ಸುದ್ದಿಗಳು

ಕೆಎಸ್‌ಬಿಸಿ ಅಧ್ಯಕ್ಷರಾಗಿ ರಾಜಣ್ಣ, ಉಪಾಧ್ಯಕ್ಷರಾಗಿ ಶಿವಮೂರ್ತಿ ಆಯ್ಕೆ; ವಕೀಲ ಧನಂಜಯ ಬಿಸಿಐ ನಾಮನಿರ್ದೇಶಿತ ಸದಸ್ಯ

ರಾಜಣ್ಣ 15, ಶಿವಮೂರ್ತಿ 17 ಮತ್ತು ಧನಂಜಯ ಅವರು 15 ಮತ ಪಡೆಯುವ ಮೂಲಕ ತಮ್ಮ ಸಮೀಪ ಸ್ಪರ್ಧಿಗಳನ್ನು ಪರಾಭವಗೊಳಿಸಿದರು.

Bar & Bench

ಕರ್ನಾಟಕ ರಾಜ್ಯ ವಕೀಲರ ಪರಿಷತ್‌ (ಕೆಎಸ್‌ಬಿಸಿ) ಅಧ್ಯಕ್ಷರಾಗಿ ವಕೀಲರಾದ ರಾಜಣ್ಣ ಆರ್‌ ಮತ್ತು ಉಪಾಧ್ಯಕ್ಷರಾಗಿ ಶಿವಮೂರ್ತಿ ಮತ್ತು ಭಾರತೀಯ ವಕೀಲರ ಪರಿಷತ್‌ ನಾಮನಿರ್ದೇಶಿತ ಸದಸ್ಯರಾಗಿ ಧನಂಜಯ ಸಿ ಎಂ ಆಯ್ಕೆಯಾಗಿದ್ದಾರೆ.

ಕೆಎಸ್‌ಬಿಸಿಯಲ್ಲಿ ಬುಧವಾರ ನಡೆದ ಚುನಾವಣೆಯಲ್ಲಿ ರಾಜಣ್ಣ ಅವರು 15 ಮತ ಪಡೆದು ತಮ್ಮ ಸಮೀಪ ಸ್ಪರ್ಧಿ ಎನ್‌ ದೇವರಾಜ್‌ (11 ಮತ) ಅವರನ್ನು ಆರು ಮತಗಳಿಂದ ಸೋಲಿಸಿದರು.

ಉಪಾಧ್ಯಕ್ಷರ ಚುನಾವಣೆಯಲ್ಲಿ ಶಿವಮೂರ್ತಿ ಅವರು ಗರಿಷ್ಠ 17 ಮತ ಪಡೆಯುವ ಮೂಲಕ ಸಮೀಪ ಸ್ಪರ್ಧಿ ಶೈಲಜಾ ಅವರನ್ನು ಆರು ಮತಗಳಿಂದ ಪರಾಭವಗೊಳಿಸಿದರು.

ಬಿಸಿಐ ನಾಮನಿರ್ದೇಶನ ಸದಸ್ಯತ್ವಕ್ಕೆ ನಡೆದ ಚುನಾವಣೆಯಲ್ಲಿ 15 ಮತಗಳನ್ನು ಪಡೆದ ವಕೀಲ ಧನಂಜಯ ಸಿ ಎಂ ಅವರು ಎನ್‌ ಶಿವಕುಮಾರ್‌ ಅವರನ್ನು ನಾಲ್ಕು ಮತಗಳಿಂದ ಸೋಲಿಸಿದರು. ಶಿವಕುಮಾರ್‌ 11 ಮತ ಪಡೆದು ಹಿನ್ನಡೆ ಅನುಭವಿಸಿದರು.

ಚುನಾವಣೆಯಲ್ಲಿ 23 ಚುನಾಯಿತ ಸದಸ್ಯರು, ಹೈಕೋರ್ಟ್‌ನಿಂದ ನೇಮಕವಾಗಿರುವ ಸಹ ಸದಸ್ಯರು ಹಾಗೂ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಸೇರಿ 26 ಮಂದಿ ಮತದಾನ ಮಾಡಿದರು.

ನೂತನವಾಗಿ ಚುನಾಯಿತವಾಗಿರುವ ಅಧ್ಯಕ್ಷ, ಉಪಾಧ್ಯಕ್ಷರ ಅವಧಿಯು ಎರಡು ವರ್ಷಗಳಿರಲಿವೆ.

ಸುಪ್ರೀಂ ಕೋರ್ಟ್‌ ಮಾರ್ಚ್‌ 15ರ ಒಳಗೆ ಕೆಎಸ್‌ಬಿಸಿಗೆ ಚುನಾವಣೆ ನಡೆಸುವಂತೆ ನಿರ್ದೇಶಿಸಿದ್ದ ಹಿನ್ನೆಲೆಯಲ್ಲಿ ಮಾರ್ಚ್‌ 11ರಂದು 23 ಸದಸ್ಯರ ಆಯ್ಕೆಗೆ ಚುನಾವಣೆ ನಡೆದಿತ್ತು. 149 ಮಂದಿ ವಕೀಲರು ಸ್ಪರ್ಧಾ ಕಣದಲ್ಲಿದ್ದರು.

ಸುಪ್ರೀಂ ಕೋರ್ಟ್‌ ನಿರ್ದೇಶನದ ಅನ್ವಯ ಮೀಸಲಾತಿ ನಿಗದಿಪಡಿಸಿರುವುದರಿಂದ ಇದೇ ಪ್ರಥಮ ಬಾರಿಗೆ ಐವರು ಮಹಿಳಾ ಸದಸ್ಯರು ಕೆಎಸ್‌ಬಿಎಸ್‌ಗೆ ಆಯ್ಕೆಯಾಗಿರುವುದು ಐತಿಹಾಸಿಕ ಬೆಳವಣಿಗೆಯಾಗಿದೆ.

ನೈಜ ಮತದಾರರ ವಕೀಲರನ್ನು ಗುರುತಿಸುವ ಪ್ರಕ್ರಿಯೆಯಿಂದಾಗಿ ಕೆಎಸ್‌ಬಿಸಿಗೆ ಚುನಾವಣೆ ನಡೆದಿರಲಿಲ್ಲ.