್ತಿ ಮಾತ್ರ ಮಾನನಷ್ಟ ಮೊಕದ್ದಮೆ ಪ್ರಾರಂಭಿಸಬಹುದಾಗಿದ್ದು ಪ್ರಸ್ತುತ ಪ್ರಕರಣ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 499ರ ವಿನಾಯಿತಿಯೊಳಗೆ ಬರುವುದರಿಂದ ದೂರುದಾರರಿಗೆ ದೂರು ಸಲ್ಲಿಸಲು ಯಾವುದೇ ಅವಕಾಶವಿಲ್ಲ” ಎಂದು ಅವರು ವಾದಿಸಿದ್ದಾರೆ.

ಮ್ಯಾಜಿಸ್ಟ್ರೇಟ್ ಆದೇಶವನ್ನು ರದ್ದುಗೊಳಿಸುವಂತೆಯೂ ರಾಹುಲ್‌ ಪ್ರಾರ್ಥಿಸಿದ್ದು ಮಧ್ಯಂತರ ಅರ್ಜಿಯಲ್ಲಿ ಅವರು ವಿಚಾರಣೆಗೆ ತಡೆ ಕೋರಿದ್ದಾರೆ.

ರಾಹುಲ್‌ ಪರ ವಾದ ಮಂಡಿಸುತ್ತಿರುವ ಮತ್ತೊಬ್ಬ ವಕೀಲರಾದ,‌ ಸುದೀಪ್ ಪಾಸ್ಬೋಲಾ ಅವರು ಮತ್ತೊಂದು ನ್ಯಾಯಾಲಯದಲ್ಲಿ ವಿಚಾರಣೆಯೊಂದರಲ್ಲಿ ಭಾಗಿಯಾಗಿದ್ದ ಕಾರಣ ಕಲಾಪಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಎಸ್‌ ಕೆ ಶಿಂಧೆ ಅವರು ನವೆಂಬರ್ 22, 2021ಕ್ಕೆ ಪ್ರಕರಣ ಮುಂದೂಡಿದರು.