ರಾಜಸ್ಥಾನ ಕಾನೂನುಬಾಹಿರ ಮತಾಂತರ ನಿಷೇಧ ಮಸೂದೆ- 2025ಅನ್ನು ವಿಧಾನಸಭೆಯಲ್ಲಿ ರಾಜಸ್ಥಾನ ಸರ್ಕಾರ ಫೆಬ್ರವರಿ 3ರಂದು ಮಂಡಿಸಿದೆ.
ತಪ್ಪು ಚಿತ್ರಣ ನೀಡುವುದು, ಬಲಪ್ರಯೋಗ, ವಂಚನೆ, ಅನುಚಿತ ಪ್ರಭಾವ ಅಥವಾ ಪ್ರಲೋಭನೆ ಮೂಲಕ ಮತಾಂತರ ಮಾಡುವುದನ್ನು ಮಸೂದೆ ನಿಷೇಧಿಸುತ್ತದೆ.
ಮಸೂದೆ 16 ಸೆಕ್ಷನ್‌ಗಳನ್ನು ಒಳಗೊಂಡಿದೆ. ತಪ್ಪಿತಸ್ಥರೆಂದು ಸಾಬೀತಾದ ವ್ಯಕ್ತಿಗೆ 1ರಿಂದ 5 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಕನಿಷ್ಠ ₹15,000 ದಂಡ ವಿಧಿಸಲಾಗುತ್ತದೆ. ಮತಾಂತರಕ್ಕೆ ಅಪ್ರಾಪ್ತ ವಯಸ್ಕ, ಮಹಿಳೆ ಅಥವಾ ಪರಿಶಿಷ್ಟ ಜಾತಿ ಇಲ್ಲವೇ ಪರಿಶಿಷ್ಟ ಪಂಗಡದ ವ್ಯಕ್ತಿಯನ್ನು ಬಳಸಿದ್ದರೆ, 2ರಿಂದ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಕನಿಷ್ಠ ₹25,000 ದಂಡ ವಿಧಿಸಲಾಗುತ್ತದೆ.
ಮತಾಂತರ ಸ್ವಯಂಪ್ರೇರಿತವಾಗಿ ನಡೆದಿದೆ ಎಂದು ಜಿಲ್ಲಾಧಿಕಾರಿ ಎದುರು 60 ದಿನಗಳೊಳಗೆ ಘೋಷಿಸಿಕೊಳ್ಳದೆ ಹೋದಲ್ಲಿ ಆರು ತಿಂಗಳಿಂದ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಕನಿಷ್ಠ ₹10,000 ದಂಡ ತೆರಬೇಕಾಗುತ್ತದೆ.
ಮತ್ತೊಂದೆಡೆ ಮತಾಂತರ ಸಮಾರಂಭವನ್ನು ನಿರ್ವಹಿಸುವ ವ್ಯಕ್ತಿ ಕಾರ್ಯಕ್ರಮದ ಕುರಿತು ಕನಿಷ್ಠ ಒಂದು ತಿಂಗಳ ಮೊದಲು ಜಿಲ್ಲಾಡಳಿತಕ್ಕೆ ಮಾಹಿತಿ ನೀಡದೆ ಹೋದರೆ ಒಂದರಿಂದ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಕನಿಷ್ಠ ₹25,000 ದಂಡ ಪಾವತಿಸಬೇಕಾಗುತ್ತದೆ.
ಮತಾಂತರಗೊಂಡ ವ್ಯಕ್ತಿ ತಮ್ಮ ಗುರುತನ್ನು ಪರಿಶೀಲಿಸಲು ಮತ್ತು ಘೋಷಣೆಯನ್ನು ದೃಢೀಕರಿಸಲು 21 ದಿನಗಳ ಒಳಗೆ ಜಿಲ್ಲಾಧಿಕಾರಿ ಮುಂದೆ ಖುದ್ದು ಹಾಜರಾಗಬೇಕು. ನಂತರ ವಿವರಗಳನ್ನು ಅಧಿಕೃತ ರಿಜಿಸ್ಟರ್‌ನಲ್ಲಿ ದಾಖಲಿಸಲಾಗುತ್ತದೆ. ಈ ಅವಶ್ಯಕತೆ ಈಡೇರಿಸದಿದ್ದರೆ ಮತಾಂತರ ಕಾನೂನುಬಾಹಿರ ಮತ್ತು ಅನೂರ್ಜಿತವಾಗುತ್ತದೆ.
ಇದಲ್ಲದೆ, ಸೆಕ್ಷನ್ 12ರ ಪ್ರಕಾರ ತಪ್ಪು ಚಿತ್ರಣ, ಬಲವಂತ, ಅನಗತ್ಯ ಪ್ರಲೋಭನೆ, ಆಮಿಷ, ವಂಚನೆ ಅಥವಾ ವಿವಾಹವಾಗುವ ಭರವಸೆ ಮುಂತಾದ ಆಮಿಷಗಳನ್ನು ಒಡ್ಡದೆ ಮತಾಂತರವನ್ನು ಸ್ವಯಂಪ್ರೇರಣೆಯಿಂದ ನಡೆಸಲಾಗಿದೆ ಎಂದು ಸಾಬೀತುಪಡಿಸುವ ಜವಾಬ್ದಾರಿ ಮತಾಂತರ ನಡೆಸಿದ ವ್ಯಕ್ತಿಯ ಮೇಲೆ ಇರುತ್ತದೆ. ಬೇರೆ ವ್ಯಕ್ತಿ ಮತಾಂತರಕ್ಕೆ ಅನುಕೂಲ ಮಾಡಿಕೊಟ್ಟಿದ್ದರೆ, ಅವರು ಕೂಡ ಪುರಾವೆ ಒದಗಿಸುವ ಜವಾಬ್ದಾರಿ ಹೊರಬೇಕಾಗುತ್ತದೆ ಎಂದು ಅದು ಹೇಳುತ್ತದೆ.
ಪ್ರಸ್ತಾವಿತ ಕಾನೂನಿನಡಿಯಲ್ಲಿ ಕೈಗೊಳ್ಳಲಾದ ಯಾವುದೇ ಕೃತ್ಯಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವುದರಿಂದ ಮಸೂದೆಯ 13ನೇ ಸೆಕ್ಷನ್ ವಿನಾಯಿತಿ ನೀಡುತ್ತದೆ.