Media Trial
Media Trial 
ಸುದ್ದಿಗಳು

ಜಾರಕಿಹೊಳಿ ಸಿಡಿ ಹಗರಣ: ಕಟ್ಟುನಿಟ್ಟಾಗಿ ಕಾರ್ಯಕ್ರಮ ಸಂಹಿತೆ ಪಾಲಿಸುವಂತೆ ಮಾಧ್ಯಮಗಳಿಗೆ ಸೂಚಿಸಿದ ಕರ್ನಾಟಕ ಹೈಕೋರ್ಟ್

Bar & Bench

ರಮೇಶ್ ಜಾರಕಿಹೊಳಿ ಲೈಂಗಿಕ ಹಗರಣಕ್ಕೆ ಸಂಬಂಧಿಸಿದ ಸುದ್ದಿಗಳನ್ನು ವರದಿ ಮಾಡುವಾಗ ಟಿವಿ ಸುದ್ದಿ ವಾಹಿನಿಗಳು ವಸ್ತುವಿಷಯವನ್ನು ನಿಯಂತ್ರಿಸುವ ಟಿವಿ ಕಾರ್ಯಕ್ರಮ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ಆದೇಶಿಸಿದೆ. ವಕೀಲ ಮತ್ತು ಬಿಜೆಪಿ ಸದಸ್ಯ ಆರ್ಮ ವಿ ಹಿರೇಮಠ್ ಅವರು ಸಲ್ಲಿಸಿರುವ ಅರ್ಜಿಯಲ್ಲಿ ಜಾರಕಿಹೊಳಿ ಅವರ ಖಾಸಗಿತನದ ಹಕ್ಕನ್ನು ರಕ್ಷಿಸಲು ಕೋರಿದ್ದರು.

ಕೇಬಲ್ ಟೆಲಿವಿಷನ್ ನೆಟ್‌ವರ್ಕ್‌ನಲ್ಲಿನ ಯಾವುದೇ ಪ್ರಸಾರವು ಕೇಬಲ್ ಟೆಲಿವಿಷನ್ ನೆಟ್‌ವರ್ಕ್‌ಗಳ (ನಿಯಂತ್ರಣ) ಕಾಯಿದೆ 1995 ರ ಸೆಕ್ಷನ್ 5 ರ ಅಡಿಯಲ್ಲಿ ವ್ಯಾಖ್ಯಾನಿಸಲಾದ 'ಕಾರ್ಯಕ್ರಮ ಸಂಹಿತೆʼಗೆ ಅನುಗುಣವಾಗಿ ಕಟ್ಟುನಿಟ್ಟಾಗಿ ಇರಬೇಕು ಎಂದು ಮಧ್ಯಂತರ ಆದೇಶದ ಮೂಲಕ ನಿರ್ದೇಶಿಸಲಾಗಿದೆ. ಕಾಯಿದೆಯನ್ನು 1994ರ ಕೇಬಲ್‌ ಟಿವಿ ನೆಟ್‌ವರ್ಕ್‌ ನಿಯಮ 6ರೊಂದಿಗೆ ಓದಿಕೊಳ್ಳತಕ್ಕದ್ದು ಎಂದು ನ್ಯಾಯಮೂರ್ತಿ ಪಿ ಎಸ್ ದಿನೇಶ್ ಕುಮಾರ್ ಅವರು ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.

ನ್ಯಾಯಾಲಯದ ಮಧ್ಯಂತರ ಆದೇಶಕ್ಕೆ ಅನುಸಾರವಾಗಿ, ಮಾರ್ಚ್ 9 ರಂದು ಬೆಂಗಳೂರು ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದು, ಕಾಯ್ದೆಯ ಸೆಕ್ಷನ್ 5 ಮತ್ತು ಸಂಬಂಧಿತ ನಿಯಮಗಳ ಅಡಿಯಲ್ಲಿ ವ್ಯಾಖ್ಯಾನಿಸಲಾದ ಕಾರ್ಯಕ್ರಮ ಸಂಹಿತೆಗೆ ಅನುಗುಣವಾಗಿರದ ಎಲ್ಲಾ ಪ್ರಸಾರಗಳನ್ನು ನಿಷೇಧಿಸಿದ್ದಾರೆ. ಮೇಲಿನ ನಿರ್ದೇಶನದ ಯಾವುದೇ ಉಲ್ಲಂಘನೆಯಾದರೆ ಕಾಯಿದೆಯ ಸೆಕ್ಷನ್ 16 ರ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಬಹುದಾಗಿದೆ ಎಂದು ಪೊಲೀಸ್ ಆಯುಕ್ತರ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ನಾ. ಕೆ ಎಸ್ ಪುಟ್ಟಸ್ವಾಮಿ ಮತ್ತು ಕೇಂದ್ರ ಸರ್ಕಾರ ನಡುವಣ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ನೀಡಿದ್ದ ತೀರ್ಪನ್ನು ಜಾರಿಗೆ ತರಬೇಕು ಮತ್ತು ಆ ಮೂಲಕ ಸಂವಿಧಾನದ 21 ನೇ ವಿಧಿಯಡಿ ಒದಗಿಸಲಾದ ಖಾಸಗಿತನದ ಹಕ್ಕನ್ನು ರಕ್ಷಿಸಬೇಕೆಂದು ಹಿರೇಮಠ್‌ ಅರ್ಜಿಯಲ್ಲಿ ಕೋರಿದ್ದಾರೆ. ಕಾರ್ಯಕ್ರಮದ ಸಂಹಿತೆ ಉಲ್ಲಂಘಿಸುವ ಮಾಧ್ಯಮಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಪೊಲೀಸ್ ಆಯುಕ್ತರಿಗೆ ನಿರ್ದೇಶನಗಳನ್ನು ನೀಡುವಂತೆ ಕೋರಿದ್ದರು.

ಮಹಿಳೆಯೊಂದಿಗೆ ಅನುರಕ್ತರಾದ ಸ್ಥಿತಿಯಲ್ಲಿ ಜಾರಕಿಹೊಳಿ ಅವರು ಇರುವ ದೃಶ್ಯಗಳನ್ನು ಒಳಗೊಂಡ ಸಿಡಿಯನ್ನು ಮಾಧ್ಯಮ ಸಂಸ್ಥೆಗಳು ಪ್ರಸಾರ ಮಾಡಿದ್ದನ್ನು ಹಿರೇಮಠ್‌ ಉಲ್ಲೇಖಿಸಿದ್ದಾರೆ. ಅಂತಹ ಪ್ರಸಾರ ಖಾಸಗಿತನದ ತೀವ್ರ ಉಲ್ಲಂಘನೆಯಾಗಿದೆ ಎಂದು ಅವರು ವಾದಿಸಿದರು.

ಅರ್ಜಿಯ ಮೂಲಕ ತಮ್ಮ ಖಾಸಗಿತನದ ಹಕ್ಕನ್ನು ಕೂಡ ರಕ್ಷಿಸಿಕೊಳ್ಳುತ್ತಿರುವುದಾಗಿ ಅರ್ಜಿದಾರರು ಹೇಳಿದ್ದು ಮಾಧ್ಯಮಗಳು ತಮ್ಮ ಮಾನವನ್ನೂ ಹರಾಜು ಹಾಕುವಂತಹ ವಸ್ತುವಿಷಯವನ್ನು ಒಳಗೊಂಡಿರಬಹುದಾದ ಸಾಧ್ಯತೆ ಇದೆ. ಅದನ್ನು ತಮ್ಮ ವೇದಿಕೆಗಳಲ್ಲಿ ಪ್ರಸಾರ ಮಾಡುವ ಅಥವಾ ಪ್ರಕಟಿಸುವ ಮೂಲಕ ಸಂವಿಧಾನದ 21 ನೇ ವಿಧಿಯಡಿ ಒದಗಿಸಲಾದ ತನ್ನ ಖಾಸಗಿತನದ ಹಕ್ಕನ್ನು ಕೂಡ ಉಲ್ಲಂಘಿಸಬಹುದು ಎಂದು ಆತಂಕ ವ್ಯಕ್ತಪಡಿಸಿದರು. ಕೆಲ ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಖಾಸಗಿತನದ ಮೇಲೆ ಆಕ್ರಮಣ ಮಾಡಿ ತಮ್ಮ ಘನತೆ ಮತ್ತು ಖ್ಯಾತಿಗೆ ಧಕ್ಕೆ ಉಂಟುಮಾಡುವ ಸಂಬಂಧ ಇನ್ನೊಂದು ಬಾರಿ ಯೋಚಿಸದೇ ಮುಂದಾಗಬಹುದು ಎನ್ನುವ ಭೀತಿ ಹೊಂದಿರುವುದಾಗಿ ಅರ್ಜಿದಾರರು ತಿಳಿಸಿದ್ದಾರೆ.

ತಮ್ಮ ವಿರುದ್ಧ ಯಾವುದೇ ಮಾನಹಾನಿಕರ ಸುದ್ದಿ ಪ್ರಸಾರ ಮಾಡದಂತೆ ಕೋರಿ ರಾಜ್ಯ ಸರ್ಕಾರದ ಆರು ಮಂದಿ ಸಚಿವರು ಇತ್ತೀಚೆಗೆ ನ್ಯಾಯಾಲಯದ ಮೊರೆ ಹೋಗಿದ್ದರು. ಬಳಿಕ ಸಚಿವರ ವಿರುದ್ಧ ಮಾನಹಾನಿಕರ ಸಂಗತಿಗಳನ್ನು ಪ್ರಸಾರ ಅಥವಾ ಪ್ರಕಟ ಮಾಡದಂತೆ ನ್ಯಾಯಾಲಯ ನಿರ್ಬಂಧ ವಿಧಿಸಿತ್ತು.

ಇತ್ತೀಚೆಗೆ, ಕರ್ನಾಟಕ ನ್ಯಾಯಾಲಯವು ಅರವತ್ತೇಳು ಮಾಧ್ಯಮಗಳನ್ನು ಕರ್ನಾಟಕ ಸರ್ಕಾರದ ಬಿಜೆಪಿಗೆ ಸೇರಿದ ಆರು ಮಂತ್ರಿಗಳ ವಿರುದ್ಧ ಯಾವುದೇ ಮಾನಹಾನಿಕರ ವಿಷಯವನ್ನು ಪ್ರಸಾರ ಮಾಡುವುದನ್ನು ಅಥವಾ ಪ್ರಕಟಿಸುವುದನ್ನು ನಿರ್ಬಂಧಿಸಿತ್ತು. ಪ್ರಸ್ತುತ ಪ್ರಕರಣ ಮುಂದಿನ ಮೇನಲ್ಲಿ ವಿಚಾರಣೆಗೆ ಬರುವ ನಿರೀಕ್ಷೆಯಿದೆ.