ರಾಜಸ್ಥಾನ ಹೈಕೋರ್ಟ್  
ಸುದ್ದಿಗಳು

ವೈವಾಹಿಕ ವ್ಯಾಜ್ಯ: ಕಕ್ಷಿದಾರರ ಗುರುತು ಮರೆಮಾಚಲು ರಿಜಿಸ್ಟ್ರಿ, ಕೌಟುಂಬಿಕ ನ್ಯಾಯಾಲಯಗಳಿಗೆ ರಾಜಸ್ಥಾನ ಹೈಕೋರ್ಟ್ ಆದೇಶ

ತನ್ನ ತಾಯಿಯ ಬಗ್ಗೆ ಇಬ್ಬರು ಅಪ್ರಾಪ್ತ ಪುತ್ರರಿಗೆ ಇರುವ ತಪ್ಪು ಕಲ್ಪನೆ ಮತ್ತು ಪೂರ್ವಾಗ್ರಹ ಪೀಡಿತ ವಿಚಾರಗಳನ್ನು ತೆಗೆದುಹಾಕುವುದಕ್ಕಾಗಿ ಮನೋವಿಜ್ಞಾನಿಗಳ ಬಳಿಗೆ ಆ ಮಕ್ಕಳನ್ನು ಕರೆದೊಯ್ಯುವಂತೆಯೂ ಪೀಠ ತಂದೆಗೆ ನಿರ್ದೇಶನ ನೀಡಿತು.

Bar & Bench

ವೈವಾಹಿಕ ವ್ಯಾಜ್ಯಗಳಲ್ಲಿ ಕಕ್ಷಿದಾರರ ಗುರುತುಗಳನ್ನು ಬಹಿರಂಗಪಡಿಸದಂತೆ ನೋಡಿಕೊಳ್ಳಬೇಕು ಎಂದು ರಾಜಸ್ಥಾನ ಹೈಕೋರ್ಟ್ ಇತ್ತೀಚೆಗೆ ತನ್ನ ರಿಜಿಸ್ಟ್ರಿ ಮತ್ತು ರಾಜ್ಯದ ಕೌಟುಂಬಿಕ ನ್ಯಾಯಾಲಯಗಳಿಗೆ ಆದೇಶಿಸಿದೆ. 

ಇಂತಹ ಪ್ರಕರಣಗಳಲ್ಲಿ ಗೌಪ್ಯತೆ ಕುರಿತ ಆತಂಕಗಳನ್ನು ಎತ್ತಿ ತೋರಿಸಿದ ನ್ಯಾ. ಅರುಣ್ ಮೊಂಗಾ ನ್ಯಾಯಾಲಯದ ಜಾಲತಾಣ ಮತ್ತು ಮೊಬೈಲ್‌ ಅಪ್ಲಿಕೇಷನ್‌ಗಳಲ್ಲಿ ಪಕ್ಷಕಾರರ ಹೆಸರು ಮರೆಮಾಚುವಂತೆ ರಿಜಿಸ್ಟ್ರಿಗೆ ಆದೇಶಿಸಿದರು.

ಮಕ್ಕಳನ್ನು ತಮ್ಮ ಸುಪರ್ದಿಗೆ ಪಡೆಯುವುದಕ್ಕೆ ಸಂಬಂಧಿಸಿದಂತೆ ದಂಪತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ಭವಿಷ್ಯದಲ್ಲಿ, ಹೈಕೋರ್ಟ್ ರಿಜಿಸ್ಟ್ರಿ ಮತ್ತು ಕೌಟುಂಬಿಕ ನ್ಯಾಯಾಲಯಗಳು ಜಾಗರೂಕರಾಗಿರಬೇಕು. ವೈವಾಹಿಕ ವ್ಯಾಜ್ಯಗಳಲ್ಲಿ ಪಕ್ಷಕಾರರ ಹೆಸರುಗಳನ್ನು ಎಕ್ಸ್‌ಎಕ್ಸ್‌ ಮತ್ತು ವೈವೈ ನಡುವಣ ಪ್ರಕರಣ ಎಂದು ಉಲ್ಲೇಖಿಸುವ ಮೂಲಕ ಅವರ ಗೌಪ್ಯತೆಯನ್ನು ಗೌರವಿಸಬೇಕು ಎಂದು ಪೀಠ ಹೇಳಿದೆ.

"ಇದನ್ನು ಪಾಲಿಸುವುದಕ್ಕಾಗಿ ಕುಟುಂಬ ನ್ಯಾಯಾಲಯಗಳಿಗೆ ಸೂಕ್ತ ಸುತ್ತೋಲೆ ಹೊರಡಿಸುವಂತೆ ರಿಜಿಸ್ಟ್ರಿಗೆ ನಿರ್ದೇಶಿಸಲಾಗಿದೆ" ಎಂದು ಅದು ತಿಳಿಸಿದೆ.

ತಮ್ಮ ಮಕ್ಕಳನ್ನು ಭೇಟಿಯಾಗಲು ಭೇಟಿಯ ಹಕ್ಕು ಕೋರಿ ಪತ್ನಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಕ್ಕಾಗಿ ತನ್ನ ಇಬ್ಬರು ಗಂಡು ಮಕ್ಕಳನ್ನು ನ್ಯಾಯಾಲಯಕ್ಕೆ ಕರೆಸಿಕೊಳ್ಳಲು ಕೌಟುಂಬಿಕ ನ್ಯಾಯಾಲಯದ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ತಂದೆ (ಅವರು ವೃತ್ತಿಯಲ್ಲಿ ವಕೀಲರು) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಪೀಠ ಈ ಆದೇಶ ನೀಡಿದೆ.

ಪ್ರಕರಣದಲ್ಲಿ ರಾಜಿ ಸಂಧಾನ ಎಂಬುದು ಮತ್ತೆ ಮತ್ತೆ ವಿಫಲವಾಗಿ ಪೋಷಕರ ನಡುವಿನ ಸಂಘರ್ಷ ಆಳಕ್ಕಿಳಿದಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಪರಿಹಾರಕ್ಕೆ ಸ್ವಲ್ಪ ಸಮಯ ಹಿಡಿಯುತ್ತದೆ ಎಂದು ಅದು ಹೇಳಿದೆ.

ತನ್ನ ತಾಯಿಯ ಬಗ್ಗೆ ಇಬ್ಬರು ಅಪ್ರಾಪ್ತ ಪುತ್ರರಿಗೆ ಇರುವ ತಪ್ಪು ಕಲ್ಪನೆ ಮತ್ತು ಪೂರ್ವಾಗ್ರಹ ಪೀಡಿತ ವಿಚಾರಗಳನ್ನು ತೆಗೆದುಹಾಕುವುದಕ್ಕಾಗಿ ಮನೋವಿಜ್ಞಾನಿಗಳ ಬಳಿಗೆ ಆಪ್ತ ಸಲಹೆಗೆ ಆ ಮಕ್ಕಳನ್ನು ಕರೆದೊಯ್ಯುವಂತೆಯೂ ಪೀಠ ಈ ಸಂದರ್ಭದಲ್ಲಿ ತಂದೆಗೆ ನಿರ್ದೇಶನ ನೀಡಿತು.

ಮನೋವಿಜ್ಞಾನಿಗಳೊಂದಿಗೆ ಆರು ಸಭೆಗಳನ್ನು ನಡೆಸಿದ ನಂತರ ಕುಟುಂಬ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ತಂದೆಗೆ ನಿರ್ದೇಶಿಸಿದ ಪೀಠ ಮಕ್ಕಳ ಸುಪರ್ದಿ ಪ್ರಕರಣ ಬಾಕಿ ಇರುವಾಗಲೇ ಆಪ್ತ ಸಮಾಲೋಚನೆ ಮುಂದುವರಿಸುವಂತೆ ಮನಶ್ಶಾಸ್ತ್ರಜ್ಞರಿಗೆ ನಿರ್ದೇಶನ ನೀಡಿತು.  

ಪತಿ ಅನೇಕ ಅರ್ಜಿಗಳನ್ನು ಸಲ್ಲಿಸಿದ್ದು ಇದರಿಂದ ಹಲವು ಸುತ್ತಿನ ಮೊಕದ್ದಮೆ ಎದುರಿಸಿದ ಹೆಂಡತಿಗೆ ಆತ ರೂ.2 ಲಕ್ಷ ದಾವೆ ವೆಚ್ಚ ಪಾವತಿಸಬೇಕು. ಅದನ್ನು ಪಾವತಿಸದಿದ್ದರೆ ಕೌಟುಂಬಿಕ ನ್ಯಾಯಾಲಯದಲ್ಲಿ ಬಾಕಿ ಇರುವ ಮಕ್ಕಳ ಸುಪರ್ದಿ ಅರ್ಜಿಯನ್ನು ವಜಾಗೊಳಿಸಲಾಗುವುದು ಎಂದು ಅದು ಎಚ್ಚರಿಕೆ ನೀಡಿತು.