ಸಮಿತಿಯ ಪದಾಧಿಕಾರಿಗಳು 
ಸುದ್ದಿಗಳು

ಒಂದು ರಾಷ್ಟ್ರ ಒಂದು ಚುನಾವಣೆ: ಹಸಿರು ನಿಶಾನೆ ತೋರಿದ ರಾಮನಾಥ್‌ ಕೋವಿಂದ್ ನೇತೃತ್ವದ ಸಮಿತಿ

ಸಂವಿಧಾನದ 83 ಮತ್ತು 172ನೇ ವಿಧಿಗಳಿಗೆ ತಿದ್ದುಪಡಿ ಮಾಡಲು ರಾಜ್ಯಗಳ ಅನುಮೋದನೆ ಅಗತ್ಯವಿಲ್ಲ ಎಂದು ಸಮಿತಿ ಹೇಳಿದೆ.

Bar & Bench

ಲೋಕಸಭೆ ಮತ್ತು ಎಲ್ಲಾ ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಲು ಅನುವು ಮಾಡಿಕೊಡುವ ಕೇಂದ್ರ ಸರ್ಕಾರದ 'ಒಂದು ರಾಷ್ಟ್ರ ಒಂದು ಚುನಾವಣೆʼ ಪರಿಕಲ್ಪನೆಯನ್ನು ಮಾಜಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್ ನೇತೃತ್ವದ ಉನ್ನತ ಮಟ್ಟದ ಸಮಿತಿ ಬೆಂಬಲಿಸಿದೆ.

ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸಲು ಅಪಾರ ಬೆಂಬಲವಿದ್ದು ಇದು ಅಭಿವೃದ್ಧಿಗೆ ಸಹಾಯ ಮಾಡುತ್ತದೆ ಮತ್ತು ದೇಶದಲ್ಲಿ ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸುತ್ತದೆ ಎಂದು ಸಮಿತಿ ತನ್ನ ವರದಿಯಲ್ಲಿ ತಿಳಿಸಿದೆ.

ಮೊದಲ ಹಂತದಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಬೇಕು. ಎರಡನೇ ಹಂತದಲ್ಲಿ, ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳ ಚುನಾವಣೆಗಳು ನಡೆದ ನೂರು ದಿನಗಳಲ್ಲಿ ಪುರಸಭೆಗಳು ಮತ್ತು ಪಂಚಾಯತ್‌ಗಳಿಗೆ (ಸ್ಥಳೀಯ ಸಂಸ್ಥೆಗಳು) ಚುನಾವಣೆಗಳನ್ನು ನಡೆಸಬೇಕು ಎನ್ನುವುದು ವರದಿಯ ಪ್ರಮುಖ ಶಿಫಾರಸ್ಸಾಗಿದೆ.

ಹಿರಿಯ ವಕೀಲ ಹರೀಶ್ ಸಾಳ್ವೆ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ಮಾಜಿ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್, 15 ನೇ ಹಣಕಾಸು ಆಯೋಗದ ಅಧ್ಯಕ್ಷ ಎನ್.ಕೆ.ಸಿಂಗ್, ಲೋಕಸಭೆಯ ನಿವೃತ್ತ ಪ್ರಧಾನ ಕಾರ್ಯದರ್ಶಿ ಡಾ.ಸುಭಾಷ್ ಸಿ ಕಶ್ಯಪ್ ಹಾಗೂ ನಿವೃತ್ತ ಮಾಜಿ ಮುಖ್ಯ ವಿಚಕ್ಷಣಾ ಆಯುಕ್ತ ಸಂಜಯ್ ಕೊಠಾರಿ ವರದಿಯನ್ನು ಸಿದ್ಧಪಡಿಸಿದ ಸಮಿತಿಯಲ್ಲಿದ್ದರು.

ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ) ಅರ್ಜುನ್ ರಾಮ್ ಮೇಘವಾಲ್ ವಿಶೇಷ ಆಹ್ವಾನಿತರಾಗಿದ್ದು, ಕೇಂದ್ರ ಕಾನೂನು ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ನಿತೇನ್ ಚಂದ್ರ ಸಮಿತಿಯ ಕಾರ್ಯದರ್ಶಿಯಾಗಿದ್ದರು.

ವರದಿಯ ಪ್ರಮುಖಾಂಶಗಳು

  • ಒಂದು ರಾಷ್ಟ್ರ ಒಂದು ಚುನಾವಣೆಯು ದೇಶದಲ್ಲಿ ಅಭಿವೃದ್ಧಿ ಪ್ರಕ್ರಿಯೆಗೆ ಮತ್ತು ಸಾಮಾಜಿಕ ಏಕತೆಗೆ ಸಹಾಯ ಮಾಡುತ್ತದೆ.

  • ಒಂದು ರಾಷ್ಟ್ರ ಒಂದು ಚುನಾವಣೆಯನ್ನು ತರಲು ಅಗತ್ಯವಿರುವ ಕೆಲವು ಸಾಂವಿಧಾನಿಕ ತಿದ್ದುಪಡಿಗಳಿಗೆ ರಾಜ್ಯದ ಅನುಮೋದನೆ ಅಗತ್ಯವಿದ್ದರೆ, ಕೆಲವು ತಿದ್ದುಪಡಿಗಳನ್ನು ರಾಜ್ಯಗಳ ಒಪ್ಪಿಗೆಯಿಲ್ಲದೆ ಸಂಸತ್ತು ಮಾಡಬಹುದು.

  • ಏಕಕಾಲಕ್ಕೆ ಚುನಾವಣೆ ನಡೆಸುವುದಕ್ಕಾಗಿ ಮಹತ್ವದ ಸಾಂವಿಧಾನಿಕ ತಿದ್ದುಪಡಿಗಳ ಅಗತ್ಯವಿದೆ.

  • ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳ ಸಾರ್ವತ್ರಿಕ ಚುನಾವಣೆಗಳ ಜೊತೆಗೆ ಪಂಚಾಯತ್‌ ಮತ್ತು ಪುರಸಭೆಗಳಲ್ಲಿ ಕೂಡ ಏಕಕಾಲಕ್ಕೆ ಚುನಾವಣೆ ನಡೆಸುವುದಕ್ಕಾಗಿ 324 ಎ ವಿಧಿ ಜಾರಿಗೆ ತರಬೇಕಿದ್ದು ಇದಕ್ಕೆ ರಾಜ್ಯಗಳ ಅನುಮೋದನೆ ಅಗತ್ಯವಿದೆ.

  • ಅನುಚ್ಛೇದ 83 (ಸಂಸತ್ತಿನ ಸದನಗಳ ಅವಧಿ) ಮತ್ತು ಅನುಚ್ಛೇದ 172ನ್ನು (ರಾಜ್ಯ ಶಾಸಕಾಂಗಗಳ ಅವಧಿ) ತಿದ್ದುಪಡಿ ಮಾಡುವ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಬೇಕು. ಈ ಸಾಂವಿಧಾನಿಕ ತಿದ್ದುಪಡಿಗೆ ರಾಜ್ಯಗಳ ಅನುಮೋದನೆಯ ಅಗತ್ಯವಿಲ್ಲ.

  • ಮತದಾರರ ಒಂದೇ ಪಟ್ಟಿ ಮತ್ತು ಮತದಾರ ಒಂದೇ ಫೋಟೊ ಗುರುತಿನ ಚೀಟಿ ನೀಡುವುದಕ್ಕಾಗಿ 325 ನೇ ವಿಧಿಗೆ ತಿದ್ದುಪಡಿ ಮಾಡಬೇಕಿದೆ. ಭಾರತದ ಚುನಾವಣಾ ಆಯೋಗವು ರಾಜ್ಯ ಚುನಾವಣಾ ಆಯೋಗಗಳೊಂದಿಗೆ ಸಮಾಲೋಚಿಸಿ ಇದನ್ನು ಸಿದ್ದಪಡಿಸಬೇಕಿದ್ದು ಭಾರತದ ಚುನಾವಣಾ ಆಯೋಗ ಸಿದ್ಧಪಡಿಸಿದ ಉಳಿದ ಯಾವುದೇ ಮತದಾರರ ಪಟ್ಟಿಗೆ ಇದು ಬದಲಿಯಾಗಲಿದೆ.

  • ಪ್ರತ್ಯೇಕ ಚುನಾವಣೆಗಳನ್ನು ನಡೆಸುವುದರಿಂದ ಸರ್ಕಾರ, ವಾಣಿಜ್ಯ ವ್ಯವಹಾರ, ಕಾರ್ಮಿಕರು, ನ್ಯಾಯಾಲಯಗಳು, ರಾಜಕೀಯ ಪಕ್ಷಗಳು, ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಹಾಗೂ ನಾಗರಿಕ ಸಮಾಜಕ್ಕೆ ಭಾರಿ ಹೊರೆ. ಹೀಗಾಗಿ ಏಕಕಾಲಕ್ಕೆ ಚುನಾವಣೆ ನಡೆಸಲು ಸರ್ಕಾರ ಕಾರ್ಯಸಾಧುವಾದ ಕಾರ್ಯವಿಧಾನ ರೂಪಿಸಬೇಕು.

  • ಮೊದಲ ಹಂತದಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಬೇಕು.

  • ಎರಡನೇ ಹಂತದಲ್ಲಿ, ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳ ಚುನಾವಣೆಗಳು ನಡೆದ ನೂರು ದಿನಗಳಲ್ಲಿ ಪುರಸಭೆಗಳು ಮತ್ತು ಪಂಚಾಯತ್ಗಳಿಗೆ ಚುನಾವಣೆಗಳು ನಡೆಯುವ ರೀತಿಯಲ್ಲಿ ಪುರಸಭೆಗಳು ಮತ್ತು ಪಂಚಾಯತ್ಗಳ ಚುನಾವಣೆಗಳನ್ನು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳೊಂದಿಗೆ ಸಮನ್ವಯಗೊಳಿಸಬೇಕು.

  • ಅತಂತ್ರ ವಿಧಾನಸಭೆ, ಅವಿಶ್ವಾಸ ಗೊತ್ತುವಳಿ ಅಥವಾ ಅಂತಹ ಯಾವುದೇ ಘಟನೆಯ ಸಂದರ್ಭದಲ್ಲಿ, ಹೊಸ ಸದನವನ್ನು ರಚಿಸಲು ಹೊಸ ಚುನಾವಣೆಗಳನ್ನು ನಡೆಸಬಹುದು

ವರದಿಗಾಗಿ ಇಲ್ಲಿ ಕ್ಲಿಕ್ಕಿಸಿ.