ರಾಜ್ಯಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ಅನುಮತಿ ಕೋರಿ ಸಲ್ಲಿಸಿರುವ ಮನವಿಯನ್ನು ತಿದ್ದುಪಡಿ ಮಾಡಿ ಸೂಕ್ತ ಪೀಠದ ಮುಂದೆ ಸಲ್ಲಿಸುವಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಮಹಾರಾಷ್ಟ್ರದ ಸಂಪುಟ ದರ್ಜೆ ಸಚಿವ ನವಾಬ್ ಮಲಿಕ್ ಅವರಿಗೆ ಬಾಂಬೆ ಹೈಕೋರ್ಟ್ ಶುಕ್ರವಾರ ಆದೇಶಿಸಿದೆ.
ಸಂವಿಧಾನದ 227 ನೇ ವಿಧಿ ಅಡಿ ರಿಟ್ ಮನವಿ ಸಲ್ಲಿಸಲಾಗಿದ್ದು, ಮತದಾನ ಮಾಡಲು ಅನುಮತಿ ನಿರಾಕರಿಸಿರುವ ವಿಶೇಷ ನ್ಯಾಯಾಲದ ಆದೇಶ ವಜಾ ಮಾಡುವಂತೆ ಸಿಆರ್‌ಪಿಸಿ ಸೆಕ್ಷನ್ 482ರ ಅಡಿ ಮಲಿಕ್ ಸಲ್ಲಿಸಿರುವ ಮನವಿಯನ್ನು ನ್ಯಾಯಮೂರ್ತಿ ಪಿ ಡಿ ನಾಯಕ್ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.
“ಬಾಂಡ್ ಮೇಲೆ ಜಾಮೀನು ನೀಡಿ ಬಿಡುಗಡೆ ಮಾಡಲು ಕೋರಲಾಗಿದೆ. ಸಿಆರ್‌ಪಿಸಿ ಸೆಕ್ಷನ್‌ಗಳಾದ 439, 440 ಮತ್ತು 441ರ ಅಡಿ ಬಾಂಡ್ ಆಧರಿಸಿ ಮಾತ್ರ ಬಿಡುಗಡೆ ಮಾಡಬಹುದಾಗಿದೆ. ಹಾಲಿ ಮನವಿಗೆ ಬದಲಾಗಿ ಅರ್ಜಿದಾರರು ಸಿಆರ್‌ಪಿಸಿ ಸೆಕ್ಷನ್ 439ರ ಅಡಿ ಸೂಕ್ತ ಮನವಿ ಸಲ್ಲಿಸಬೇಕಿತ್ತು. ಈ ಮನವಿ ತಿದ್ದುಪಡಿ ಮಾಡಲು ಅನುಮತಿಸಲಾಗಿದೆ” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
ಮತದಾನ ಮಾಡಲು ಅನುಮತಿ ಕೋರಿ ಜೂನ್ 9ರಂದು ವಿಶೇಷ ನ್ಯಾಯಾಧೀಶ ಆರ್ ಎನ್ ರೋಕಡೆ ಅವರ ಮುಂದೆ ಸಲ್ಲಿಕೆಯಾಗಿದ್ದ ಮನವಿ ವಜಾವಾಗಿದ್ದನ್ನು ಪ್ರಶ್ನಿಸಿ ಮಲಿಕ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಜೊತೆ ಸಂಪರ್ಕವಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಲುಕಿರುವ ಮಲಿಕ್ ಅವರು ನ್ಯಾಯಾಂಗ ಬಂಧನಲ್ಲಿದ್ದಾರೆ.