BJP MLA Munirathna 
ಸುದ್ದಿಗಳು

ಅತ್ಯಾಚಾರ ಪ್ರಕರಣ: ಶಾಸಕ ಮುನಿರತ್ನಗೆ ಅಕ್ಟೋಬರ್‌ 18ರ ತನಕ ನ್ಯಾಯಾಂಗ ಬಂಧನ

ಜಾತಿ ನಿಂದನೆ ಮತ್ತು ಲಂಚಕ್ಕೆ ಬೇಡಿಕೆ ಹಾಕಿರುವ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಈಗಾಗಲೇ ಮುನಿರತ್ನಗೆ ಜಾಮೀನು ದೊರೆತಿದೆ. ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ಕೋರಿರುವ ಅರ್ಜಿಯು ವಿಚಾರಣಾ ಹಂತದಲ್ಲಿದೆ.

Bar & Bench

ಅತ್ಯಾಚಾರ ಪ್ರಕರಣದಲ್ಲಿ ಬಂಧಿತವಾಗಿರುವ ಬಿಜೆಪಿಯ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಅವರನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಅಕ್ಟೋಬರ್‌ 18ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದೆ.

ಕಳೆದ 10 ದಿನಗಳಿಂದ ವಿಶೇಷ ತನಿಖಾ ತಂಡದ (ಎಸ್‌ಐಟಿ) ಕಸ್ಟಡಿಯಲ್ಲಿದ್ದ ಮುನಿರತ್ನರನ್ನು ಮ್ಯಾಜಿಸ್ಟ್ರೇಟ್‌ ಕೆ ಎನ್‌ ಶಿವಕುಮಾರ್‌ ಅವರು ಇಂದು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿದರು.

ಲಂಚ ಬೇಡಿಕೆ ಮತ್ತು ಜಾತಿ ನಿಂದನೆ ಪ್ರಕರಣಗಳಲ್ಲಿ ಜಾಮೀನು ಪಡೆದು ಹೊರಬರುತ್ತಿದ್ದಂತೆ ಎಸ್‌ಐಟಿಯು ಮುನಿರತ್ನರನ್ನು ವಶಕ್ಕೆ ಪಡೆದಿತ್ತು. ಬಳಿಕ ನ್ಯಾಯಾಲಯವು ಮುನಿರತ್ನ ಅವರನ್ನು ಹತ್ತು ದಿನ ಎಸ್‌ಐಟಿ ಕಸ್ಟಡಿಗೆ ನೀಡಿತ್ತು. ಇಂದು ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ನ್ಯಾಯಾಲಯವು ಮುನಿರತ್ನರನ್ನು ನ್ಯಾಯಾಂಗ ಬಂಧನಕ್ಕೆ ನೀಡಿದೆ.

ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗಾಗಿ ರಾಜ್ಯ ಸರ್ಕಾರವು ಸೆಪ್ಟೆಂಬರ್‌ 21ರಂದು ಎಸ್‌ಐಟಿ ರಚಿಸಿದೆ. ಬಿಬಿಎಂಪಿ ಮಾಜಿ ಸದಸ್ಯ ವೇಲುನಾಯ್ಕರ್‌ ದಾಖಲಿಸಿರುವ ಜಾತಿ ನಿಂದನೆ, ಗುತ್ತಿಗೆದಾರ ಚೆಲುವರಾಜುವಿಗೆ ಲಂಚಕ್ಕೆ ಬೇಡಿಕೆ ಮತ್ತು ಬೆದರಿಕೆ ಹಾಕಿದ ಸಂಬಂಧ ಬೆಂಗಳೂರಿನ ವೈಯಾಲಿಕಾವಲ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅತ್ಯಾಚಾರ ಆರೋಪ ಸಂಬಂಧ ರಾಮನಗರದ ಕಗ್ಗಲೀಪುರ ಠಾಣೆಯಲ್ಲಿ ಮುನಿರತ್ನ ಮತ್ತು ಇತರೆ ಐದು ಮಂದಿಯ ಎಫ್‌ಐಆರ್‌ ದಾಖಲಾಗಿದೆ. ನಕಲಿ ಬಿಲ್‌ ಸೃಷ್ಟಿಸಿ ಸರ್ಕಾರದಕ್ಕೆ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿರುವ ಪ್ರಕರಣಗಳನ್ನು ಎಸ್‌ಐಟಿಗೆ ನೀಡಲಾಗಿದೆ.

ಜಾತಿ ನಿಂದನೆ ಮತ್ತು ಲಂಚಕ್ಕೆ ಬೇಡಿಕೆ ಹಾಕಿರುವ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಈಗಾಗಲೇ ಮುನಿರತ್ನಗೆ ಜಾಮೀನು ದೊರೆತಿದೆ. ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ಕೋರಿರುವ ಅರ್ಜಿಯು ವಿಚಾರಣಾ ಹಂತದಲ್ಲಿದೆ.