ಸುದ್ದಿಗಳು

ರಸ್ತೆಯಲ್ಲೇ ಹೆರಿಗೆ: ಮಹಿಳೆಗೆ ₹ 4 ಲಕ್ಷ ಪರಿಹಾರ ನೀಡುವಂತೆ ಕೇಂದ್ರ, ರಾಜ್ಯ ಸರ್ಕಾರಗಳಿಗೆ ರಾಜಸ್ಥಾನ ಹೈಕೋರ್ಟ್ ಆದೇಶ

Bar & Bench

ರಾಜ್ಯ ಸರ್ಕಾರದ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಯ ಅಮಾನವೀಯ ವರ್ತನೆಯ ಪರಿಣಾಮ ಎಂಟು ವರ್ಷಗಳ ಹಿಂದೆ 2016ರಲ್ಲಿ ರಸ್ತೆ ಮಧ್ಯದಲ್ಲಿಯೇ ಅವಳಿ ಮಕ್ಕಳನ್ನು ಹೆರುವಂತಾಗಿದ್ದ ಮಹಿಳೆಗೆ 4 ಲಕ್ಷ ರೂ ಪರಿಹಾರ ನೀಡುವಂತೆ ರಾಜಸ್ಥಾನ ಹೈಕೋರ್ಟ್ ಮಂಗಳವಾರ ಕೇಂದ್ರ ಸರ್ಕಾರ ಮತ್ತು ರಾಜಸ್ಥಾನ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ರಾಜಸ್ಥಾನದ ಖೇಡ್ಲಿಯ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಯ ಅಜಾಗರೂಕತೆ ಮತ್ತು ನಿರ್ಲಕ್ಷ್ಯದಿಂದಾಗಿ ಮಹಿಳೆ ಜನ್ಮವಿತ್ತ ಅವಳಿ ಮಕ್ಕಳು ಸಾವಿಗೀಡಾಗಿದ್ದವು ಎಂದು ನ್ಯಾಯಮೂರ್ತಿ ಅನೂಪ್ ಕುಮಾರ್ ಧಂಡ್ ತೀರ್ಪಿನ ವೇಳೆ ಹೇಳಿದ್ದಾರೆ.

ತಪ್ಪಿತಸ್ಥ ವ್ಯಕ್ತಿಗಳ ವಿರುದ್ಧ ಇಲಾಖಾ ವಿಚಾರಣೆಯನ್ನು ಕಾನೂನಿಗೆ ಅನುಗುಣವಾಗಿ ಮುಕ್ತಾಯಗೊಳಿಸುವಂತೆ ನ್ಯಾಯಾಲಯವು ಅಧಿಕಾರಿಗಳಿಗೆ ಇದೇ ವೇಳೆ ನಿರ್ದೇಶನ ನೀಡಿತು. ಘಟನೆಗೆ ಸಂಬಂಧಿಸಿದಂತೆ ಸರ್ಕಾರಗಳ ನಿಷ್ಕ್ರಿಯತೆಯನ್ನು ಅದು ಖಂಡಿಸಿತು.

ನ್ಯಾಯಮೂರ್ತಿ ಅನೂಪ್ ಕುಮಾರ್ ಧಂಡ್

ಗರ್ಭಿಣಿಯರಿಗೆ ಮೀಸಲಾಗಿರುವ ವಿವಿಧ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸುವಲ್ಲಿನ ನ್ಯೂನತೆಗಳನ್ನು ಪರಿಹರಿಸಲು ಜಂಟಿ ಉನ್ನತಾಧಿಕಾರ ಸಮಿತಿ ರಚಿಸುವಂತೆಯೂ ನ್ಯಾಯಾಲಯ ಇದೇ ವೇಳೆ ಆದೇಶಿಸಿದೆ.

ಘಟನೆಯ ಹಿನ್ನೆಲೆ: ಪ್ರಕರಣದಲ್ಲಿ ಸಂತ್ರಸ್ತೆಯಾದ ಅರ್ಜಿದಾರೆ ಫೂಲ್‌ಮತಿ ಅವರನ್ನು 2016ರಲ್ಲಿ ಹೆರಿಗೆಗೆ ದಾಖಲಿಸಿಕೊಳ್ಳಲು ಖೇಡ್ಲಿಯ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ನಿರಾಕರಿಸಿದ್ದರು. ಗರ್ಭಿಣಿ ಸ್ತ್ರೀಯರ ಅನುಕೂಲಕ್ಕಾಗಿ ನೀಡಲಾಗುವ 'ಮಮತಾ' ಕಾರ್ಡ್‌ ಅನ್ನು ಸಂತ್ರಸ್ತ ಮಹಿಳೆಯು ಹೊಂದಿಲ್ಲ ಎನ್ನುವ ಕಾರಣಕ್ಕೆ ಆಕೆಗೆ ದಾಖಲಾತಿ ನಿರಾಕರಿಸಲಾಗಿತ್ತು. ಇದರಿಂದಾಗಿ ಸಂತ್ರಸ್ತೆಯು ಏಪ್ರಿಲ್‌ 7, 2016ರಂದು ನಡುರಸ್ತೆಯಲ್ಲಿಯೇ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು.

ಆದರೆ, ಅವಳಿ ಮಕ್ಕಳಲ್ಲಿ ಒಂದು ಮಗುವು ಆಸ್ಪತ್ರೆಗೆ ಸಾಗಿಸುವ ವೇಳೆಯಲ್ಲಿಯೇ ಮೃತ ಪಟ್ಟರೆ ಮತ್ತೊಂದು ಮಗು ವೈದ್ಯಕೀಯ ಶುಶ್ರೂಷೆಯ ಅಲಭ್ಯತೆಯ ಕಾರಣಕ್ಕೆ ಮೃತ ಹೊಂದಿತು. ಇಡೀ ಮನುಕುಲವೇ ತಲೆತಗ್ಗಿಸುವ ಈ ಘಟನೆಯ ಬಗ್ಗೆ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಆಘಾತ ವ್ಯಕ್ತಪಡಿಸಿದೆ.

ಘಟನೆಯ ನಂತರ ಸಂತ್ರಸ್ತ ಅರ್ಜಿದಾರೆಯು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಹಾಗೂ ಗರ್ಭಿಣಿ ಮಹಿಳೆಯರ ಕಲ್ಯಾಣಕ್ಕಾಗಿ ಜಾರಿಗೊಳಿಸಲಾಗಿರುವ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಒತ್ತಾಯಿಸಿ 2016ರಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಘಟನೆಗೆ ಸಮುದಾಯ ಕೇಂದ್ರದ ಸಿಬ್ಬಂದಿಯ "ಅಜಾಗರೂಕತೆ ಹಾಗೂ ನಿರ್ಲಕ್ಷ್ಯದ ವರ್ತನೆ" ಕಾರಣವೆಂದು ಹೇಳಿದ ನ್ಯಾಯಾಲಯ, ಇಡೀ ಘಟನೆಯು "ಮಾನವೀಯತೆ ಸತ್ತಿರುವುದರ ದ್ಯೋತಕ" ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಘಟನೆಯ ಹಿನ್ನೆಲೆಯಲ್ಲಿ ಗರ್ಭಿಣಿಯರಿಗೆ ಹಾಗೂ ಶಿಶುಪಾಲನೆಗೆ ಇರುವ ವಿವಿಧ ಕಲ್ಯಾಣ ಯೋಜನೆಗಳ ಸಮರ್ಪಕ ಅನುಷ್ಠಾನದ ಬಗ್ಗೆ ನ್ಯಾಯಾಲಯವು ಒತ್ತಿ ಹೇಳಿದೆ. ಅಲ್ಲದೆ, ಅರೋಗ್ಯವು ರಾಜ್ಯ ಪಟ್ಟಿಗೆ ಸೇರುವ ವಿಷಯವಾಗಿದೆ ಎಂದು ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಯತ್ನಿಸಿದ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಲಯ ಕೇವಲ ಯೋಜನೆಗಳನ್ನು ರೂಪಿಸಿದರಷ್ಟೇ ಅದು ಸಮರ್ಪಕವಾಗಿ ಅನುಷ್ಠಾನಗೊಳ್ಳುವಂತೆ ರಾಜ್ಯ ಸರ್ಕಾರಗಳೊಂದಿಗೆ ಕೈಜೋಡಿಸಿ ನೋಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದೆ.

[ತೀರ್ಪಿನ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Phoolmati vs State Medical And Healthors.pdf
Preview