ಪ್ರಸಕ್ತ ವರ್ಷದ ರಾಮನವಮಿ ಸಂದರ್ಭದಲ್ಲಿ ಸಂಭವಿಸಿದ ಹಿಂಸಾಚಾರ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ಕಲ್ಕತ್ತಾ ಹೈಕೋರ್ಟ್ ಗುರುವಾರ ವರ್ಗಾಯಿಸಿದೆ [ಸುವೇಂದು ಅಧಿಕಾರಿ ವರ್ಸಸ್ ಪಶ್ಚಿಮ ಬಂಗಾಳ ಸರ್ಕಾರ].
ಪ್ರಕರಣಕ್ಕೆ ಸಂಬಂಧಿಸಿದ ದಾಖಲೆ, ಸಾಕ್ಷ್ಯ ಮತ್ತು ವಶಕ್ಕೆ ಪಡೆಯಲಾದ ವಸ್ತುಗಳನ್ನು ಎನ್‌ಐಎಗೆ ತಕ್ಷಣ ಸಲ್ಲಿಸುವಂತೆ ರಾಜ್ಯ ಪೊಲೀಸರಿಗೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಟಿ ಎಸ್ ಶಿವಜ್ಞಾನಂ ಮತ್ತು ನ್ಯಾಯಮೂರ್ತಿ ಹಿರಣ್ಮಯ್ ಭಟ್ಟಾಚಾರ್ಯ ಅವರ ನೇತೃತ್ವದ ವಿಭಾಗೀಯ ಪೀಠವು ಆದೇಶ ಮಾಡಿದೆ.
“ಸ್ಫೋಟಕ ವಸ್ತುಗಳ ಕಾಯಿದೆ ಅಡಿ ಆಸಿಡ್ ಬಾಟಲಿಗಳು ಮತ್ತು ಪೆಟ್ರೋಲ್ ಬಾಂಬ್ ಇತ್ಯಾದಿ ಬಳಕೆ ಮಾಡಿದವರ ವಿರುದ್ಧ ಸ್ಫೋಟಕ ವಸ್ತುಗಳ ಕಾಯಿದೆಯಡಿ ಪ್ರಕರಣ ದಾಖಲಿಸುವಂತೆ ರಾಜ್ಯ ಪೊಲೀಸರಿಗೆ ನಿರ್ದೇಶಿಸುವುದರಿಂದ ಯಾವುದೇ ಉದ್ದೇಶ ಈಡೇರುವುದಿಲ್ಲ ಎಂಬುದು ನಮ್ಮ ಖಚಿತ ಅಭಿಪ್ರಾಯವಾಗಿದೆ. ಪ್ರಕರಣವು ಆ ಹಂತದಿಂದ ಮುಂದೆ ಸಾಗಿಬಂದಿದೆ. ಈಗ ಎನ್‌ಐಎ ತನಿಖೆ ನಡೆಸುವುದು ಸೂಕ್ತ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.
ರಾಮ ನವಮಿ ಆಚರಣೆಯ ಸಂದರ್ಭದಲ್ಲಿ ಹಿಂದೂ ಮತ್ತು ಮುಸ್ಲಿಮ್ ಸಮುದಾಯ ನಡುವೆ ಸಂಭವಿಸಿದ ಹಿಂಸಾಚಾರದ ಕುರಿತು ಸೂಕ್ತ ತನಿಖೆ ನಡೆಸಲು ಆದೇಶಿಸಬೇಕು ಎಂದು ಬಿಜೆಪಿಯ ಸುವೇಂದು ಅಧಿಕಾರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿ, ಏಪ್ರಿಲ್ 10ರಂದು ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಾಲಯ ಇಂದು ಪ್ರಕಟಿಸಿತು. ಪ್ರಕರಣದಲ್ಲಿ ಬಳಕೆ ಮಾಡಿರುವ ಸ್ಫೋಟಕಗಳ ಕುರಿತು ಎನ್‌ಐಎ ತನಿಖೆಗೆ ಆದೇಶಿಸಬೇಕು ಎಂದು ಅಧಿಕಾರಿ ಕೋರಿದ್ದರು. ಏಪ್ರಿಲ್ 10ರಂದು ನಡೆದಿದ್ದ ಸುದೀರ್ಘ ವಿಚಾರಣೆಯ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ಹೌರಾ ಮತ್ತು ದಲ್ಖೋಲಾ ಜಿಲ್ಲೆಗಳಲ್ಲಿ ನಡೆದ ಹಿಂಸಾಚಾರವು ಮೇಲ್ನೋಟಕ್ಕೆ ಪೂರ್ವ ನಿಯೋಜಿತ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.