ಸುದ್ದಿಗಳು

ಹುಬ್ಬಳ್ಳಿ ಅತ್ಯಾಚಾರ ಆರೋಪಿ ಎನ್‌ಕೌಂಟರ್ ಪ್ರಕರಣ: ಹೈಕೋರ್ಟ್‌ಗೆ ಸ್ಥಿತಿಗತಿ ವರದಿ ಸಲ್ಲಿಸಿದ ರಾಜ್ಯ ಸರ್ಕಾರ

ರಿತೇಶ್‌ ಕುಮಾರ್‌ ಎನ್‌ಕೌಂಟರ್‌ ಪ್ರಕರಣದ ತನಿಖೆ ಮತ್ತು ವಿಚಾರಣೆಯ ಮೇಲೆ ಹೈಕೋರ್ಟ್‌ ನಿಗಾ ಇಡಬೇಕು. ಅಲ್ಲದೇ, ವಿಚಾರಣೆಯನ್ನು ಮುಂದೂಡಬೇಕು ಎಂದು ಕೋರಿದ ಅರ್ಜಿದಾರರ ಪರ ವಕೀಲೆ.

Bar & Bench

ಹುಬ್ಬಳ್ಳಿಯಲ್ಲಿ ಈಚೆಗೆ ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿ, ಆನಂತರ ಪೊಲೀಸ್‌ ಎನ್‌ಕೌಂಟರ್‌ನಲ್ಲಿ ಬಲಿಯಾದ ಬಿಹಾರದ ರಿತೇಶ್‌ ಕುಮಾರ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಗುರುವಾರ ಕರ್ನಾಟಕ ಹೈಕೋರ್ಟ್‌ಗೆ ಸ್ಥಿತಿಗತಿ ವರದಿ ಸಲ್ಲಿಸಿತು.

ಬೆಂಗಳೂರಿನ ಪೀಪಲ್ಸ್‌ ಯೂನಿಯನ್‌ ಫಾರ್‌ ಸಿವಿಲ್‌ ಲಿಬರ್ಟೀಸ್‌ ಮತ್ತು ಡಾ. ಮಧು ಭೂಷಣ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್‌ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ರಾಜ್ಯ ಸರ್ಕಾರದ ಪರವಾಗಿ ಹಾಜರಾಗಿದ್ದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು “ಸಮಯದ ಕೊರತೆಯ ಹಿನ್ನೆಲೆಯಲ್ಲಿ ಸ್ಥಿತಿಗತಿ ವರದಿಯನ್ನು ನ್ಯಾಯಾಲಯದಲ್ಲಿ ಸಲ್ಲಿಸಿದ್ದೇವೆ. ಏನೆಲ್ಲಾ ಅನುಪಾಲಿಸಬೇಕೋ ಅದೆಲ್ಲವನ್ನೂ ನಾವು ಮುಂದುವರಿಸುತೇವೆ. ನ್ಯಾಯಾಲಯದ ಆದೇಶ ಅನುಪಾಲಿಸುವುದು ನಮ್ಮ ಕರ್ತವ್ಯ” ಎಂದರು.

ಆಗ ಪೀಠವು ಅರ್ಜಿದಾರರ ಪರ ವಕೀಲೆಯನ್ನು ಕುರಿತು “ಸ್ಥಿತಿಗತಿ ವರದಿ ಸಲ್ಲಿಸುವ ಮೂಲಕ ನಿಮ್ಮ, ನಮ್ಮ ಹಾಗೂ ಸರ್ಕಾರದ ಪಾತ್ರವೂ ಮುಗಿದಿದೆ. ಇಷ್ಟಾಗಿಯೂ ಅರ್ಜಿ ಬಾಕಿ ಉಳಿಸಬೇಕೆಂದರೆ ಉಳಿಸಲಾಗುವುದು” ಎಂದರು.

ಅರ್ಜಿದಾರರ ಪರ ವಕೀಲರು “ರಿತೇಶ್‌ ಕುಮಾರ್‌ ಎನ್‌ಕೌಂಟರ್‌ ಪ್ರಕರಣದ ತನಿಖೆ ಮತ್ತು ವಿಚಾರಣೆಯ ಮೇಲೆ ಹೈಕೋರ್ಟ್‌ ನಿಗಾ ಇಡಬೇಕು. ಪಿಯುಸಿಎಲ್‌ ವರ್ಸಸ್‌ ಮಹಾರಾಷ್ಟ್ರ ರಾಜ್ಯ ಪ್ರಕರಣದಲ್ಲಿನ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಹೇಳಲಾಗಿದೆ. ಇದಲ್ಲದೇ ಹಿರಿಯ ವಕೀಲ ಆದಿತ್ಯ ಸೋಂಧಿ ಅವರು ಸುಪ್ರೀಂ ಕೋರ್ಟ್‌ ವಿಚಾರಣೆಯಲ್ಲಿ ಭಾಗಿಯಾಗಿರುವುದರಿಂದ ಅಂತಿಮ ವಾದ ಮಂಡಿಸಲು ಕಾಲಾವಕಾಶ ನೀಡಬೇಕು” ಎಂದು ಕೋರಿದರು. ಇದನ್ನು ಆಲಿಸಿದ ಪೀಠವು ಏಪ್ರಿಲ್‌ 28ಕ್ಕೆ ವಿಚಾರಣೆ ಮುಂದೂಡಿತು.

ಹಿನ್ನೆಲೆ: ಪೊಲೀಸರು ತಿಳಿಸಿರುವಂತೆ, ಏಪ್ರಿಲ್‌ 13ರಂದು ರಿತೇಶ್‌ ಹುಬ್ಬಳ್ಳಿಯ ವಿಜಯನಗರದ ಮನೆಯ ಸಮೀಪ ಆಟವಾಡುತ್ತಿದ್ದ ಐದು ವರ್ಷದ ಬಾಲಕಿಯನ್ನು ತಿಂಡಿ-ತಿನಿಸು ನೀಡುವುದಾಗಿ ಪುಸಲಾಯಿಸಿ ಅಪಹರಿಸಿದ್ದ. ತದನಂತರ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದ. ಇದಾದ ಕೆಲವೇ ನಿಮಿಷಗಳಲ್ಲಿ ರಿತೇಶ್‌ ಬಂಧನವಾಗಿತ್ತು. ಸಂಜೆ ಆತನನ್ನು ನಗರದ ತಾರಿಹಾಳ ಸಮೀಪ ಸ್ಥಳ ಮಹಜರಿಗೆ ಕರೆದೊಯ್ಯಲಾಗಿತ್ತು. ಈ ವೇಳೆ ಪೊಲೀಸ್‌ ವಾಹನದ ಮೇಲೆ ಕಲ್ಲು ತೂರಿ ಹಲ್ಲೆ ನಡೆಸಿ, ಪರಾರಿಯಾಗಲು ಯತ್ನಿಸಿದ್ದ. ಅಶೋಕನಗರದ ಪಿಎಸ್‌ಐ ಅನ್ನಪೂರ್ಣ ಅವರು ಗಾಳಿಯಲ್ಲಿ ಗುಂಡು ಹಾರಿಸಿದರೂ ಆರೋಪಿ ತಪ್ಪಿಸಿಕೊಂಡು ಓಡಲು ಯತ್ನಿಸಿದ್ದ. ಈ ವೇಳೆ ಆತನ ಕಾಲಿಗೆ ಮತ್ತು ಬೆನ್ನಿಗೆ ಗುಂಡೇಟು ಹೊಡೆಯಲಾಗಿತ್ತು. ಗಾಯಗೊಂಡಿದ್ದ ಆತನನ್ನು ಕೆಎಂಸಿ-ಆರ್‌ಐ ಆಸ್ಪತ್ರೆಗೆ ತರಲಾಗಿತ್ತು. ಆದರೆ, ಆ ವೇಳೆಗಾಗಲೇ ರಿತೇಶ್‌ ಕುಮಾರ್‌ ಸಾವನ್ನಪ್ಪಿದ್ದ ಎಂದು ತಿಳಿಸಲಾಗಿತ್ತು.