Live-in Relationship   indianewsnet.com
ಸುದ್ದಿಗಳು

ಲಿವ್ ಇನ್ ಸಂಬಂಧಗಳಲ್ಲಿ ಒಪ್ಪಂದ ಮಾಡಿಕೊಳ್ಳುವುದನ್ನು ಕಡ್ಡಾಯಗೊಳಿಸಿ ಮಹತ್ವದ ತೀರ್ಪಿತ್ತ ರಾಜಸ್ಥಾನ ಹೈಕೋರ್ಟ್

ಸಹ ಜೀವನ ನಡೆಸುತ್ತಿರುವ ಜೋಡಿ ತಮ್ಮ ಸಂಬಂಧದಿಂದ ಹುಟ್ಟುವ ಮಕ್ಕಳ ಪಾಲನೆಗಾಗಿ ರೂಪಿಸಿಕೊಂಡಿರುವ ಯೋಜನೆ ನಮೂದಿಸಬೇಕಾದಂತಹ ವ್ಯವಸ್ಥೆ ಜಾರಿಗೆ ತರಲು ನ್ಯಾಯಾಲಯ ಆದೇಶಿಸಿದೆ.

Bar & Bench

ಮಹತ್ವದ ತೀರ್ಪೊಂದರಲ್ಲಿ ರಾಜಸ್ಥಾನ ಹೈಕೋರ್ಟ್‌, ಸಹಜೀವನ ಸಂಬಂಧದಲ್ಲಿರುವವರು ತಮ್ಮ ಸಂಬಂಧ ಕುರಿತು ಒಪ್ಪಂದಕ್ಕೆ ಬಂದು ಅದನ್ನು ನೋಂದಾಯಿಸಿಕೊಳ್ಳುವುದನ್ನು ಕಡ್ಡಾಯಗೊಳಿಸುವಂತೆ ಸರ್ಕಾರಿ ಅಧಿಕಾರಿಗಳಿಗೆ ಬುಧವಾರ ಆದೇಶಿಸಿದೆ.

ಸಹಜೀವನದಲ್ಲಿರುವ ಜೋಡಿ ತಮ್ಮ ಸಂಬಂಧದಿಂದ ಹುಟ್ಟುವ ಮಕ್ಕಳ ಪಾಲನೆಗಾಗಿ ಏನು ಯೋಜನೆ ರೂಪಿಸಿಕೊಂಡಿದ್ದೇವೆ ಎನ್ನುವುದನ್ನು ನಮೂದಿಸಬೇಕಾದಂತಹ ವ್ಯವಸ್ಥೆ ಜಾರಿಗೆ ತರುವಂತೆಯೂ ನ್ಯಾಯಮೂರ್ತಿ ಅನೂಪ್ ಕುಮಾರ್ ಧಂಡ್ ಆದೇಶಿಸಿದರು.

ಹಣ ಸಂಪಾದಿಸದೆ ಇರುವ ತನ್ನ ಸ್ತ್ರೀ ಸಂಗಾತಿಗೆ ಜೀವನಾಂಶವನ್ನು ಹೇಗೆ ಪಾವತಿಸಬೇಕು ಎಂಬುದರ ಕುರಿತಂತೆಯೂ ಒಪ್ಪಂದದಲ್ಲಿ ವಿವರಗಳಿರಬೇಕು ಎಂದು ನ್ಯಾಯಾಲಯ ತಾಕೀತು ಮಾಡಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾಯಿದೆ ರೂಪಿಸುವವರೆಗೆ ಈ ರೀತಿಯ ಒಪ್ಪಂದ ಕಡ್ಡಾಯಗೊಳಿಸುವಿಕೆಯನ್ನು ಪರಿಚಯಿಸುವ ಅಗತ್ಯವಿದೆ ಎಂದು ನ್ಯಾಯಾಲಯ ಹೇಳಿದೆ.

ಲಿವ್-ಇನ್ ಸಂಬಂಧ ಒಪ್ಪಂದವನ್ನು ಸರ್ಕಾರ ಸ್ಥಾಪಿಸಿದ ಸಕ್ಷಮ ಪ್ರಾಧಿಕಾರ/ನ್ಯಾಯಮಂಡಳಿ  ನೋಂದಾಯಿಸಿಕೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ. ತನ್ನ ಆದೇಶದ ಪ್ರತಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳಿಗೆ ಕಳಿಸುವಂತೆ ಸೂಚಿಸಿರುವ ನ್ಯಾಯಾಲಯ ಮಾರ್ಚ್ 1ರೊಳಗೆ ಆದೇಶ ಪಾಲನೆ ಕುರಿತಂತೆ ವರದಿ ಸಲ್ಲಿಸಲು ಸೂಚಿಸಿದೆ.

ಸುಪ್ರೀಂ ಕೋರ್ಟ್‌ ಲಿವ್‌ ಇನ್‌ ಸಂಬಂಧಗಳಿಗೆ ಮನ್ನಣೆ ನೀಡಿದ್ದರೂ ಅನೇಕರ ದೃಷ್ಟಿಯಲ್ಲಿ ಈ ಸಂಬಂಧ ಸ್ವೀಕಾರಾರ್ಹವಾಗಿಲ್ಲ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಲಿವ್-ಇನ್-ರಿಲೇಶನ್‌ಶಿಪ್ ಪರಿಕಲ್ಪನೆಯನ್ನು ಸಮಾಜವು ಅನೈತಿಕವೆಂದು ಪರಿಗಣಿಸಿದ್ದರೂ ಮತ್ತು ಸಾರ್ವಜನಿಕರು ಬಹುತೇಕವಾಗಿ ಅದನ್ನು ಸ್ವೀಕರಿಸದಿದ್ದರೂ, ಕಾನೂನಿನ ದೃಷ್ಟಿಯಲ್ಲಿ ಅದನ್ನು ಕಾನೂನುಬಾಹಿರವೆಂದು ಪರಿಗಣಿಸಲಾಗದು.
ರಾಜಸ್ಥಾನ ಹೈಕೋರ್ಟ್

ತಮ್ಮ ಸಂಬಂಧಿಕರಿಂದ ರಕ್ಷಣೆ ಕೋರಿ ಸಹ ಜೀವನ ಸಂಗಾತಿಗಳು ಸಲ್ಲಿಸುತ್ತಿರುವ ಅರ್ಜಿಗಳು ಸಾಂವಿಧಾನಿಕ ನ್ಯಾಯಾಲಯಗಳಲ್ಲಿ ತುಂಬಿ ತುಳುಕುತ್ತಿವೆ ಎಂತಲೂ ನ್ಯಾಯಾಲಯ ಹೇಳಿದ್ದು ಸಹ ಜೀವನ ಸಂಬಂಧಕ್ಕೆ ಕಾನೂನುಬದ್ಧತೆ ಇಲ್ಲವೇ ಅಂತಹ ಜೋಡಿಗೆ ಜನಿಸುವ ಮಕ್ಕಳಿಗೆ ರಕ್ಷಣೆ ನೀಡುವ ಸಂಬಂಧ ಪ್ರತ್ಯೇಕ ಕಾಯಿದೆ ರೂಪಿಸಿದರೆ ಎಲ್ಲಾ ಸಮಸ್ಯೆಗಳು ಬಗೆಹರಿಯಲಿದೆ ಎಂದು ನ್ಯಾಯಾಲಯ ಹೇಳಿದೆ.

ಲಿವ್‌-ಇನ್‌ ಸಂಬಂಧಗಳಿಂದ ಜನಿಸಿದ ಅಪ್ರಾಪ್ತ ಮಕ್ಕಳನ್ನು ಅವರ ಪೋಷಕರು, ವಿಶೇಷವಾಗಿ ತಂದೆ ಪೋಷಿಸಬೇಕು ಎಂದು ನಿರೀಕ್ಷಿಸಲಾಗುತ್ತದೆ, ಏಕೆಂದರೆ ಅಂತಹ ಸಂಬಂಧಗಳಿಂದ ಮಹಿಳೆಯರು ಸಹ ಹೆಚ್ಚಾಗಿ ತೊಂದರೆಗೀಡಾಗುತ್ತಾರೆ.
ರಾಜಸ್ಥಾನ ಹೈಕೋರ್ಟ್‌

ಸಹ ಜೀವನ ಸಂಬಂಧದ ವಿಚಾರವಾಗಿ ಎದ್ದಿರುವ ಕೆಲ ಕಾನೂನು ಪ್ರಶ್ನೆಗಳ ಸಂಬಂಧ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸುವುದು ಸೂಕ್ತ ಎಂದು ಸಹ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Reena___Anr__v__State_of_Rajasthan (1).pdf
Preview