Jharkhand High Court with Rahul Gandhi Facebook
ಸುದ್ದಿಗಳು

ಅಮಿತ್ ಶಾ ಕುರಿತ ಹೇಳಿಕೆ: ಜಾರ್ಖಂಡ್ ಹೈಕೋರ್ಟ್ ಮೆಟ್ಟಿಲೇರಿದ ರಾಹುಲ್

ಮೇ 22 ರಂದು ಚೈಬಾಸಾದ ವಿಶೇಷ ನ್ಯಾಯಾಲಯ ರಾಹುಲ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿತ್ತು.

Bar & Bench

ಕೇಂದ್ರ ಗೃಹ ಸಚಿವ, ಬಿಜೆಪಿ ರಾಷ್ಟ್ರೀಯ ಘಟಕದ ಮಾಜಿ ಅಧ್ಯಕ್ಷ ಅಮಿತ್ ಶಾ ಅವರನ್ನು ಕೊಲೆಗಾರ ಎಂದು ಕರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ವಿರುದ್ಧ ಚೈಬಾಸಾದ ಜನಪ್ರತಿನಿಧಿಗಳ ನ್ಯಾಯಾಲಯ ಹೊರಡಿಸಿದ ಜಾಮೀನು ರಹಿತ ವಾರಂಟ್‌ ಪ್ರಶ್ನಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜಾರ್ಖಂಡ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಚೈಬಾಸಾ ನ್ಯಾಯಾಲಯ ಹೊರಡಿಸಿರುವ ಎರಡನೇ ಜಾಮೀನು ರಹಿತ ವಾರಂಟ್ ಇದಾಗಿದ್ದು ಜೂನ್ 26 ರಂದು ತನ್ನ ಮುಂದೆ ಹಾಜರಾಗುವಂತೆ ಗಾಂಧಿಯವರಿಗೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ.

ಫೆಬ್ರವರಿ 27 ರಂದು, ವಿಚಾರಣೆಗೆ ಹಾಜರಾಗದ ರಾಹುಲ್ ಗಾಂಧಿ ವಿರುದ್ಧ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ಆದೇಶವನ್ನು ರಾಹುಲ್‌ ಜಾರ್ಖಂಡ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು, ನಂತರ ನ್ಯಾಯಾಲಯ ವಾರಂಟ್‌ಗೆ ತಡೆ ನೀಡಿತ್ತು.

ಜಾರ್ಖಂಡ್‌ನಲ್ಲಿ ಮಾರ್ಚ್ 18, 2018ರಂದು ನಡೆದಿದ್ದ ಸಭೆಯೊಂದರಲ್ಲಿ ಬಿಜೆಪಿಯನ್ನು ಟೀಕಿಸುವ ಭಾಷಣವನ್ನು ಗಾಂಧಿ ಮಾಡಿದ್ದಾರೆ ಎಂದು ದೂರು ದಾಖಲಾಗಿತ್ತು. ಬಿಜೆಪಿಯ ನಾಯಕರು ಅಧಿಕಾರದಿಂದ ಮದೋನ್ಮತ್ತರಾಗಿದ್ದಾರೆ. ಬಿಜೆಪಿಯ ಕಾರ್ಯಕರ್ತರು ಓರ್ವ ಕೊಲೆಗಾರನನ್ನು ತಮ್ಮ ಪಕ್ಷದ ಅಧ್ಯಕ್ಷರನ್ನಾಗಿ ಒಪ್ಪಿಕೊಂಡಿದ್ದಾರೆ ಎಂದಿದ್ದಾರೆ. ಮೇಲುನೋಟಕ್ಕೆ ರಾಹುಲ್‌ ಗಾಂಧಿಯವರು ಮಾನಹಾನಿಕರ ಹೇಳಿಕೆ ನೀಡಿದ್ದಾರೆ ಎನ್ನುವುದನ್ನು ಇದು ಸೂಚಿಸುತ್ತದೆ ಎಂದು ನ್ಯಾಯಾಲಯ ಹೇಳಿತ್ತು.