ರಾಹುಲ್ ಗಾಂಧಿ
ರಾಹುಲ್ ಗಾಂಧಿ ಫೇಸ್ ಬುಕ್
ಸುದ್ದಿಗಳು

ಅತ್ಯಾಚಾರ ಸಂತ್ರಸ್ತೆಯ ಗುರುತು ಬಹಿರಂಗ ಪ್ರಕರಣ: ಟ್ವೀಟ್ ಅಳಿಸಿರುವುದಾಗಿ ದೆಹಲಿ ಹೈಕೋರ್ಟ್‌ಗೆ ತಿಳಿಸಿದ ರಾಹುಲ್

Bar & Bench

ಒಂಬತ್ತು ವರ್ಷದ ಅತ್ಯಾಚಾರ ಸಂತ್ರಸ್ತೆಯ ಗುರುತನ್ನು ಬಹಿರಂಗಪಡಿಸಿದ್ದ 2021ರ ಟ್ವೀಟ್ ಅಳಿಸಿಹಾಕಿರುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದರು.

ಈಗಾಗಲೇ ಭಾರತದಲ್ಲಿ ಟ್ವೀಟನ್ನು ತಡೆಹಿಡಿಯಲಾಗಿದ್ದು ಇದೀಗ ಅಂತಾರಾಷ್ಟೀಯ ಮಟ್ಟದಲ್ಲಿಯೂ ತೆಗೆದುಹಾಕಲಾಗಿದೆ. ಎಂದು ರಾಹುಲ್‌ ಗಾಂಧಿ ಪರ ಹಾಜರಾದ ವಕೀಲೆ ತರನ್ನುಮ್ ಚೀಮಾ ತಿಳಿಸಿದರು. ಈ ಹೇಳಿಕೆಯನ್ನು ಟ್ವಿಟರ್‌ ಪರ ವಕೀಲರು ದೃಢಪಡಿಸಿದರು.

ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಿರುವ ದೆಹಲಿ ಪೊಲೀಸರು ರಾಹುಲ್‌ ಅವರ ವಿರುದ್ಧ 2021ರಲ್ಲಿ ಎಫ್‌ಐಆರ್‌ ದಾಖಲಾಗಿದ್ದು ಪ್ರಕರಣದ ತನಿಖೆ ಇನ್ನೂ ನಡೆಯುತ್ತಿದೆ ಎಂದು ಹೇಳಿದ್ದಾರೆ. 

ರಾಹುಲ್ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮನ್‌ಮೀತ್‌ ಪ್ರೀತಮ್ ಸಿಂಗ್ ಅರೋರಾ ಅವರಿಗೆ ರಾಹುಲ್‌ ಟ್ವೀಟ್‌ ತೆಗೆದುಹಾಕಿರುವ ವಿಚಾರ ತಿಳಿಸಲಾಯಿತು.

ದೆಹಲಿ ಪೊಲೀಸರ ಸ್ಥಿತಿಗತಿ ವರದಿ ಮತ್ತು ರಾಹುಲ್ ಗಾಂಧಿ ಪರ ವಕೀಲರು ನೀಡಿದ ಹೇಳಿಕೆಗಳು, ಮನವಿಗಳು ತೃಪ್ತಿಕರವಾಗಿವೆ ಎಂದು ಗಮನಿಸಿದ ನ್ಯಾಯಾಲಯ ಅರ್ಜಿಯನ್ನು ವಿಲೇವಾರಿ ಮಾಡಿತು.

ದೆಹಲಿಯ ಪುರಾನಾ ನಂಗಲ್ ಪ್ರದೇಶದ ಸ್ಮಶಾನದಲ್ಲಿ ಸ್ಥಾಪಿಸಲಾಗಿದ್ದ ಜಲ ಘಟಕದಲ್ಲಿ ನೀರು ತರಲು ಹೋಗಿದ್ದ 9 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು. ಬಾಲಕಿಯ ಪೋಷಕರನ್ನು ಭೇಟಿಯಾಗಿದ್ದ ರಾಹುಲ್‌, ಅವರನ್ನು ಸಂತೈಸುತ್ತಿರುವ ಚಿತ್ರಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. ಈ ಚಿತ್ರಗಳಲ್ಲಿ ಪೋಷಕರ ಚಹರೆಯನ್ನು ಮಸುಕಾಗಿಸಿರಲಿಲ್ಲ.

ಇದು ಸಂತ್ರಸ್ತ ಬಾಲಕಿಯ ಗುರುತು ಬಹಿರಂಗಕ್ಕೆ ಕಾರಣವಾಗುವ ಅಂಶ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್‌) ರಾಹುಲ್ ಗಾಂಧಿ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳುವಂತೆ ದೂರು ದಾಖಲಿಸಿತ್ತು. ಹಿಂದಿನ ವಿಚಾರಣೆಯಲ್ಲಿ, ಹೈಕೋರ್ಟ್ ಈ ಪೋಸ್ಟ್ ತೆಗೆದುಹಾಕುವಂತೆ ರಾಹುಲ್ ಅವರಿಗೆ ಸೂಚಿಸಿತ್ತು.