Bumble app & Karnataka HC 
ಸುದ್ದಿಗಳು

ಬಂಬಲ್‌ ಆ್ಯಪ್‌ನಲ್ಲಿ ಪರಿಚಯವಾಗಿದ್ದ ವಿವಾಹಿತೆಯಿಂದ ಅತ್ಯಾಚಾರ ಆರೋಪ: ಪ್ರಕರಣ ರದ್ದುಪಡಿಸಿದ ಹೈಕೋರ್ಟ್‌

ಮಹಿಳೆಯೊಬ್ಬರಿಗೆ ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿ ಲೈಂಗಿಕವಾಗಿ ಬಳಸಿಕೊಂಡ ಆರೋಪದ ಸಂಬಂಧ ವ್ಯಕ್ತಿಯೊಬ್ಬರ ವಿರುದ್ಧ ದಾಖಲಾಗಿದ್ದ ಅತ್ಯಾಚಾರ ಪ್ರಕರಣವನ್ನು ಹೈಕೋರ್ಟ್‌ ಈಚೆಗೆ ರದ್ದುಪಡಿಸಿದೆ.

Bar & Bench

“ವಿವಾಹಿತೆಗೆ ಮದುವೆಯಾಗುವುದಾಗಿ ಭರವಸೆ ನೀಡುವುದಕ್ಕೆ ಸಾಧ್ಯವಾಗುವುದಿಲ್ಲ” ಎಂದು ಈಚೆಗೆ ಅಭಿಪ್ರಾಯಪಟ್ಟಿರುವ ಕರ್ನಾಟಕ ಹೈಕೋರ್ಟ್‌, ಡೇಟಿಂಗ್‌ ಆ್ಯಪ್‌ ‘ಬಂಬಲ್‌ʼ ಮೂಲಕ ಪರಿಚಯವಾದ ವ್ಯಕ್ತಿಯೊಬ್ಬನ ವಿರುದ್ಧ ವಿವಾಹಿತೆ ದಾಖಲಿಸಿದ್ದ ಅತ್ಯಾಚಾರ ಪ್ರಕರಣವನ್ನು ರದ್ದುಪಡಿಸಿದೆ.

ಮಹಿಳೆಯೊಬ್ಬರಿಗೆ ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿ ಲೈಂಗಿಕವಾಗಿ ಬಳಸಿಕೊಂಡ ಆರೋಪದ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ಪುಟ್ಟೇನಹಳ್ಳಿ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಅತ್ಯಾಚಾರ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಕೇರಳದ ಇಡುಕ್ಕಿ ಜಿಲ್ಲೆಯ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

“ಬಂಬಲ್‌ ಆ್ಯಪ್‌ನಲ್ಲಿ ಅರ್ಜಿದಾರನಿಗೆ ಪರಿಚಯವಾಗುವಾಗ ದೂರುದಾರೆಯು ತನ್ನನ್ನು ವಿಚ್ಛೇದಿತ ಮಹಿಳೆ ಎಂದು  ಬಿಂಬಿಸಿಕೊಂಡಿದ್ದರು. ಇದರಿಂದ ಆಕೆಯೊಂದಿಗೆ ಸ್ನೇಹ ಸಂಬಂಧ ಬೆಳೆಸಲು ಅರ್ಜಿದಾರ ಆಸಕ್ತಿ ತೋರಿದ್ದರು. ನಂತರ ಇಬ್ಬರ ನಡುವೆ ದೈಹಿಕ ಸಂಬಂಧ ಬೆಳೆಯಿತು. ಕೆಲ ತಿಂಗಳ ನಂತರ ದೂರುದಾರೆ ವಿಚ್ಛೇದಿತಳಲ್ಲ. ಆಕೆಯ ಮೊದಲ ಮದುವೆ ಚಾಲ್ತಿಯಲ್ಲಿದ್ದು, ಐದು ವರ್ಷದ ಮಗು ಇರುವ ಸಂಗತಿ ತಿಳಿಯಿತು. ಆಗ ಮದುವೆಯಾಗಲು ಅರ್ಜಿದಾರ ನಿರಾಕರಿಸಿದ. ಆ ಕಾರಣಕ್ಕೆ ಈ ದೂರು ದಾಖಲಾಗಿದೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

“ಈಗಾಗಲೇ ನೆರವೇರಿರುವ ಮದುವೆ ಅಮಾನ್ಯವಾಗದ ಹೊರತು, ವಿವಾಹಿತ ಮಹಿಳೆಗೆ ಮದುವೆಯಾಗುವುದಾಗಿ ಭರವಸೆ ನೀಡಲು ಸಾಧ್ಯವಾಗುವುದಿಲ್ಲ. ಮೇಲಾಗಿ ಅರ್ಜಿದಾರ ಮತ್ತು ದೂರುದಾರೆಯ ನಡುವಿನ ಲೈಂಗಿಕ ಕ್ರಿಯೆ ಒಪ್ಪಿತವಾಗಿದ್ದು, ಅದು ಅತ್ಯಾಚಾರ ಅಪರಾಧವಾಗುವುದಿಲ್ಲ ಎಂದಿರುವ ಪೀಠವು 30ನೇ ಎಸಿಎಂಎಂ ನ್ಯಾಯಾಲಯದಲ್ಲಿ ಅರ್ಜಿದಾರರ ವಿರುದ್ಧ ನಡೆಯುತ್ತಿರುವ ವಿಚಾರಣೆ ರದ್ದುಪಡಿಸಿ ಆದೇಶಿಸಿದೆ.

ಅರ್ಜಿದಾರರ ಪರ ವಕೀಲರಾದ ಬೇಬಿ ಬಾಲನ್‌ ಅವರು “ಅರ್ಜಿದಾರ ಹಾಗೂ ದೂರುದಾರ ಮಹಿಳೆ ಬಂಬಲ್‌ ಆ್ಯಪ್‌ ಮೂಲಕ ಪರಿಚಯವಾಗಿದ್ದರು. ಆ ವೇಳೆ ತಾನು ವಿಚ್ಛೇದಿತಳು ಎಂಬುದಾಗಿ ದೂರುದಾರೆ ಬಿಂಬಿಸಿಕೊಂಡಿದ್ದರು. ವಾಸ್ತವಾಗಿ ಆಕೆಗೆ ವಿಚ್ಛೇದನೆ ಆಗಿರಲಿಲ್ಲ. ಈ ವಿಷಯ ತಿಳಿದು ಅರ್ಜಿದಾರ ಮದುವೆಗೆ ನಿರಾಕರಿಸಿದ್ದ. ಇದರಿಂದ ಮಹಿಳೆ ದೂರು ದಾಖಲಿಸಿದ್ದಾರೆ. ಇಬ್ಬರ ನಡುವೆ ಒಪ್ಪಿತ ಲೈಂಗಿಕ ಕ್ರಿಯೆ ನಡೆದಿದ್ದು, ಅದು ಅತ್ಯಾಚಾರ ಅಪರಾಧವಾಗುವುದಿಲ್ಲ. ಆದ್ದರಿಂದ ಅರ್ಜಿದಾರನ ವಿರುದ್ಧದ ಪ್ರಕರಣ ರದ್ದುಪಡಿಸಬೇಕು” ಎಂದು ಕೋರಿದ್ದರು.

ದೂರುದಾರೆಯ ಪರ ವಕೀಲೆ ಎಂ ಎಲ್‌ ಅನನ್ಯಾ ಅವರು “ಪ್ರಕರಣವನ್ನು ತಾವು ಮುಂದುರಿಸುವುದಿಲ್ಲ. ನಿರ್ಧಾರವನ್ನು ನ್ಯಾಯಾಲಯದ ವಿವೇಚನೆಗೆ ಬಿಡಲಾಗುವುದು” ಎಂದು ತಿಳಿಸಿದ್ದರು.

ಸರ್ಕಾರಿ ವಕೀಲೆ ರಶ್ಮಿ ಪಾಟೀಲ್‌ ಅವರು “ಅತ್ಯಾಚಾರ ಪ್ರಕರಣದ ದಾಖಲಾಗಿರುವುದರಿಂದ ವಿಚಾರಣಾಧೀನ ನ್ಯಾಯಾಲಯದ ಪರಿಪೂರ್ಣ ವಿಚಾರಣೆಯಿಂದ ಅರ್ಜಿದಾರ ಆರೋಪಮುಕ್ತನಾಗಿ ಹೊರಗೆ ಬರಬೇಕು. ಆದ್ದರಿಂದ ಆತನ ವಿರುದ್ಧದ ಪ್ರಕರಣ ರದ್ದುಪಡಿಸಬಾರದು” ಎಂದು ಕೋರಿದ್ದರು.

Akhil Thomas Vs State of Karnataka.pdf
Preview