Anil Deshmukh and Nawab Malik with Mumbai Sessions Court
Anil Deshmukh and Nawab Malik with Mumbai Sessions Court 
ಸುದ್ದಿಗಳು

ರಾಜ್ಯಸಭಾ ಚುನಾವಣೆ: ಮತ ಚಲಾಯಿಸಲು ಜಾಮೀನು ನಿರಾಕರಣೆ; ಹೈಕೋರ್ಟ್‌ ಮೆಟ್ಟಿಲೇರಿದ ದೇಶ್‌ಮುಖ್, ಮಲಿಕ್‌

Bar & Bench

ರಾಜ್ಯಸಭೆಗೆ ಶುಕ್ರವಾರ ನಡೆಯಲಿರುವ ಚುನಾವಣೆಯಲ್ಲಿ ಮತ ಚಲಾಯಿಸಲು ಒಂದು ದಿನದ ಮಟ್ಟಿಗೆ ತಾತ್ಕಾಲಿಕ ಜಾಮೀನು ಕೋರಿ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಮತ್ತು ರಾಜ್ಯದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಸಲ್ಲಿಸಿದ್ದ ಮನವಿಯನ್ನು ಮುಂಬೈನ ಅಕ್ರಮ ಹಣ ವರ್ಗಾವಣೆ ತಡೆ ವಿಶೇಷ ನ್ಯಾಯಾಲಯ ಗುರುವಾರ ತಿರಸ್ಕರಿಸಿದೆ. ಇದರ ಬೆನ್ನಿಗೇ ಈ ಇಬ್ಬರು ಪ್ರಭಾವಿ ನಾಯಕರು ಮತಚಲಾವಣೆಗೆ ಅವಕಾಶ ಕೋರಿ ಒಂದು ದಿನದ ಮಟ್ಟಿಗೆ ಜಾಮೀನು ನೀಡುವಂತೆ ಬಾಂಬೆ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಬುಧವಾರ ಎಲ್ಲಾ ಕಕ್ಷೀದಾರರ ವಾದಗಳನ್ನು ಸುದೀರ್ಘವಾಗಿ ಆಲಿಸಿದ್ದ ವಿಶೇಷ ನ್ಯಾಯಾಧೀಶ ಆರ್ ಎನ್ ರೋಕಡೆ ಅವರು ಇಂದು ತಮ್ಮ ಆದೇಶ ಹೊರಡಿಸಿದರು. ತಾವು ಶಾಸಕರಾಗಿದ್ದು ಮತದಾನ ಮಾಡಬೇಕಿರುವುದರಿಂದ ತಮಗೆ ಒಂದು ದಿನದ ಜಾಮೀನು ನೀಡುವಂತೆ ಇಬ್ಬರೂ ಅರ್ಜಿ ಸಲ್ಲಿಸಿದ್ದರು. ಆದರೆ ಪ್ರಜಾಪ್ರತಿನಿಧಿ ಕಾಯಿದೆಯಡಿ ಕೈದಿಗಳಿಗೆ ಮತದಾನದ ಹಕ್ಕು ಇಲ್ಲ ಎಂದು ನ್ಯಾಯಾಲಯಕ್ಕೆ ಇ ಡಿ ತಿಳಿಸಿತ್ತು.

ಇತ್ತ ತಮ್ಮ ಮನವಿ ತಿರಸ್ಕೃತವಾದ ಬೆನ್ನಿಗೇ ಅರ್ಜಿದಾರರಾದ ದೇಶ್‌ಮುಖ್‌ ಮತ್ತು ಮಲಿಕ್‌ ಅವರು ವಿಶೇಷ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದರು. ವಿಶೇಷ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಲು ಕೋರಿ 227ನೇ ವಿಧಿಯಡಿ ಹಾಗೂ ಅಪರಾಧ ಸಂಹಿತೆಯ ಸೆಕ್ಷನ್‌ 482ರ ಅಡಿ ಎರಡು ಪ್ರತ್ಯೇಕ ರಿಟ್ ಅರ್ಜಿಗಳು ದಾಖಲಾಗಿವೆ. ರಾಷ್ಟ್ರವಾದಿ ಕಾಂಗ್ರೆಸ್‌ ಪಕ್ಷಕ್ಕೆ (ಎನ್‌ಸಿಪಿ) ಸೇರಿರುವ ಈ ಇಬ್ಬರು ನಾಯಕರು ನಾಳೆಯೇ ಮತದಾನವಿರುವುದರಿಂದ ತುರ್ತಾಗಿ ಪ್ರಕರಣವನ್ನು ಆಲಿಸಲು ಕೋರಿದ್ದಾರೆ.

ಮನವಿಯನ್ನು ಗುರುವಾರ ಸಾಯಂಕಾಲ ನ್ಯಾ. ಪಿ ಡಿ ನಾಯಕ್‌ ಅವರ ಪೀಠದ ಮುಂದೆ ತುರ್ತು ಪಟ್ಟಿ ಮಾಡಲು ಕೋರಿ ಅರ್ಜಿದಾರರ ಪರ ವಕೀಲರು ಉಲ್ಲೇಖಿಸಿದರು. ಸೂಕ್ತ ವೇದಿಕೆಯ ಮುಂದೆ ನೀವು ಅಹವಾಲು ಸಲ್ಲಿಸಬೇಕಿತ್ತು ಎಂದು ಆಕ್ಷೇಪಿಸಿದ ನ್ಯಾಯಮೂರ್ತಿಗಳು ತದನಂತರ ಪ್ರಕರಣವನ್ನು ನಾಳೆ (ಶುಕ್ರವಾರ) ಆಲಿಸುವುದಾಗಿ ತಿಳಿಸಿದರು.