ಸುದ್ದಿಗಳು

ಅಶ್ಲೀಲ ಚಿತ್ರ ಪ್ರಕರಣ: ಬಂಧನ ಪ್ರಶ್ನಿಸಿ ಬಾಂಬೆ ಹೈಕೋರ್ಟ್‌ ಮೆಟ್ಟಿಲೇರಿದ ರಾಜ್‌ ಕುಂದ್ರಾ

Bar & Bench

ಅಶ್ಲೀಲ ಸಿನಿಮಾ ದಂಧೆ ಆರೋಪದಲ್ಲಿ ಬಂಧನ ಮಾಡಿರುವುದು ಮತ್ತು ಆನಂತರದ ಮುಂಬೈ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಆದೇಶಗಳನ್ನು ಪ್ರಶ್ನಿಸಿ ಉದ್ಯಮಿ ಹಾಗೂ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್‌ ಕುಂದ್ರಾ ಬಾಂಬೆ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದಾರೆ. ತಮ್ಮ ವಿರುದ್ಧದ ಆರೋಪಗಳನ್ನು ವಜಾ ಮಾಡುವುದಲ್ಲದೇ ತಕ್ಷಣ ಬಂಧನದಿಂದ ಮುಕ್ತಗೊಳಿಸುವಂತೆ ಕುಂದ್ರಾ ಮನವಿಯಲ್ಲಿ ಕೋರಿದ್ದಾರೆ.

ಕುಂದ್ರಾ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 292, 293 (ಅಶ್ಲೀಲ ವಿಷಯ ಸಾಮಗ್ರಿಗಳ ಮಾರಾಟ), ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್‌ಗಳಾದ 67, 67ಎ ಅಡಿ (ಲೈಂಗಿಕ ಚಟುವಟಿಕೆಗೆ ಸಂಬಂಧಿಸಿದ ವಿಷಯ ಸಾಮಗ್ರಿ ವರ್ಗಾವಣೆ) ಮತ್ತು ಮಹಿಳೆಯರನ್ನು ಅಶ್ಲೀಲವಾಗಿ ಬಿಂಬಿಸುವುದನ್ನು ನಿಯಂತ್ರಿಸುವ ಕಾಯಿದೆ ಅಡಿ ದೂರು ದಾಖಲಿಸಲಾಗಿದೆ.

ಕುಂದ್ರಾ ಅವರನ್ನು ಸೋಮವಾರ ಬಂಧಿಸಿದ್ದ ಮುಂಬೈ ಪೊಲೀಸರು ಅವರನ್ನು ಎಸ್ಪ್ಲನೇಡ್‌ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಎದುರು ಹಾಜರುಪಡಿಸಿದ್ದರು. ನ್ಯಾಯಾಲಯವು ಅವರನ್ನು ಜುಲೈ 23ರವರೆಗೆ ಪೊಲೀಸ್‌ ವಶಕ್ಕೆ ನೀಡಿತ್ತು. ಶುಕ್ರವಾರ ಕುಂದ್ರಾ ಅವರ ಬಂಧನ ಅವಧಿಯನ್ನು ಜುಲೈ 27ರ ವರೆಗೆ ವಿಸ್ತರಿಸಿ ಮ್ಯಾಜಿಸ್ಟ್ರೇಟ್‌ ಆದೇಶಿಸಿದ್ದಾರೆ.

ಕುಂದ್ರಾ ವಿರುದ್ಧದ ಆರೋಪಗಳು ಸಾಬೀತಾದರೆ ಅವರಿಗೆ ಗರಿಷ್ಠ ಏಳು ವರ್ಷಗಳ ಶಿಕ್ಷೆ ವಿಧಿಸಬಹುದಾಗಿದೆ ಎಂದು ಕುಂದ್ರಾ ಪರ ಮನವಿ ಸಲ್ಲಿಸಿರುವ ಪರಿಣಾಮ್‌ ಲಾ ಅಸೋಸಿಯೇಟ್ಸ್‌ ಹೇಳಿದೆ.

ಕಾನೂನಿಗೆ ವಿರುದ್ಧವಾಗಿ ಮತ್ತು ಅರ್ನೀಸ್‌ ಕುಮಾರ್‌ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌ ರೂಪಿಸಿರುವ ಮಾರ್ಗಸೂಚಿಗೆ ವಿರುದ್ಧವಾಗಿ ಕುಂದ್ರಾ ಅವರನ್ನು ಬಂಧಿಸಲಾಗಿದ್ದು, ಇದು ಸಂಪೂರ್ಣವಾಗಿ ಕಾನೂನುಬಾಹಿರ ಎಂದು ವಾದಿಸಲಾಗಿದೆ. ಅರ್ನೀಸ್‌ ಕುಮಾರ್‌ ಪ್ರಕರಣದ ತೀರ್ಪಿನ ಪ್ರಕಾರ ಸಿಆರ್‌ಪಿಸಿ ಸೆಕ್ಷನ್‌ 41ಎ ಅಡಿ ನೋಟಿಸ್‌ ನೀಡುವುದು ಕಡ್ಡಾಯ ಎಂಬುದನ್ನು ಮ್ಯಾಜಿಸ್ಟ್ರೇಟ್‌ ಗಣನೆಗೆ ತೆಗೆದುಕೊಂಡಿಲ್ಲ ಎಂದು ವಾದಿಸಲಾಗಿದೆ.