Prajwal Revanna & Karnataka HC 
ಸುದ್ದಿಗಳು

ಅತ್ಯಾಚಾರ ಪ್ರಕರಣ: ನಿರೀಕ್ಷಣಾ ಜಾಮೀನು ಅರ್ಜಿ ಹಿಂಪಡೆಯಲು ಪ್ರಜ್ವಲ್‌ ರೇವಣ್ಣಗೆ ಅನುಮತಿಸಿದ ಹೈಕೋರ್ಟ್‌

ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಜೆಡಿಎಸ್‌ ಶಾಸಕ ಎಚ್‌ ಡಿ ರೇವಣ್ಣಗೆ ವಿಚಾರಣಾಧೀನ ನ್ಯಾಯಾಲಯ ಮಂಜೂರು ಮಾಡಿರುವ ಜಾಮೀನು ಆದೇಶ ಬದಿಗೆ ಸರಿಸುವಂತೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ಮೂರು ವಾರ ಮುಂದೂಡಿದೆ.

Bar & Bench

ಹಲವು ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಯಾಗಿರುವ ಪ್ರಜ್ವಲ್‌ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹಿಂಪಡೆಯಲು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಅನುಮತಿಸಿದೆ.

ಎಸ್‌ಐಟಿ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ಗೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ಕೋರಿ ಪ್ರಜ್ವಲ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ವಿಚಾರಣೆ ಆರಂಭವಾಗುತ್ತಿದ್ದಂತೆ ವಿಶೇಷ ಸರ್ಕಾರಿ ಅಭಿಯೋಜಕರಾದ ಪ್ರೊ. ರವಿವರ್ಮ ಕುಮಾರ್‌ ಅವರು “ಮೇ 31ರಂದು ಪ್ರಜ್ವಲ್‌ ಬಂಧನದ ಹಿನ್ನೆಲೆಯಲ್ಲಿ ಅರ್ಜಿಯು ಅನೂರ್ಜಿತಗೊಂಡಿದೆ ಎಂದು ಪ್ರಜ್ವಲ್‌ ಜೂನ್‌ 12ರಂದು ವಿಚಾರಾಣಾಧೀನ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ಹಿಂಪಡೆದಿದ್ದಾರೆ. ಹೀಗಾಗಿ, ಅವರು ಈಗ ಹೈಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಹೇಗೆ ಕೋರಲಾಗುತ್ತದೆ? ಹೀಗಾಗಿ, ಅರ್ಜಿಯು ಊರ್ಜಿತವಾಗುವುದಿಲ್ಲ” ಎಂದರು.

ಅರ್ಜಿದಾರರ ಪರ ವಕೀಲ ಜಿ ಅರುಣ್‌ ಅವರು “ಅರ್ಜಿ ಹಿಂಪಡೆಯಲು ತಾವು ನಿರ್ಧರಿಸಿದ್ದೇವೆ. ಇದನ್ನು ಪುರಸ್ಕರಿಸಬೇಕು” ಎಂದು ಪೀಠಕ್ಕೆ ಮನವಿ ಮಾಡಿದರು.

ಇದನ್ನು ಆಲಿಸಿದ ಪೀಠವು ಅರ್ಜಿ ಇತ್ಯರ್ಥಪಡಿಸಲಾಗಿದೆ ಎಂದು ಆದೇಶಿಸಿತು. ಕೊನೆಗೆ ವಕೀಲ ಅರುಣ್‌ ಅವರು ಸತ್ರ ನ್ಯಾಯಾಲಯದಲ್ಲಿ ಜಾಮೀನು ಕೋರುವ ಸ್ವಾತಂತ್ರ್ಯ ಕಲ್ಪಿಸಬೇಕು ಎಂದು ಮನವಿ ಮಾಡಿದರು. ಆಗ ಪೀಠವು ಕಾನೂನಿನಡಿ ಲಭ್ಯವಿರುವ ಎಲ್ಲಾ ಸ್ವಾತಂತ್ರ್ಯವೂ ಅರ್ಜಿದಾರರಿಗೆ ಮುಕ್ತವಾಗಿರಲಿದೆ ಎಂದಿತು.

ಬೆಂಗಳೂರಿನ ಸಿಐಡಿಯ ಸೈಬರ್‌ ಅಪರಾಧ ವಿಭಾಗದ ಪೊಲೀಸರು ಐಪಿಸಿ ಸೆಕ್ಷನ್‌ಗಳಾದ 376(2)(ಎನ್‌), 376(2)(ಕೆ), 506, 354ಎ, 354ಬಿ, 354ಸಿ ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ 66ಇ ಅಡಿ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಪ್ರಜ್ವಲ್‌ ನಿರೀಕ್ಷಣಾ ಜಾಮೀನು ಕೋರಿದ್ದರು.

ರೇವಣ್ಣ ಜಾಮೀನು ಪ್ರಶ್ನೆ ಅರ್ಜಿ ಮುಂದೂಡಿಕೆ

ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಜೆಡಿಎಸ್‌ ಶಾಸಕ ಎಚ್‌ ಡಿ ರೇವಣ್ಣಗೆ ವಿಚಾರಣಾಧೀನ ನ್ಯಾಯಾಲಯ ಮಂಜೂರು ಮಾಡಿರುವ ಜಾಮೀನು ಆದೇಶ ಬದಿಗೆ ಸರಿಸುವಂತೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ಮೂರು ವಾರ ಮುಂದೂಡಿದೆ.

ವಿಚಾರಣೆ ಆರಂಭವಾಗುತ್ತಿದ್ದಂತೆ ನ್ಯಾಯಮೂರ್ತಿಗಳು “ಸ್ವಲ್ಪ ಒತ್ತಡವಿದೆ. ಬೇರೆ ಯಾವುದಾದರೂ ದಿನ ಈ ಅರ್ಜಿ ವಿಚಾರಣೆ ನಡೆಸಬಹುದೇ” ಎಂದರು.

ಆಗ ಎಸ್‌ಪಿಪಿ ಮತ್ತು ರೇವಣ್ಣ ಪರ ಹಿರಿಯ ವಕೀಲ ಸಿ ವಿ ನಾಗೇಶ್‌ ಅವರು ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯವು ಮೂರು ವಾರ ವಿಚಾರಣೆ ಮುಂದೂಡಿತು.

ಸತೀಶ್‌ ಬಾಬು ಮತ್ತಿತರರ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಸತೀಶ್‌ ಬಾಬು ಅಲಿಯಾಸ್‌ ಸತೀಶ್‌ ಬಾಬಣ್ಣ, ಕೆ ಎ ರಾಜಗೋಪಾಲ್‌, ಎಚ್‌ ಕೆ ಸುಜಯ್‌, ಎಚ್‌ ಎನ್‌ ಮಧು, ಎಸ್‌ ಟಿ ಕೀರ್ತಿ ಜಾಮೀನು ಕೋರಿ ಪ್ರತ್ಯೇಕವಾಗಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್‌ ಜುಲೈ 19ಕ್ಕೆ ಮುಂದೂಡಿದೆ.

ವಿಚಾರಣೆ ಆರಂಭವಾಗುತ್ತಿದ್ದಂತೆ ವಿಶೇಷ ಸರ್ಕಾರಿ ಅಭಿಯೋಜಕರಾದ ಪ್ರೊ. ರವಿವರ್ಮ ಕುಮಾರ್‌ ಅವರು “ಎಲ್ಲಾ ಅರ್ಜಿಗಳ ಆಕ್ಷೇಪಣೆ ಸಿದ್ಧವಾಗಿದೆ. ನಾವು ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್‌) ವರದಿಗಾಗಿ ಕಾಯುತ್ತಿದ್ದೇವೆ. ಮುಂದಿನ ಬುಧವಾರದ ವೇಳೆಗೆ ಆಕ್ಷೇಪಣೆ ಸಲ್ಲಿಕೆ ಮಾಡಲಾಗುವುದು. ಜುಲೈ 19ರಂದು ವಿಚಾರಣೆ ಕೈಗೆತ್ತಿಕೊಳ್ಳಬಹುದು ಎಂದರು.

ಅರ್ಜಿದಾರರ ಪರವಾಗಿ ವಾದಿಸಿದ ಹಿರಿಯ ವಕೀಲ ಸಿ ಎಚ್‌ ಜಾಧವ್‌ ಅವರು “ಇದಕ್ಕೆ ಎಫ್‌ಎಸ್‌ಎಲ್‌ ವರದಿಯ ಅಗತ್ಯವಿಲ್ಲ. ಮೊದಲ ಆರೋಪಿ ಎಚ್‌ ಡಿ ರೇವಣ್ಣ ಈಗಾಗಲೇ ಜಾಮೀನಿನ ಮೇಲೆ ಹೊರಗಿದ್ದಾರೆ. ಅರ್ಜಿದಾರರು ಎರಡು ತಿಂಗಳಿಂದ ಕಸ್ಟಡಿಯಲಿದ್ದಾರೆ. ಅವರೆಲ್ಲರೂ ಕೃಷಿಕರಾಗಿದ್ದಾರೆ. ಏಳನೇ ಆರೋಪಿ ಕೆ ಎ ರಾಜಗೋಪಾಲ್‌ ಅವರಿಗೆ 71 ವರ್ಷ ವಯಸ್ಸಾಗಿದ್ದು, ಅವರಿಗೆ ಓಡಾಡಲು ಕಷ್ಟವಾಗಿದೆ” ಎಂದರು.

ಆಗ ಪೀಠವು “ಪ್ರೊ. ಕುಮಾರ್‌ ಅವರು ಸಾಮಾನ್ಯವಾಗಿ ಸಮಯ ಕೇಳುವುದಿಲ್ಲ. ಅಸಾಮಾನ್ಯ ಸಂದರ್ಭದಲ್ಲಿ ಮಾತ್ರ ಅವರು ಸಮಯ ಕೇಳುತ್ತಾರೆ” ಎಂದರು.

ಇದಕ್ಕೆ ಪ್ರೊ. ಕುಮಾರ್‌ ಅವರು “ಅರ್ಜಿದಾರ ಕಾಲಾಳುಗಳು ಸಂತ್ರಸ್ತೆ ಅಪಹರಣದ ಪಿತೂರಿಯನ್ನು ಜಾರಿಗೊಳಿಸಿದ್ದಾರೆ” ಎಂದರು. ಪಕ್ಷಕಾರರ ವಾದ ಆಲಿಸಿದ ಪೀಠವು ಅಂತಿಮವಾಗಿ ವಿಚಾರಣೆಯನ್ನು ಜುಲೈ 19ಕ್ಕೆ ಮುಂದೂಡಿತು.