Justice M Nagaprasanna and Karnataka HC 
ಸುದ್ದಿಗಳು

ಪ್ರೀತಿಸಿ ಮದುವೆಯಾದ ಒಂದೇ ದಿನಕ್ಕೆ ಪತಿ, ಆತನ ಕುಟುಂಬದವರ ವಿರುದ್ಧ ಅತ್ಯಾಚಾರ ಪ್ರಕರಣ: ತನಿಖೆಗೆ ಹೈಕೋರ್ಟ್‌ ತಡೆ

ಬೆಂಗಳೂರಿನ ವೈಯಾಲಿಕಾವಲ್‌ನಲ್ಲಿ ದಾಖಲಾಗಿರುವ ಪ್ರಕರಣ ರದ್ದುಕೋರಿ ದೂರುದಾರ ಮಹಿಳೆಯ ಪತಿ ಮತ್ತವರ ಕುಟುಂಬದ ಸದಸ್ಯರು ಅರ್ಜಿ ಸಲ್ಲಿಸಿದ್ದಾರೆ.

Bar & Bench

ಪ್ರೀತಿಸಿ, ಮದುವೆಯಾದ ಒಂದೇ ದಿನಕ್ಕೆ ಪತಿಯ ಮನೆ ತೊರೆದು ಗಂಡ ಮತ್ತು ಆತನ ಕುಟುಂಬದವರ ವಿರುದ್ಧವೇ ಅತ್ಯಾಚಾರ ಆರೋಪ ಮಾಡಿ ಪತ್ನಿ ದಾಖಲಿಸಿದ್ದ ದೂರಿನ ತನಿಖೆ ಮತ್ತು ಅದರ ಮುಂದಿನ ಪ್ರಕ್ರಿಯೆಗಳಿಗೆ ಕರ್ನಾಟಕ ಹೈಕೋರ್ಟ್ ಈಚೆಗೆ ಮಧ್ಯಂತರ ತಡೆ ನೀಡಿದೆ.

ಬೆಂಗಳೂರಿನ ವೈಯಾಲಿಕಾವಲ್‌ನಲ್ಲಿ ದಾಖಲಾಗಿರುವ ಪ್ರಕರಣ ರದ್ದುಕೋರಿ ದೂರುದಾರ ಮಹಿಳೆಯ ಪತಿ ಮತ್ತವರ ಕುಟುಂಬದ ಸದಸ್ಯರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಮಧ್ಯಂತರ ಆದೇಶ ಮಾಡಿದೆ.

ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದ ಪೀಠವು ದೇವಸ್ಥಾನದಲ್ಲಿ ನಡೆದಿರುವ ವಿವಾಹ ಹಾಗೂ ವಿವಾಹ ನೋಂದಣಿಯ ದಿನದಂದು ತೆಗೆಯಲಾಗಿರುವ ಭಾವಚಿತ್ರಗಳನ್ನು ಗಮನಿಸಿದರೆ ದೂರುದಾರ ಮಹಿಳೆಗೆ ತಾನು ಮದುವೆಯಾಗುತ್ತಿರುವ ಬಗ್ಗೆ ಸಂಪೂರ್ಣ ಅರಿವಿದ್ದು, ಸ್ವಇಚ್ಛೆಯಿಂದ ಮದುವೆಯಾಗಿದ್ದಾರೆ ಎಂಬ ವಿಚಾರ ಸ್ಪಷ್ಟವಾಗುತ್ತದೆ. ವಿವಾಹ ನೋಂದಣಿಯ ರೆಜಿಸ್ಟರ್‌ನಲ್ಲೂ ಸಹಿ ಹಾಕಿದ್ದಾರೆ. ದೂರುದಾರ ಮಹಿಳೆ ಕಾನೂನು ಪ್ರಕ್ರಿಯೆಯನ್ನು ದುರುಪಯೋಗ ಪಡಿಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಮಧ್ಯಂತರ ಆದೇಶದಲ್ಲಿ ನ್ಯಾಯಾಲಯ ಹೇಳಿದೆ.

ಮೊದಲನೇ ಅರ್ಜಿದಾರನ ಪ್ರೀತಿಯಲ್ಲಿ ಬಿದ್ದ ದೂರುದಾರ ಮಹಿಳೆಯು ಹಲವು ವರ್ಷಗಳ ಕಾಲ ಅವರನ್ನು ಪ್ರೀತಿಸಿ ನಂತರ ಮದುವೆಯಾಗಿದ್ದಾರೆ. ಕೆಲವೇ ದಿನ ಅವರೊಂದಿಗಿದ್ದು ಬಳಿಕ ಅತ್ಯಾಚಾರ ಆರೋಪ ಮಾಡುತ್ತಿದ್ದಾರೆ. ಕೇವಲ ಪತಿಯ ವಿರುದ್ಧ ಅಲ್ಲದೆ, ಮದುವೆಗೆ ಹಾಜರಿದ್ದ ಪತಿಯ ಕುಟುಂಬ ಸದಸ್ಯರನ್ನೂ ಅಪರಾಧದ ವ್ಯಾಪ್ತಿಗೆ ಎಳೆದು ತಂದಿದ್ದಾರೆ ಎನ್ನುವುದು ತಿಳಿಯುತ್ತಿದೆ. ಆದ್ದರಿಂದ, ಪ್ರಕರಣ ರದ್ದುಕೋರಿ ಸಲ್ಲಿಸಿರುವ ಅರ್ಜಿ ಇತ್ಯರ್ಥವಾಗುವವರೆಗೂ ಎಲ್ಲ ಅರ್ಜಿದಾರರ ವಿರುದ್ಧದ ತನಿಖೆ ಹಾಗೂ ಮುಂದಿನ ಪ್ರಕ್ರಿಯೆಗಳಿಗೆ ತಡೆ ನೀಡಲಾಗುತ್ತಿದೆ ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.

ಪ್ರಕರಣದ ಹಿನ್ನೆಲೆ: ಖಾಸಗಿ ಸಂಸ್ಥೆಯೊಂದಲ್ಲಿ ಸಹೋದ್ಯೋಗಿಗಳಾಗಿದ್ದ ದೂರುದಾರ ಮಹಿಳೆ ಮತ್ತು ಮೊದಲನೇ ಅರ್ಜಿದಾರ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. 2023ರ ಜನವರಿ 27ರಂದು ಸುಮಾರು ನೂರು ಜನರ ಸಮ್ಮುಖದಲ್ಲಿ ದೇವಸ್ಥಾನವೊಂದರಲ್ಲಿ ಮದುವೆಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮರುದಿನವೇ ಮಲ್ಲೇಶ್ವರದ ಉಪ ನೋಂದಣಾಧಿಕಾರಿಗಳ ಮುಂದೆ ಹಾಜರಾಗಿ ವಿವಾಹ ನೋಂದಣಿ ಮಾಡಿಸಿಕೊಂಡಿದ್ದರು. ಅದೇ ದಿನ, ಪತಿಯ ಮನೆಯಲ್ಲಿ ಪತ್ನಿಯ ಜನ್ಮದಿನ ಆಚರಿಸಲಾಗಿತ್ತು. ಅಂದು ಪತ್ನಿಯ ಮೊಬೈಲ್‌ನಲ್ಲಿದ್ದ ವಾಟ್ಸ್‌ಆ್ಯಪ್ ಸಂದೇಶ ಪರಿಶೀಲಿಸಿದ್ದ ಪತಿಗೆ ವಿವಾಹಕ್ಕೂ ಮುನ್ನ ಆಕೆ ಬೇರೊಬ್ಬನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ಆ ವ್ಯಕ್ತಿ ಈಗಲೂ ಪತ್ನಿಯ ಸಂಪರ್ಕದಲ್ಲಿರುವುದು ತಿಳಿದಿತ್ತು.

ಇದೇ ವಿಷಯಕ್ಕೆ ದಂಪತಿಯ ನಡುವೆ ದೊಡ್ಡ ಮಟ್ಟದ ಗಲಾಟೆ ನಡೆದು, ಬೇರೊಬ್ಬನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರೂ, ನನ್ನನ್ನು ಮದುವೆಯಾಗಿ ನನ್ನ ಜೀವನವನ್ನೇಕೆ ಹಾಳು ಮಾಡಿದೆ ಎಂದು ಪತ್ನಿಯನ್ನು ಪತಿ ಪ್ರಶ್ನಿಸಿದ್ದನು.

ಇದರಿಂದ ಅಸಮಾಧಾನಗೊಂಡ ಪತ್ನಿ, ಜನವರಿ 29ರಂದು ಗಂಡನ ಮನೆ ತೊರೆದು ಹೋಗಿದ್ದಲ್ಲದೆ, ವೈವಾಹಿಕ ಸಂಬಂಧ ಮುರಿದುಕೊಳ್ಳುವುದಾಗಿ ಬೆದರಿಕೆ ಹಾಕಿದ್ದಳು. ಇಷ್ಟೆಲ್ಲ ನಡೆದು 32 ದಿನಗಳ ವರೆಗೆ ಪತಿ-ಪತ್ನಿಯ ನಡುವೆ ಯಾವುದೇ ಮಾತುಕತೆ ಇರಲಿಲ್ಲ. ಆ ನಂತರ ಪತಿ ಮತ್ತು ಆತನ ಕುಟುಂಬ ಸದಸ್ಯರ ವಿರುದ್ಧ ಅತ್ಯಾಚಾರ, ಅಕ್ರಮ ಬಂಧನ, ಹಲ್ಲೆ, ಉದ್ದೇಶಪೂರ್ವಕ ಅಪಮಾನ ಹಾಗೂ ಕ್ರಿಮಿನಲ್ ಬೆದರಿಕೆ ಆರೋಪದಲ್ಲಿ ಪತ್ನಿ ದೂರು ದಾಖಲಿಸಿದ್ದರು.

ಮದುವೆಯ ದಿನ ಏನು ನಡೆಯಿತು ಎನ್ನುವುದೇ ತನಗೆ ತಿಳಿದಿಲ್ಲ. ಆ ದಿನ ನಾನು ನಶೆಯಲ್ಲಿದ್ದೆ, ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಸಹಿ ಮಾಡಿರುವುದೂ ನೆನಪಿಲ್ಲ. ನನ್ನ ಹಿಂದಿನ ಸಂಬಂಧದ ಬಗ್ಗೆ ತಿಳಿದು ಪತಿ ಮತ್ತವರ ಕುಟುಂಬದವರು ಚಿತ್ರ ಹಿಂಸೆ ನೀಡಿದ್ದಾರೆ. ನಮ್ಮಿಬ್ಬರ ಮದುವೆಯಾಗಿದ್ದರೂ ನನ್ನೊಂದಿಗೆ ಪತಿ ನಡೆಸಿರುವ ಲೈಂಗಿಕ ಕ್ರಿಯೆ ಅತ್ಯಾಚಾರಕ್ಕೆ ಸಮನಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದರು.