ವೈದ್ಯಕೀಯ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿಯನ್ನು ಪೂರ್ವಾನ್ವಯವಾಗುವ ರೀತಿಯಲ್ಲಿ ರದ್ದುಗೊಳಿಸುವ ಅಧಿಕಾರ ವೈದ್ಯಕೀಯ ಮೌಲ್ಯಮಾಪನ ಮತ್ತು ಶ್ರೇಯಾಂಕ ಮಂಡಳಿಗೆ (ಎಂಎಆರ್‌ಬಿ) ಇಲ್ಲ ಎಂದು ರಾಜಸ್ಥಾನ ಹೈಕೋರ್ಟ್ ಈಚೆಗೆ ತೀರ್ಪು ನೀಡಿದೆ [ಗೀತಾಂಜಲಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಭಾರತ ಒಕ್ಕೂಟ ನಡುವಣ ಪ್ರಕರಣ].
ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್ಎಂಸಿ) ಕಾಯಿದೆಯಡಿ ಪ್ರವೇಶಾತಿಯನ್ನು ಕಡಿಮೆ ಮಾಡುವ ಅಥವಾ ಸ್ಥಗಿತಗೊಳಿಸುವುದಕ್ಕೆ ಸಂಬಂಧಿಸಿದಂತೆ ಇರುವ ಅಧಿಕಾರವನ್ನು ಪೂರ್ವಾನ್ವಯವಾಗುವಂತೆ ಪ್ರವೇಶಾತಿ ಕಡಿಮೆ ಮಾಡಬಹುದು ಇಲ್ಲವೇ ಸ್ಥಗಿತಗೊಳಿಸಬಹುದು ಎಂದು ಅರ್ಥೈಸುವಂತಿಲ್ಲ ಎಂಬುದಾಗಿ ನ್ಯಾ. ಅರುಣ್ ಮೊಂಗಾ ಅಭಿಪ್ರಾಯಪಟ್ಟರು.
"ಏಕೆಂದರೆ, ಅದು ಅಪಾಯಕಾರಿ ಪರಿಣಾಮಗಳಿಗೆ ಕಾರಣವಾಗಲಿದ್ದು ಎಲ್ಲಾ ರೀತಿಯಲ್ಲೂ ಪ್ರತಿಭಾನ್ವಿತರಾಗಿರುವ ವಿದ್ಯಾರ್ಥಿಗಳ ವೃತ್ತಿಜೀವನಕ್ಕೆ ಹಾನಿಯುಂಟು ಮಾಡುತ್ತದೆ. ಏನು ಆಗಿದೆಯೋ ಅದನ್ನು ರದ್ದುಪಡಿಸಲಾಗುವುದಿಲ್ಲವಾದರೂ, ಅದನ್ನು ತಕ್ಷಣದಿಂದ ನಿಲ್ಲಿಸಬಹುದು. ಒಂದೊಮ್ಮೆ ಪರಿಸ್ಥಿತಿಯ ಅಗತ್ಯವಿದ್ದರೆ ಭವಿಷ್ಯದಲ್ಲಿ ತಪ್ಪು ಶಾಶ್ವತವಾಗುವುದನ್ನು ತಡೆಯಬಹುದು. ಹೀಗಾಗಿ ಪ್ರವೇಶಾತಿಯನ್ನು ನಿರಾಕರಿಸುವ ಇಲ್ಲವೇ ಸ್ಥಗಿತಗೊಳಿಸುವ ಅಧಿಕಾರವನ್ನು ಎಂಎಆರ್‌ಬಿಗೆ ನೀಡಲಾಗಿದ್ದರೂ ಭವಿಷ್ಯದಲ್ಲಿ ಅನ್ವಯಿಸಲು ಸಾಧ್ಯವಾಗುವಂತೆ ಮಾತ್ರ ನೀಡಲಾಗಿದೆ" ಎಂದು ನ್ಯಾಯಾಲಯ ವಿವರಿಸಿದೆ.
ಮೂಲಸೌಕರ್ಯ ಮತ್ತು ಬೋಧಕವರ್ಗದ ಕೊರತೆಯಿಂದಾಗಿ ನಾಲ್ಕು ವೈದ್ಯಕೀಯ ಕಾಲೇಜುಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‌ಗಳ ವಿದ್ಯಾರ್ಥಿಗಳ ಪ್ರವೇಶಾತಿ ರದ್ದುಗೊಳಿಸುವ ಎಂಎಆರ್‌ಬಿ ನಿರ್ದೇಶನ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮೋಂಗಾ ಈ ತೀರ್ಪು ನೀಡಿದ್ದಾರೆ.
ವೈದ್ಯಕೀಯ ಶಿಕ್ಷಣದಲ್ಲಿ ಉನ್ನತ ಗುಣಮಟ್ಟ ಕಾಪಾಡಿಕೊಳ್ಳುವುದಕ್ಕಾಗಿ ಎಂಎಆರ್‌ಬಿ ಮತ್ತು ಎನ್ಎಂಸಿಯ ಪಾತ್ರವನ್ನು ಒತ್ತಿಹೇಳಿದ ನ್ಯಾಯಾಲಯ, ಅಸ್ತಿತ್ವದಲ್ಲಿರುವ ವೈದ್ಯಕೀಯ ಕಾಲೇಜುಗಳಿಗೆ ಅನುಮತಿ ನವೀಕರಿಸುವಾಗ ನಿಯಂತ್ರಕ ಸಂಸ್ಥೆಗಳು ಪ್ರಾಯೋಗಿಕ ವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದು ಒತ್ತಿಹೇಳಿತು.
ಪ್ರಸ್ತುತ ಪ್ರಕರಣದಲ್ಲಿ, ಎಂಎಆರ್‌ಬಿ ನಾಲ್ಕು ಕಾಲೇಜುಗಳ ಕೋರ್ಸ್‌ಗಳಿಗೆ ಅನುಮತಿ ಪತ್ರ ಹಿಂತೆಗೆದುಕೊಂಡಿದ್ದಲ್ಲದೆ, 2021-22ರ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳಿಗೆ ನೀಡಲಾದ ಪ್ರವೇಶಾತಿ ರದ್ದುಗೊಳಿಸುವ ಜೊತೆಗೆ ಈ ಸಂಸ್ಥೆಗಳ ಮಾನ್ಯತೆ ರದ್ದತಿಗೆ ಶಿಫಾರಸು ಮಾಡಿತ್ತು.
ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿಯನ್ನು ಪೂರ್ವಾನ್ವಯವಾಗಿ ರದ್ದುಗೊಳಿಸುವ ಅಧಿಕಾರ ಎಂಎಆರ್‌ಬಿಗೆ ಇಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ.
"ಎಲ್ಲಾ ವಿದ್ಯಾರ್ಥಿಗಳ ವೃತ್ತಿಜೀವನ ಮತ್ತು ಭವಿಷ್ಯವನ್ನು ಅಪಾಯಕ್ಕೆ ಸಿಲುಕಿಸುವಂತೆ ಪೂರ್ವಾನ್ವಯವಾಗುವ ರೀತಿಯಲ್ಲಿ ಎಂಎಆರ್‌ಬಿ ಈ ಆದೇಶ ಹೊರಡಿಸಿದೆ. ಆ ಮೂಲಕ, ಅದು ವೈದ್ಯಕೀಯ ಶಿಕ್ಷಣದ ಮಧ್ಯಭಾಗದಲ್ಲಿ ವಿದ್ಯಾರ್ಥಿಗಳ ಮೇಲೆ ತೂಗುಗತ್ತಿ ನೇತು ಹಾಕಿ ಅತಂತ್ರಗೊಳಿಸಿದೆ " ಎಂದು ಪೀಠ ನುಡಿದಿದೆ.
ಕಾಲೇಜುಗಳಿಗೆ ಆರ್ಥಿಕ ದಂಡ ವಿಧಿಸುವ ಅಥವಾ ಇತರ ದಂಡನಾತ್ಮಕ ಕ್ರಮಗಳಂತಹ ಇತರ ಆಯ್ಕೆಗಳನ್ನು ಎಂಎಆರ್‌ಬಿ ಅನ್ವೇಷಿಸಿಲ್ಲ. ಬದಲಿಗೆ ಪ್ರವೇಶಾತಿ ರದ್ದುಗೊಳಿಸುವ ಆದೇಶಗಳನ್ನು ಆಘಾತಕಾರಿಯಾಗಿ ಜಾರಿಗೊಳಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಶೋಕಾಸ್ ನೋಟಿಸ್‌ಗೆ ಪ್ರತಿಕ್ರಿಯೆಯಾಗಿ ಕಾಲೇಜುಗಳು ಸಲ್ಲಿಸಿದ ವಿವರವಾದ ಉತ್ತರವನ್ನು ಎಂಎಆರ್‌ಬಿ ಪರಿಗಣಿಸದಿರುವುದು ಕಳವಳಕಾರಿಯಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಪ್ರಶ್ನಾರ್ಹ ವಿದ್ಯಾರ್ಥಿಗಳ ಪ್ರವೇಶಾತಿಯನ್ನು ಉಳಿಸಿಕೊಳ್ಳುವುದಕ್ಕಾಗಿ ತಾನು ಈ ಹಿಂದೆ ನೀಡಿದ್ದ ಮಧ್ಯಂತರ ಆದೇಶಗಳನ್ನು ನ್ಯಾಯಾಲಯ ಶಾಶ್ವತಗೊಳಿಸಿತು. ಜೊತೆಗೆ ಪೂರ್ವಾನ್ವಯವಾಗುವಂತೆ ಪ್ರವೇಶಾತಿ ರದ್ದುಗೊಳಿಸಿದ್ದ ಎಂಎಆರ್‌ಬಿ ನಿರ್ಧಾರವನ್ನು ಪೀಠವು ಬದಿಗೆ ಸರಿಸಿತು.
[ತೀರ್ಪಿನ ಪ್ರತಿಯನ್ನು ಇಲ್ಲಿ ಓದಿ]