ಸುದ್ದಿಗಳು

ರಾಜ್ಯಸಭಾ ಚುನಾವಣೆ: ಅನಿಲ್ ದೇಶ್‌ಮುಖ್, ನವಾಬ್ ಮಲಿಕ್‌ಗೆ ಮತ ಚಲಾಯಿಸಲು ಜಾಮೀನು ನೀಡಿಕೆಗೆ ಇ ಡಿ ವಿರೋಧ

ಪ್ರಜಾಪ್ರತಿನಿಧಿ ಕಾಯಿದೆಯಡಿ ಕೈದಿಗಳಿಗೆ ಮತದಾನದ ಹಕ್ಕು ಇಲ್ಲ ಎಂದು ಅಕ್ರಮ ಹಣ ವರ್ಗಾವಣೆ ತಡೆ ವಿಶೇಷ ನ್ಯಾಯಾಲಯಕ್ಕೆ ಇ ಡಿ ತಿಳಿಸಿದೆ.

Bar & Bench

ರಾಜ್ಯಸಭೆಗೆ ಮತ ಚಲಾಯಿಸಲು ಒಂದು ದಿನದ ಮಟ್ಟಿಗೆ ತಾತ್ಕಾಲಿಕ ಜಾಮೀನು ಕೋರಿ ಮಹಾರಾಷ್ಟ್ರ ಸಚಿವ ನವಾಬ್‌ ಮಲಿಕ್‌ ಹಾಗೂ ಮಾಜಿ ಗೃಹ ಸಚಿವ ಅನಿಲ್‌ ದೇಶಮುಖ್‌ ಸಲ್ಲಿಸಿರುವ ಅರ್ಜಿಗೆ ವಿರೋಧ ವ್ಯಕ್ತಪಡಿಸಿರುವ ಜಾರಿ ನಿರ್ದೇಶನಾಲಯ ಕೈದಿಗಳಿಗೆ ಮತದಾನದ ಹಕ್ಕು ಇಲ್ಲ ಎಂದು ಅಕ್ರಮ ಹಣ ವರ್ಗಾವಣೆ ತಡೆ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದೆ.

ಪ್ರಜಾಪ್ರತಿನಿಧಿ ಕಾಯಿದೆ (ಆರ್‌ಪಿ ಕಾಯಿದೆ) ಅಡಿಯಲ್ಲಿ ಕೈದಿಗಳಿಗೆ ಮತದಾನದ ಹಕ್ಕು ಇಲ್ಲ ಎಂದು ಇ ಡಿ ತನ್ನ ಅಫಿಡವಿಟ್‌ನಲ್ಲಿ ಒತ್ತಿ ಹೇಳಿದೆ.

“ಜನಪ್ರತಿನಿಧಿಗಳ ಕಾಯಿದೆಯಡಿ ಕೈದಿಗಳಿಗೆ ಮತದಾನದ ಹಕ್ಕು ಇಲ್ಲ ಎಂಬುದನ್ನು ಗಮನಿಸುವುದು ಸೂಕ್ತ. ಮತದಾನದ ಹಕ್ಕು ಕಾಯಿದೆಯ ಸೆಕ್ಷನ್ 62 ರ ಅಡಿಯಲ್ಲಿ ರಚಿಸಲಾದ ಶಾಸನಬದ್ಧ ಹಕ್ಕಾಗಿದ್ದು ಮತದಾನದ ಹಕ್ಕು ನಿರ್ಬಂಧಗಳಿಗೆ ಒಳಪಟ್ಟು ಶಾಸನಬದ್ಧ ಹಕ್ಕೂ ಎಂದು ಕಾನೂನಿನಲ್ಲಿ ಇತ್ಯರ್ಥವಾಗಿದೆ” ಎಂದು ಅಫಿಡವಿಟ್‌ ತಿಳಿಸಿದೆ.

ಕಾಯಿದೆಯ ಸೆಕ್ಷನ್ 62 (5) ಅನ್ನು ಉಲ್ಲೇಖಿಸಿರುವ ಇ ಡಿ " ಜೈಲಿನಲ್ಲಿ ಬಂಧಿತನಾಗಿರುವ ಯಾವುದೇ ವ್ಯಕ್ತಿ, ಶಿಕ್ಷೆಗೆ ಗುರಿಯಾಗಿರಲಿ ಅಥವಾ ವಿಚಾರಣೆ ಎದುರಿಸುತ್ತಿರಲಿ ಇಲ್ಲವೇ ಪೊಲೀಸರ ಕಾನೂನು ಬದ್ಧ ವಶದಲ್ಲಿರಲಿ ಆತ ಮತ ಚಲಾಯಿಸುಂತಿಲ್ಲ” ಎಂದು ಹೇಳಿದೆ. ಪ್ರಕರಣದ ವಿಚಾರಣೆ ಇಂದೂ ಸಹ ಮುಂದುವರೆದಿದೆ.