Rana Ayyub Facebook
ಸುದ್ದಿಗಳು

ವಿದೇಶ ಪ್ರಯಾಣ: ರಾಣಾ ಅಯ್ಯೂಬ್‌ಗೆ ಸದ್ಯಕ್ಕೆ ದೊರೆಯದ ಅನುಮತಿ; ಇ ಡಿ ಸಲ್ಲಿಸಬೇಕು ವಸ್ತುಸ್ಥಿತಿ ವರದಿ

ಕೋವಿಡ್‌ ಪರಿಹಾರ ಕಾಮಗಾರಿಗಳಿಗಾಗಿ ಸಂಗ್ರಹಿಸಿರುವ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎನ್ನುವ ಆರೋಪ ರಾಣಾ ಅವರ ಮೇಲಿದೆ.

Bar & Bench

ವಿದೇಶ ಪ್ರಯಾಣಕ್ಕೆ ಅನುಮತಿ ಕೋರಿ ಪತ್ರಕರ್ತೆ ರಾಣಾ ಆಯ್ಯೂಬ್‌ ಸಲ್ಲಿಸಿರುವ ಮನವಿಗೆ ಸಂಬಂಧಿಸಿದಂತೆ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ಜಾರಿ ನಿರ್ದೇಶನಾಲಯಕ್ಕೆ ಶುಕ್ರವಾರ ಹೈಕೋರ್ಟ್‌ ಸೂಚಿಸಿದೆ [ರಾಣಾ ಅಯ್ಯೂಬ್‌ ವರ್ಸ್‌ ಕೇಂದ್ರ ಸರ್ಕಾರ ಮತ್ತು ಇತರರು].

ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಚಂದ್ರಧಾರಿ ಸಿಂಗ್‌ ಅವರ ಏಕಸದಸ್ಯ ಪೀಠವು ಪ್ರಕರಣದ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದ್ದು ರಾಣಾ ಅಯ್ಯೂಬ್‌ ಅವರಿಗೆ ಯಾವುದೇ ಮಧ್ಯಂತರ ಪರಿಹಾರವನ್ನು ನೀಡಲಿಲ್ಲ.

ರಾಣಾ ಅಯ್ಯೂಬ್‌ ಅವರು ಮಂಗಳವಾರ ವಿದೇಶ ಪ್ರಯಾಣಕ್ಕೆ ಹೊರಟಿದ್ದ ವೇಳೆ ಅವರನ್ನು ವಿಮಾನವನ್ನು ಏರುವುದರಿಂದ ಇಮಿಗ್ರೇಷನ್‌ ಅಧಿಕಾರಿಗಳು ತಡೆಹಿಡಿದಿದ್ದರು. ಅವರ ಹೆಸರಿನಲ್ಲಿ ಲುಕ್‌ಔಟ್‌ ನೋಟಿಸ್‌ ಜಾರಿಯಾಗಿರುವುದಾಗಿ ಅಧಿಕಾರಿಗಳು ಹೇಳಿದ್ದರು.

ಕೋವಿಡ್‌ ಪರಿಹಾರ ಕಾಮಗಾರಿಗಳಿಗಾಗಿ ಸಂಗ್ರಹಿಸಿರುವ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎನ್ನುವ ಆರೋಪವನ್ನು ರಾಣಾ ಅಯ್ಯೂಬ್‌ ಅವರ ಮೇಲೆ ಹೊರಿಸಲಾಗಿದ್ದು ಅವರಿಗೆ ಸಂಬಂಧಿಸಿದ ರೂ. 1.77 ಕೋಟಿ ಆಸ್ತಿಯನ್ನು ಜಾರಿ ನಿರ್ದೇಶನಾಲಯವು ಜಪ್ತಿ ಮಾಡಿದೆ.

ಅಂತಾರಾಷ್ಟ್ರೀಯ ಪತ್ರಕರ್ತರ ಕೇಂದ್ರವು ಲಂಡನ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪತ್ರಕರ್ತರ ಮೇಲಿನ ಬೆದರಿಕೆಗಳ ಕುರಿತಾದ ವಿಚಾರವಾಗಿ ಭಾಷಣವನ್ನು ಮಾಡಲು ಅಯ್ಯೂಬ್‌ ಅವರು ತೆರಳಬೇಕಿತ್ತು. ಅಲ್ಲದೆ, ಅದರ ನಂತರ ಇಟೆಲಿಯಲ್ಲಿ ಆಯೋಜಿಸಲಾಗಿದ್ದ ಭಾರತದ ಪ್ರಜಾಸತ್ತಾತ್ಮಕತೆಯ ಕುರಿತಾದ ಸಮ್ಮೇಳನದಲ್ಲಿಯೂ ಅವರು ಮುಖ್ಯ ಭಾಷಣಕಾರರಾಗಿ ಪಾಲ್ಗೊಳ್ಳಬೇಕಿತ್ತು.