Rahul Gandhi and Supreme Court 
ಸುದ್ದಿಗಳು

ಮೋದಿ ಉಪನಾಮ ಹೇಳಿಕೆ: ಶಿಕ್ಷೆಗೆ ತಡೆ ನೀಡದ ಗುಜರಾತ್ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ರಾಹುಲ್‌

ಶಿಕ್ಷೆಗೆ ತಡೆ ನೀಡುವುದು ನಿಯಮವಲ್ಲ, ಅದನ್ನು ಅಪರೂಪದ ಪ್ರಕರಣಗಳಲ್ಲಿ ಪ್ರಯೋಗಿಸಬೇಕು ಎಂದು ಗುಜರಾತ್‌ ಹೈಕೋರ್ಟ್‌ನ ನ್ಯಾ. ಹೇಮಂತ್ ಪ್ರಚ್ಚಕ್ ಅವರ ನೇತೃತ್ವದ ಏಕಸದಸ್ಯ ಪೀಠ ಜುಲೈ 7ರ ಆದೇಶದಲ್ಲಿ ಹೇಳಿತ್ತು.

Bar & Bench

ʼಎಲ್ಲಾ ಕಳ್ಳರಿಗೂ ಮೋದಿ ಉಪನಾಮ ಏಕೆ ಇದೆʼ ಎಂದು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ತಪ್ಪಿತಸ್ಥರು ಎಂದು ಪ್ರಕಟಿಸಿ ಅವರಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದ್ದ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಲು ನಿರಾಕರಿಸಿದ್ದ ಗುಜರಾತ್‌ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ರಾಹುಲ್‌ ಗಾಂಧಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ [ರಾಹುಲ್‌ ಗಾಂಧಿ ವರ್ಸಸ್‌ ಪೂರ್ಣೇಶ್‌ ಮೋದಿ].

ಶಿಕ್ಷೆಗೆ ತಡೆ ನೀಡುವುದು ನಿಯಮವಲ್ಲ, ಅದನ್ನು ಅಪರೂಪದ ಪ್ರಕರಣಗಳಲ್ಲಿ ಪ್ರಯೋಗಿಸಬೇಕು ಎಂದು ಗುಜರಾತ್‌ ಹೈಕೋರ್ಟ್‌ನ ನ್ಯಾಯಮೂರ್ತಿ ಹೇಮಂತ್ ಪ್ರಚ್ಚಕ್ ಅವರ ನೇತೃತ್ವದ ಏಕಸದಸ್ಯ ಪೀಠ ಜುಲೈ 7ರ ಆದೇಶದಲ್ಲಿ ಹೇಳಿತ್ತು.

2019 ರಲ್ಲಿ ಕರ್ನಾಟಕದ ಕೋಲಾರ ಕ್ಷೇತ್ರದಲ್ಲಿ ಚುನಾವಣಾ ಸಮಾವೇಶದ ವೇಳೆ ಅವರು "ಎಲ್ಲಾ ಕಳ್ಳರಿಗೂ ಮೋದಿ ಉಪನಾಮ ಏಕೆ ಇದೆ?” ಎಂದು ಹೇಳಿಕೆ ನೀಡಿದ್ದರು. ಇದನ್ನು ಪೂರ್ಣೇಶ್‌ ಮೋದಿ ಎಂಬ ಬಿಜೆಪಿ ನಾಯಕ ಸೂರತ್‌ನ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಮೋದಿ ಉಪನಾಮ ಉಳ್ಳವರನ್ನೆಲ್ಲಾ ರಾಹುಲ್‌ ಅವಮಾನಿಸಿದ್ದಾರೆ ಎಂಬುದು ಅವರ ದೂರಿನ ಸಾರವಾಗಿತ್ತು.

ದೂರನ್ನು ಪುರಸ್ಕರಿಸಿದ್ದ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ರಾಹುಲ್‌ ಗಾಂಧಿ ದೋಷಿ ಎಂದು ಘೋಷಿಸಿ, ಎರಡು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಇದಕ್ಕೆ ತಡೆ ನೀಡಲು ಸೂರತ್‌ನ ಸತ್ರ ನ್ಯಾಯಾಲಯ ನಿರಾಕರಿಸಿತ್ತು. ಅದಕ್ಕೆ ಗುಜರಾತ್‌ ಹೈಕೋರ್ಟ್‌ ಅಸ್ತು ಎಂದಿತ್ತು. ಈಗ ಹೈಕೋರ್ಟ್‌ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ.