ಸುದ್ದಿಗಳು

ಸಿಬಿಐ ಪ್ರಕರಣದಲ್ಲಿ ಮುಂಬೈ ನ್ಯಾಯಾಲಯದಿಂದ ಜಾಮೀನು: ಯೆಸ್‌ ಬ್ಯಾಂಕ್‌ ರಾಣಾ ಕಪೂರ್ ಬಿಡುಗಡೆ

ಸಿಬಿಐ ತನಿಖೆ ನಡೆಸುತ್ತಿರುವ ಅವಾಂತ ರಿಯಾಲ್ಟಿಗೆ ಸಂಬಂಧಿಸಿದ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ವಿಶೇಷ ಸಿಬಿಐ ನ್ಯಾಯಾಲಯ ಜಾಮೀನು ನೀಡಿದ ಹಿನ್ನೆಲೆಯಲ್ಲಿ ಕಪೂರ್ ಇಂದು ತಲೋಜಾ ಜೈಲಿನಿಂದ ಶುಕ್ರವಾರ ಬಿಡುಗಡೆಗೊಂಡರು.

Bar & Bench

ಸಿಬಿಐ ದಾಖಲಿಸಿದ್ದ ಅವಾಂತ ರಿಯಾಲ್ಟಿಗೆ ಸಂಬಂಧಿಸಿದ ₹ 400 ಕೋಟಿ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್‌ ಅವರಿಗೆ ಮುಂಬೈ ನ್ಯಾಯಾಲಯ ಶುಕ್ರವಾರ ಜಾಮೀನು ಮಂಜೂರು ಮಾಡಿದೆ.

ಮಾರ್ಚ್ 2020ರಲ್ಲಿ ಬಂಧನಕ್ಕೊಳಗಾಗಿದ್ದ ಅವರು ನಂತರ 4 ವರ್ಷಗಳ ಕಾಲ ಜೈಲಿನಲ್ಲಿ ಕಳೆದಿದ್ದರು. ಆದೇಶದ ಹಿನ್ನೆಲೆಯಲ್ಲಿ ಕಪೂರ್ ಇಂದು ತಲೋಜಾ ಕೇಂದ್ರ ಕಾರಾಗೃಹದಿಂದ ಬಿಡುಗಡೆಗೊಂಡರು.

ಪಿಎಂಎಲ್ ಕಾಯಿದೆಯಡಿ ರೂಪುಗೊಂಡಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಂ ಜಿ ದೇಶಪಾಂಡೆ ಅವರು ಕಪೂರ್ ಅವರ ಜಾಮೀನು ಅರ್ಜಿಯ ಆದೇಶ ಪ್ರಕಟಿಸಿದರು. ವಿವರವಾದ ಆದೇಶ ನಿರೀಕ್ಷಿಸಲಾಗುತ್ತಿದೆ.

ದೆಹಲಿ ಮೂಲದ ಕಂಪನಿಯಾದ ಬ್ಲಿಸ್ ಅಬೋಡ್ ಪ್ರೈವೇಟ್ ಲಿಮಿಟೆಡ್ ಮೂಲಕ ನವದೆಹಲಿಯಲ್ಲಿನ ಪ್ರಮುಖ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳುವ ಉದ್ದೇಶದಿಂದ ಕಪೂರ್ ಅವರು ಸಾಲದ ಮೊತ್ತವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಸಿಬಿಐ ಪ್ರಕರಣ ದಾಖಲಿಸಿಕೊಂಡಿತ್ತು.

ಆರೋಪಪಟ್ಟಿಯಲ್ಲಿನ ಆರೋಪಗಳು ಪ್ರಕರಣದಲ್ಲಿ ತನ್ನ ಪಾತ್ರವನ್ನು ಪ್ರಾಥಮಿಕವಾಗಿ ಬಹಿರಂಗಪಡಿಸಿಲ್ಲ ಮತ್ತು ತನ್ನ ವಿರುದ್ಧ ಯಾವುದೇ ಆರೋಪ ನಿಗದಿ ಮಾಡಿಲ್ಲ ಎಂದು ತಿಳಿಸಿ ಕಪೂರ್ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.

ಎರಡೂ ಕಡೆಯವರ ವಾದ ಸುದೀರ್ಘವಾಗಿ ಆಲಿಸಿದ ಸಿಬಿಐ ವಿಶೇಷ ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿದ್ದಾರೆ.

ತಮ್ಮ ಕುಟುಂಬದೊಂದಿಗೆ ನಂಟು ಹೊಂದಿದ ಕಂಪನಿಯ ಮೂಲಕ ₹ 600 ಕೋಟಿಗಳಷ್ಟು ಕಿಕ್‌ಬ್ಯಾಕ್ ಗಳಿಸಿದ್ದಾರೆ ಎಂಬ ಆರೋಪದ ಮೇಲೆ ಕಪೂರ್ ಅವರನ್ನು ಮಾರ್ಚ್ 8, 2020ರಂದು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿತ್ತು. ಯೆಸ್ ಬ್ಯಾಂಕ್ ಮೂಲಸೌಕರ್ಯ ಕಂಪನಿಯಾದ ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (DHFL) ಗೆ ನೀಡಿದ ಸಾಲಗಳಿಗೆ ಪ್ರತಿಯಾಗಿ ಈ ಕಿಕ್ ಬ್ಯಾಕ್ ಪಡೆಯಲಾಗಿದೆ ಎಂದು ಆರೋಪಿಸಲಾಗಿತ್ತು. 2023ರ ಡಿಸೆಂಬರ್‌ನಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅವರಿಗೆ ಜಾಮೀನು ದೊರೆತಿತ್ತು. ಆದರೆ, ಬೇರೆ ಪ್ರಕರಣಗಳಲ್ಲಿ ಜೈಲು ಸೇರಿದ್ದರಿಂದ ಬಿಡುಗಡೆ ಸಾಧ್ಯವಾಗಿರಲಿಲ್ಲ. ಅವಂತಾ ರಿಯಾಲ್ಟಿಗೆ ಸಂಬಂಧಿಸಿದ ಪ್ರಕರಣದಲ್ಲಿ 2022ರಲ್ಲಿ ದೆಹಲಿ ನ್ಯಾಯಾಲಯವೂ ಅವರಿಗೆ ಜಾಮೀನು ನೀಡಿತ್ತು. ಕಪೂರ್ ಜಾಮೀನು ಪಡೆದ ಕೊನೆಯ ಬಾಕಿ ಪ್ರಕರಣ ಸಿಬಿಐನದ್ದಾಗಿದೆ. ಹೀಗಾಗಿ ಅವರು ಸೆರೆವಾಸದಿಂದ ಮುಕ್ತರಾಗಿದ್ದಾರೆ