ರಾಜ್ಯಸಭಾ ಸದಸ್ಯ ಮತ್ತು ಹಿರಿಯ ವಕೀಲ ಪಿ ವಿಲ್ಸನ್ 
ಸುದ್ದಿಗಳು

ಎಲ್ಲ ನ್ಯಾಯಾಲಯಗಳಲ್ಲಿ ವರ್ಚುವಲ್ ವಿಚಾರಣೆ: ಕಾಯಿದೆಗೆ ಆಗ್ರಹಿಸಿ ವಿಶೇಷ ಪ್ರಸ್ತಾವ ಇರಿಸಿದ ಸಂಸದ ಪಿ ವಿಲ್ಸನ್

ಭೌತಿಕ ವಿಚಾರಣೆಗಳ ಜೊತೆಗೆ ದೇಶಾದ್ಯಂತ ಎಲ್ಲಾ ನ್ಯಾಯಾಲಯಗಳು ಮತ್ತು ನ್ಯಾಯಮಂಡಳಿಗಳಲ್ಲಿ ವರ್ಚುವಲ್ ವಿಧಾನದಲ್ಲಿ ವಿಚಾರಣೆಗಳನ್ನು ಕಡ್ಡಾಯಗೊಳಿಸುವ ಸಮಗ್ರ ಕಾಯಿದೆ ರೂಪಿಸುವಂತೆ ವಿಲ್ಸನ್ ಕೇಂದ್ರವನ್ನು ಒತ್ತಾಯಿಸಿದ್ದಾರೆ.

Bar & Bench

ದೇಶದ ಎಲ್ಲಾ ನ್ಯಾಯಾಲಯಗಳು ಮತ್ತು ನ್ಯಾಯಮಂಡಳಿಗಳಲ್ಲಿ ವರ್ಚುವಲ್ ವಿಚಾರಣೆ (ವೀಡಿಯೊ ಕಾನ್ಫರೆನ್ಸಿಂಗ್‌ ವಿಚಾರಣೆ) ಕಡ್ಡಾಯಗೊಳಿಸುವ ಕಾಯಿದೆ ಜಾರಿಗೆ ತರುವಂತೆ ಒತ್ತಾಯಿಸಿ ಹಿರಿಯ ವಕೀಲ ಮತ್ತು ರಾಜ್ಯಸಭಾ ಸಂಸದ ಪಿ ವಿಲ್ಸನ್ ಅವರು ಸಂಸತ್ತಿನಲ್ಲಿ ವಿಶೇಷ ಪ್ರಸ್ತಾವನೆಗೆ ಕೋರಿಕೆ ಸಲ್ಲಿಸಿದ್ದಾರೆ.

ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ವರ್ಚುವಲ್ ನ್ಯಾಯಾಲಯಗಳು ಬೀರಿದ ಪ್ರಭಾವ ಮತ್ತು ವರ್ಚುವಲ್ ವಿಧಾನದಿಂದಾಗಿ ಭೌಗೋಳಿಕ, ಆರ್ಥಿಕ ಕಂದರಗಳನ್ನು ಮೀರಿ ಕಕ್ಷಿದಾರರಿಗೆ ನ್ಯಾಯಾಲಯಗಳು ಕೈಗೆಟುಕುವಂತೆ ಲಭ್ಯವಾಗಿದ್ದರ ಬಗ್ಗೆ ಫೆಬ್ರವರಿ 2ರಂದು ಮಂಡಿಸಲಾದ ವಿಶೇಷ ಪ್ರಸ್ತಾವನೆಯಲ್ಲಿ ವಿಲ್ಸನ್‌ ಪ್ರಸ್ತಾಪಿಸಿದ್ದಾರೆ.

ವಿಶೇಷ ಪ್ರಸ್ತಾವನೆಯ ಪ್ರಮುಖಾಂಶಗಳು

  • ಭೌತಿಕ ನ್ಯಾಯಾಲಯಗಳ ಕಲಾಪಗಳಿಗೆ ಹಾಜರಾಗಲು ಯಾವುದೇ ವ್ಯಕ್ತಿಗೆ ಉಂಟಾಗುವ ಆರ್ಥಿಕ ಹೊರೆಯನ್ನು ವರ್ಚುವಲ್‌ ನ್ಯಾಯಾಲಯಗಳು ತಪ್ಪಿಸುತ್ತವೆ.

  • ಸಾಂಕ್ರಾಮಿಕ ರೋಗದ ನಂತರ, ಕೇಂದ್ರ ವಿದ್ಯುತ್ ನಿಯಂತ್ರಣ ಆಯೋಗ (ಸಿಇಆರ್‌ಸಿ), ಟೆಲಿಕಾಂ ವ್ಯಾಜ್ಯ ಇತ್ಯರ್ಥ ಮತ್ತು ಮೇಲ್ಮನವಿ ನ್ಯಾಯಮಂಡಳಿ (ಟಿಡಿಎಸ್ಎಟಿ), ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ (ಎನ್‌ಸಿಎಲ್ಎಟಿ) ಹಾಗೂ ವಿದ್ಯುತ್ ಮೇಲ್ಮನವಿ ನ್ಯಾಯಮಂಡಳಿ (ಎಪಿಟಿಇಎಲ್) ಸೇರಿದಂತೆ ಕೆಲವು ಪ್ರಮುಖ ನ್ಯಾಯಮಂಡಳಿಗಳಲ್ಲಿ ವರ್ಚುವಲ್ ನ್ಯಾಯಾಲಯಗಳು ಕ್ರಮೇಣ ಕಣ್ಮರೆಯಾಗುತ್ತಿವೆ.

  • ಕಕ್ಷಿದಾರರಿಗೆ ವರ್ಚುವಲ್ ವಿಚಾರಣೆಗಳನ್ನು ನಿರಾಕರಿಸುವುದರಿಂದ ವ್ಯಾಜ್ಯ ವೆಚ್ಚಗಳು ಹೆಚ್ಚಾಗಬಹುದು. ಅಲ್ಲದೆ, ನ್ಯಾಯಾಲಯದ ಕಲಾಪಗಳಿಗೆ ಹಾಜರಾಗಬಹುದಾದ ಅನುಕೂಲಕರ ವಿಧಾನದ ಬದಲಿಗೆ ವಿಚಾರಣೆಗಳು ಸಮಯ ತೆಗೆದುಕೊಳ್ಳುವ ಪ್ರಕ್ರಿಯೆಗಳಾಗಿ, ಸಂಕೀರ್ಣವಾಗಿ ಬದಲಾಗಬಹುದು.

  • ಹೆಚ್ಚಿನ ನ್ಯಾಯಮಂಡಳಿಗಳು ದೆಹಲಿಯಲ್ಲಿರುವುದರಿಂದ ಕಕ್ಷಿದಾರರು ವಕೀಲರ ಪ್ರಯಾಣ, ವಸತಿ ಮತ್ತು ಹೆಚ್ಚುವರಿ ಶುಲ್ಕವನ್ನು ಭರಿಸಬೇಕಾಗುತ್ತದೆ.

  • ನ್ಯಾಯ ಲಭ್ಯತೆ ಪರಿಕಲ್ಪನೆ ಭಾರತದ ಸಂವಿಧಾನದಲ್ಲೇ ಅಡಕವಾಗಿದೆ.

  • ಕಾಗದಪತ್ರಗಳನ್ನು ಕಡಿಮೆ ಮಾಡಲು ಕಾನೂನು ಪ್ರಕ್ರಿಯೆಯನ್ನು ಸುವ್ಯವಸ್ಥಿತಗೊಳಿಸಲು ಮತ್ತು ಪ್ರಕರಣಗಳಿಗೆ ಸಂಬಂಧಿಸಿದಂತೆ ತ್ವರಿತ ಪರಿಹಾರ ಪಡೆಯಲು ಜೊತೆಗೆ ಬಾಕಿ ಇರುವ ಪ್ರಕರಣಗಳನ್ನು ಕಡಿಮೆ ಮಾಡಲು ಆಡಳಿತಾತ್ಮಕ ಕಾರ್ಯಗಳನ್ನು ಹಳಿಗೆ ತರಬೇಕಿದೆ.

  • ಆದ್ದರಿಂದ, ಭೌತಿಕ ವಿಚಾರಣೆಗಳ ಜೊತೆಗೆ ದೇಶಾದ್ಯಂತದ ಎಲ್ಲಾ ನ್ಯಾಯಾಲಯಗಳು ಮತ್ತು ನ್ಯಾಯಮಂಡಳಿಗಳಲ್ಲಿ ವರ್ಚುವಲ್ ನ್ಯಾಯಾಲಯದ ವಿಚಾರಣೆಗಳನ್ನು ಕಡ್ಡಾಯಗೊಳಿಸುವ ಸಮಗ್ರ ಕಾಯಿದೆಯನ್ನು ಕೇಂದ್ರ ಸರ್ಕಾರ ರೂಪಿಸಬೇಕು.

  • ಕಕ್ಷಿದಾರರು, ವಕೀಲರು, ನ್ಯಾಯಾಧೀಶರು ಮತ್ತಿತರ ಭಾಗೀದಾರರಿಗೆ ಅಂತಹ ಕಾಯಿದೆ ನೀತಿ ಸಂಹಿತೆಯನ್ನು ರೂಪಿಸಿ ಯಾವುದೇ ದುರ್ನಡತೆಗೆ ದಂಡ ವಿಧಿಸುವಂತಹ ನಿಯಮಾವಳಿಗಳನ್ನು ಸೇರಿಸಬೇಕು

[ವಿಶೇಷ ಪ್ರಸ್ತಾವನೆಯ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Special Mention P Wilson.pdf
Preview