Rajiv Gandhi assassination, Supreme Court
Rajiv Gandhi assassination, Supreme Court 
ಸುದ್ದಿಗಳು

ರಾಜೀವ್‌ ಗಾಂಧಿ ಹತ್ಯೆ ಪ್ರಕರಣ: ದೋಷಿಗಳಾದ ನಳಿನಿ, ರವಿಚಂದ್ರನ್‌ ಅವರನ್ನು ಅವಧಿ ಪೂರ್ವವಾಗಿ ಬಿಡುಗಡೆ ಮಾಡಿದ ಸುಪ್ರೀಂ

Bar & Bench

ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹತ್ಯೆ ಪ್ರಕರಣದ ದೋಷಿಗಳನ್ನು ಅವಧಿ ಪೂರ್ವವಾಗಿ ಬಿಡುಗಡೆ ಮಾಡಲು ಶುಕ್ರವಾರ ಸುಪ್ರೀಂ ಕೋರ್ಟ್‌ ಆದೇಶಿಸಿದೆ.

ಸಾಕಷ್ಟು ಕಾಲದಿಂದ ಜೈಲಿನಲ್ಲಿದ್ದರೂ ದೋಷಿಗಳು ಸನ್ನಡತೆ ತೋರಿದ್ದಾರೆ ಎಂಬುದನ್ನು ಪರಿಗಣಿಸಿ ನ್ಯಾಯಮೂರ್ತಿಗಳಾದ ಬಿ ಆರ್‌ ಗವಾಯಿ ಮತ್ತು ಬಿ ವಿ ನಾಗರತ್ನ ಅವರ ನೇತೃತ್ವದ ವಿಭಾಗೀಯ ಪೀಠವು ಆದೇಶ ಮಾಡಿದೆ.

“ನಳಿನಿ ಅವರು ಮೂರು ದಶಕಗಳಿಂದ ಜೈಲಿನಲ್ಲಿದ್ದು, ಅವರ ನಡತೆ ತೃಪ್ತಿದಾಯಕವಾಗಿದೆ. ಆಕೆಯು ಕಂಪ್ಯೂಟರ್‌ ಅಪ್ಲಿಕೇಶನ್‌ನಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪಡೆದಿದ್ದಾರೆ. ರವಿಚಂದ್ರನ್‌ ಅವರ ನಡತೆಯೂ ತೃಪ್ತಿದಾಯಕವಾಗಿದ್ದು, ಜೈಲಿನಲ್ಲಿರುವ ಅವಧಿಯಲಿ ಅವರು ಕಲಾ ವಿಭಾಗದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪೂರ್ಣಗೊಳಿಸಿದ್ದಾರೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

“ಬೇರೆ ಪ್ರಕರಣದಲ್ಲಿ ಆರೋಪಿಗಳು ಬೇಕಿಲ್ಲದಿದ್ದರೆ ಅವರನ್ನು ಬಿಡುಗಡೆ ಮಾಡಬೇಕು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಇತ್ಯರ್ಥಪಡಿಸಲಾಗಿದೆ” ಎಂದು ಆದೇಶದಲ್ಲಿ ಹೇಳಾಗಿದೆ.

ಎ ಜಿ ಪೆರಾರಿವಾಲನ್‌ ಅವರನ್ನು ಸುಪ್ರೀಂ ಕೋರ್ಟ್‌ ಬಿಡುಗಡೆ ಮಾಡಿರುವ ಆದೇಶವನ್ನು ಆಧರಿಸಿ ನಳಿನಿ ಮತ್ತು ರವಿಚಂದ್ರನ್‌ ಅವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ತಮಿಳುನಾಡು ಸರ್ಕಾರದ ಶಿಫಾರಸ್ಸನ್ನು ಆಧರಿಸಿ ಸಂವಿಧಾನದ 142ನೇ ವಿಧಿಯಡಿ ವಿಶೇಷ ಅಧಿಕಾರ ಬಳಸಿ, ಸುಪ್ರೀಂ ಕೋರ್ಟ್‌ ಪೆರಾರಿವಾಲನ್‌ ಅವರನ್ನು ಬಿಡುಗಡೆ ಮಾಡಿತ್ತು.

ಈ ಹಿನ್ನೆಲೆಯಲ್ಲಿ ತಮಗೂ ಅದೇ ರೀತಿಯ ಪರಿಹಾರ ನೀಡಬೇಕು ಎಂದು ನಳಿನಿ ಮತ್ತು ರವಿಚಂದ್ರನ್‌ ಅವರು ಮದ್ರಾಸ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು. ತನಗೆ ಆ ಅಧಿಕಾರ ಇಲ್ಲ ಎಂದು ಹೈಕೋರ್ಟ್‌ ಅರ್ಜಿ ವಜಾ ಮಾಡಿತ್ತು. ಹೀಗಾಗಿ ಅವರು ಸುಪ್ರೀಂ ಕೋರ್ಟ್‌ ಕದತಟ್ಟಿದ್ದರು. ನಳಿನಿ ಮತ್ತು ರವಿಚಂದ್ರನ್‌ ಬಿಡುಗಡೆಯೊಂದಿಗೆ ಏಳು ಆರೋಪಿಗಳ ಪೈಕಿ ನಾಲ್ವರು ಮಾತ್ರ ಜೈಲಿನಲ್ಲಿದ್ದಾರೆ.