High Court of Karnataka 
ಸುದ್ದಿಗಳು

ಅತ್ಯಾಚಾರ ಪ್ರಕರಣ: ಮಾಜಿ ಸಚಿವ ಪ್ರಭು ಚೌವ್ಹಾಣ್‌ ಪುತ್ರ ಪ್ರತೀಕ್‌ಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದ ಹೈಕೋರ್ಟ್‌

ನಿಶ್ಚಿತಾರ್ಥ ಮುರಿದುಬಿದ್ದಿದ್ದು, ದೂರುದಾರೆಯು ಅರ್ಜಿದಾರನ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರಕರಣದ ವಾಸ್ತವಾಂಶ ಪರಿಗಣಿಸಿದರೆ ಅರ್ಜಿದಾರರಿಗೆ ಮಧ್ಯಂತರ ಜಾಮೀನು ನೀಡಬಹುದಾಗಿದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ.

Bar & Bench

ವಿವಾಹವಾಗುವುದಾಗಿ ನಂಬಿಸಿ ಯುವತಿ ಮೇಲೆ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ ಆರೋಪ ಸಂಬಂಧ ಬಂಧನ ಭೀತಿಯಲ್ಲಿದ್ದ ಮಾಜಿ ಸಚಿವ ಪ್ರಭು ಚೌವ್ಹಾಣ್‌ ಅವರ ಪುತ್ರ ಪ್ರತೀಕ್‌ಗೆ ಕರ್ನಾಟಕ ಹೈಕೋರ್ಟ್‌ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ಪ್ರಕರಣ ಸಂಬಂಧ ಜಾಮೀನು ಕೋರಿ ಪ್ರತೀಕ್‌ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ನ್ಯಾಯಮೂರ್ತಿ ಮೊಹಮ್ಮದ್‌ ನವಾಜ್‌ ಅವರ ಏಕಸದಸ್ಯ ಪೀಠವು ಪುರಸ್ಕರಿಸಿದೆ.

“ಪ್ರಕರಣದ ವಾಸ್ತವಾಂಶಗಳನ್ನು ಪರಿಗಣಿಸಿದರೆ ಜಾಮೀನು ಕೋರಿ ಸಲ್ಲಿಸಿರುವ ಮುಖ್ಯ ಅರ್ಜಿ ಇತ್ಯರ್ಥವಾಗುವರೆಗೆ ಮಧ್ಯಂತರ ಜಾಮೀನು ನೀಡಬೇಕು ಎಂಬ ಅರ್ಜಿದಾರರ ಮನವಿ ಪರಿಗಣಿಸಹುದಾಗಿದೆ. ಅದರಂತೆ ಮುಖ್ಯ ಅರ್ಜಿಯ ವಿಲೇವಾರಿಗೆ ಬಾಕಿಯಿರುವ ಸಮಯದಲ್ಲಿ ಅರ್ಜಿದಾರರನ್ನು ಬಂಧಿಸಿದರೆ, ಎರಡು ಲಕ್ಷ ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್‌ ಮತ್ತು ಅಷ್ಟೇ ಮೊತ್ತಕ್ಕೆ ಒಬ್ಬರ ಭದ್ರತಾ ಖಾತರಿ ನೀಡಿ ಬಿಡುಗಡೆ ಮಾಡಬೇಕು ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಉಪ್ಪಾರಪೇಟೆ ಠಾಣಾ ಪೊಲೀಸರಿಗೆ ನಿರ್ದೇಶಿಸಿದೆ. ಪ್ರತೀಕ್‌ ತನಿಖೆಗೆ ಸಹಕರಿಸಬೇಕು. ಪ್ರಾಸಿಕ್ಯೂಷನ್‌ ಸಾಕ್ಷ್ಯಧಾರಗಳನ್ನು ತಿರುಚಬಾರದು” ಎಂದು ಪೀಠ ನಿರ್ದೇಶಿಸಿದೆ.

“ದೂರು ಓದಿದಾಗ ಅರ್ಜಿದಾರರು ಮತ್ತು ದೂರುದಾರೆಯು ಇನ್‌ಸ್ಟ್ರಾಗ್ರಾಂನಲ್ಲಿ ಪರಿಚಯವಾಗಿದ್ದರು. ಬಳಿಕ ಇಬ್ಬರ ನಡುವೆ ಸಂದೇಶಗಳು ವಿನಿಯಮವಾಗಿದ್ದು, 2023ರ ಫೆಬ್ರವರಿ 25ರಂದು ವಿವಾಹ ನಿಶ್ಚಿತಾರ್ಥ ನಡೆದಿತ್ತು. ನಿಶ್ಚಿತಾರ್ಥ ಮುರಿದುಬಿದ್ದಿದ್ದು, ದೂರುದಾರೆಯು ಅರ್ಜಿದಾರನ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರಕರಣದ ವಾಸ್ತವಾಂಶ ಪರಿಗಣಿಸಿದರೆ ಅರ್ಜಿದಾರರಿಗೆ ಮಧ್ಯಂತರ ಜಾಮೀನು ನೀಡಬಹುದಾಗಿದೆ” ಎಂದು ಪೀಠ ಹೇಳಿದೆ.

ಮದುವೆಯಾಗುವುದಾಗಿ ನಂಬಿಸಿ ನಿಶ್ಚಿತಾರ್ಥ ಮಾಡಿಕೊಂಡ ನಂತರ ತನ್ನ ಮೇಲೆ ಪ್ರತೀಕ್‌ ಪದೇ ಪದೇ ಅತ್ಯಾಚಾರ ನಡೆಸಿದ್ದಾರೆ. ಜೀವ ಬೆದರಿಕೆ ಹಾಕಿದ್ದು, ಮಾರಕಾಸ್ತ್ರಗಳಿಂದ ಹಲ್ಲೆ ಸಹ ನಡೆಸಿದ್ದಾರೆ ಎಂದು ಆರೋಪಿಸಿ ಸಂತ್ರಸ್ತೆಯು ಬೀದರ್‌ ಮಹಿಳಾ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ನಂತರ ಪ್ರಕರಣದ ತನಿಖೆಯು ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್‌ ಠಾಣೆಗೆ ವರ್ಗಾವಣೆಯಾಗಿತ್ತು. ಇದರಿಂದ ಜಾಮೀನು ಕೋರಿ ಪ್ರತೀಕ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿದಾರರ ಪರ ವಕೀಲರು “ಮಧ್ಯಂತರ ಜಾಮೀನು ಕೋರಿ ಅರ್ಜಿ ಸಲ್ಲಿಸಿ, ಪ್ರತೀಕ್‌ ಮತ್ತು ದೂರುದಾರೆಯ ವಿವಾಹ ನಿಶ್ಚಿತಾರ್ಥ ನಡೆದಿತ್ತು. ಆ ಸಮಾರಂಭದಲ್ಲಿ ಸಾವಿರಾರು ಜನ ಭಾಗವಹಿಸಿದ್ದರು. ಅವರಿಬ್ಬರೂ ಹಲವು ಸಂದರ್ಭಗಳಲ್ಲಿ ಒಟ್ಟಿಗೆ ಪ್ರಯಾಣಿಸಿದ್ದಾರೆ. ಆದರೆ, ಕಾರಣಾಂತರಗಳಿಂದ ಮದುವೆ ನಡೆದಿಲ್ಲ” ಎಂದರು.

“ಅರ್ಜಿದಾರ ವಿರುದ್ಧದ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ. ಪ್ರತೀಕ್‌ ಅವರನ್ನು ಬಂಧಿಸಲು ಪೊಲೀಸದರು ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ. ಒಂದು ವೇಳೆ ಪೊಲೀಸರು ಬಂಧಿಸಿದರೆ, ಅರ್ಜಿದಾರಿಗೆ ತೊಂದರೆ ಉಂಟಾಗುತ್ತದೆ. ಹೀಗಾಗಿ, ಮಧ್ಯಂತರ ಜಾಮೀನು ನೀಡಬೇಕು” ಎಂದು ಕೋರಿ ಅರ್ಜಿ ಸಲ್ಲಿಸಿದ್ದರು.

ದೂರುದಾರೆಯ ಪರ ವಕೀಲರು “ಆರಂಭದಿಂದಲೂ ಅರ್ಜಿದಾರರಿಗೆ ದೂರುದಾರರನ್ನು ಮದುವೆಯಾಗುವ ಯಾವುದೇ ಉದ್ದೇಶವಿರಲಿಲ್ಲ. ಇದರಿಂದ ಅರ್ಜಿದಾರ ವಿರುದ್ಧದ ಆರೋಪಗಳಲ್ಲಿ ಸತ್ಯಾಂಶವಿದೆ ಎಂಬುದಾಗಿ ತಿಳಿದು ಬರುತ್ತದೆ” ಎಂದು ಆರೋಪಿಸಿದ್ದರು.