ರಾಮ ಮಂದಿರ, ಅಯೋಧ್ಯೆ 
ಸುದ್ದಿಗಳು

ರಾಮ ಮಂದಿರ ಉದ್ಘಾಟನೆಗೆ ರಜೆ: ಎರಡು ಪ್ರತ್ಯೇಕ ಪಿಐಎಲ್‌ಗಳನ್ನು ತಿರಸ್ಕರಿಸಿದ ಬಾಂಬೆ ಮತ್ತು ಮದ್ರಾಸ್‌ ಹೈಕೋರ್ಟ್‌ಗಳು

ನಾಳೆ ರಾಮ ಮಂದಿರ ಉದ್ಘಾಟನೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇಂದು (ಭಾನುವಾರ) ವಿಶೇಷ ಕಲಾಪದ ನಡೆಸಿದ ಎರಡೂ ಉಚ್ಚ ನ್ಯಾಯಾಲಯಗಳು ಅರ್ಜಿಗಳನ್ನು ತಿರಸ್ಕರಿಸಿದವು.

Bar & Bench

ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯ ದಿನವಾದ ಜನವರಿ 22 ರಂದು ರಜೆ ಘೋಷಿಸುವ ಮಹಾರಾಷ್ಟ್ರ ಸರ್ಕಾರದ ನಿರ್ಧಾರ ಮತ್ತು ಸರ್ಕಾರಿ ವೈದ್ಯಕೀಯ ಸಂಸ್ಥೆಯೊಂದಕ್ಕೆ ಅರ್ಧ ದಿನ ರಜೆ ಘೋಷಿಸಿದ್ದ ಪಾಂಡಿಚೆರಿ ಆಡಳಿತದ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾಗಿದ್ದ ಎರಡು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (ಪಿಐಎಲ್) ಬಾಂಬೆ ಹೈಕೋರ್ಟ್‌ ಮತ್ತು ಮದ್ರಾಸ್‌ ಹೈಕೋರ್ಟ್‌ ತಿರಸ್ಕರಿಸಿವೆ.

ನಾಳೆ ರಾಮ ಮಂದಿರ ಉದ್ಘಾಟನೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇಂದು (ಭಾನುವಾರ) ವಿಶೇಷ ಕಲಾಪದ ನಡೆಸಿದ ಎರಡೂ ಉಚ್ಚ ನ್ಯಾಯಾಲಯಗಳು ಅರ್ಜಿಗಳನ್ನು ತಿರಸ್ಕರಿಸಿದವು.

ಬಾಂಬೆ ಹೈಕೋರ್ಟ್, ನ್ಯಾಯಮೂರ್ತಿ ಗಿರೀಶ್ ಕುಲಕರ್ಣಿ ಮತ್ತು ನ್ಯಾಯಮೂರ್ತಿ ನೀಲಾ ಗೋಖಲೆ

ಬಾಂಬೆ ಹೈಕೋರ್ಟ್‌ನಲ್ಲಿ ಸಲ್ಲಿಸಲಾಗಿದ್ದ ಪಿಐಎಲ್‌ ಪ್ರಚಾರದ ಉದ್ದೇಶದ ಅರ್ಜಿಯಾಗಿದ್ದು ರಜೆ ದಿನಗಳನ್ನು ಘೋಷಿಸುವುದು ಕಾರ್ಯಾಂಗದ ವ್ಯಾಪ್ತಿಗೆ ಸೇರಿದ್ದು ಎಂದು ನ್ಯಾಯಮೂರ್ತಿಗಳಾದ ಜಿ.ಎಸ್.ಕುಲಕರ್ಣಿ ಮತ್ತು ನೀಲಾ ಗೋಖಲೆ ಅವರ ವಿಭಾಗೀಯ ಪೀಠ ತಿಳಿಸಿತು.

ಸರ್ಕಾರ ಇಂತಹ ಅಧಿಕಾರ ಚಲಾಯಿಸುವುದು ನಿರಂಕುಶವಾದ ತೀರ್ಮಾನವಾಗಿರದೆ ಜಾತ್ಯತೀತ ತತ್ವಗಳಿಗೆ ಅನುಗುಣವಾಗಿ ಇದೆ ಎಂದು ನ್ಯಾಯಾಲಯಗಳು ಈಗಾಗಲೇ ಅಭಿಪ್ರಾಯಪಟ್ಟಿರುವುದಾಗಿ ಪೀಠ ಸ್ಪಷ್ಟಪಡಿಸಿದೆ.

ಅಲ್ಲದೆ ಅಯೋಧ್ಯೆ ವಿಚಾರವಾಗಿ 2019ರಲ್ಲಿ ನೀಡಿದ್ದ ತೀರ್ಪಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ವಿವೇಚನೆಯನ್ನು ಪ್ರಶ್ನಿಸಿದ್ದ ಅರ್ಜಿದಾರರಾದ ಮಹಾರಾಷ್ಟ್ರದ ನಾಲ್ವರು ಕಾನೂನು ವಿದ್ಯಾರ್ಥಿಗಳನ್ನು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತು.

ಇದು ರಾಜಕೀಯ ಪ್ರೇರಿತ ಅರ್ಜಿಯಂತೆ ತೋರುತ್ತಿದ್ದು ಪ್ರಚಾರದ ಹಿತಾಸಕ್ತಿ ಇರುವುದು ನ್ಯಾಯಾಲಯದಲ್ಲಿ ಮಾಡಿದ ವಾದಗಳಿಂದ ಸ್ಪಷ್ಟವಾಗಿದೆ ಎಂದು ಪೀಠ ಖಂಡಿಸಿತು.

ಇಂತಹ ರಜಾದಿನಗಳನ್ನು ಘೋಷಿಸಲು ಸರ್ಕಾರಗಳಿಗೆ ಅಧಿಕಾರವನ್ನು ನೀಡುವ 1968 ರ ಕೇಂದ್ರ ಸರ್ಕಾರದ ಅಧಿಸೂಚನೆಯನ್ನು ಅರ್ಜಿದಾರರು ಪ್ರಶ್ನಿಸುತ್ತಿದ್ದರೂ, ಈ ಅಧಿಸೂಚನೆಯನ್ನು ಅರ್ಜಿಗೆ ಸೇರಿಸಿಲ್ಲ ಎಂದು ನ್ಯಾಯಾಲಯ ಆಕ್ಷೇಪಿಸಿತು.

ಪಿಐಎಲ್ ಮೂಲಕ ಇಂತಹ ಸಮಸ್ಯೆಗಳನ್ನು ಮುಂದುವರೆಸದಂತೆ ನ್ಯಾಯಾಲಯ ಎಚ್ಚರಿಕೆ ನೀಡಿತಾದರೂ ದಂಡ ವಿಧಿಸಲು ಮುಂದಾಗಲಿಲ್ಲ.

ಆ ಮೂಲಕ ಮುಂಬೈನ ಮಹಾರಾಷ್ಟ್ರ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ (ಎಂಎನ್ಎಲ್‌ಯು), ರ್ಕಾರಿ ಕಾನೂನು ಕಾಲೇಜು (ಜಿಎಲ್‌ಸಿ) ಹಾಗೂ ಗುಜರಾತ್‌ನ ನಿರ್ಮಾ ಕಾನೂನು ವಿಶ್ವವಿದ್ಯಾಲಯದಲ್ಲಿ ಎಲ್‌ಎಲ್‌ಬಿ ವ್ಯಾಸಂಗ ಮಾಡುತ್ತಿರುವ ಶಿವಾಂಗಿ ಅಗರ್ವಾಲ್, ಸತ್ಯಜೀತ್ ಸಾಳ್ವೆ, ವೇದಾಂತ್ ಅಗರ್ವಾಲ್, ಖುಷಿ ಬಂಗಿಯಾ ಎಂಬ ನಾಲ್ವರು ಕಾನೂನು ವಿದ್ಯಾರ್ಥಿಗಳು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತು.

Madras High Court

ಅರ್ಜಿದಾರರ ಕಳವಳಕ್ಕೆ ಆಧಾರವಿಲ್ಲ: ಮದ್ರಾಸ್‌ ಹೈಕೋರ್ಟ್‌

ಭಾನುವಾರ ನಡೆದ ಮತ್ತೊಂದು ವಿಶೇಷ ವಿಚಾರಣೆ ವೇಳೆ, ಪಾಂಡಿಚೆರಿಯ ಜವಾಹರಲಾಲ್ ವೈದ್ಯಕೀಯ ಶಿಕ್ಷಣ ಸ್ನಾತಕೋತ್ತರ ಮತ್ತು ಸಂಶೋಧನಾ ಸಂಸ್ಥೆಗೆ (ಜೆಐಪಿಎಂಇಆರ್‌) ಅಲ್ಲಿನ ಸರ್ಕಾರ ಜನವರಿ 22ರಂದು ಅರ್ಧ ದಿನ ರಜೆ ನೀಡಿದ್ದನ್ನು ಪ್ರಶ್ನಿಸಿದ್ದ ಪಿಐಎಲ್‌ ಅನ್ನು ಮದ್ರಾಸ್ ಹೈಕೋರ್ಟ್ ತಿರಸ್ಕರಿಸಿದೆ.

ರಜೆ ನೀಡಿದ್ದರೂ ವೈದ್ಯಕೀಯ ಸಂಸ್ಥೆಯಲ್ಲಿ ತುರ್ತು ಸೇವೆ ಮುಂದುವರೆಯುವುದಾಗಿ ಜೆಐಪಿಎಂಇಆರ್‌ ತಿಳಿಸಿದ ಹಿನ್ನೆಲೆಯಲ್ಲಿ ಅರ್ಜಿದಾರರ ಕಳವಳಕ್ಕೆ ಆಧಾರವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎಸ್ ವಿ ಗಂಗಾಪುರ್‌ವಾಲಾ ಮತ್ತು ನ್ಯಾಯಮೂರ್ತಿ ಭರತ ಚಕ್ರವರ್ತಿ ಅವರು ತಿಳಿಸಿದರು.