Prajwal Revanna Facebook
ಸುದ್ದಿಗಳು

ಅತ್ಯಾಚಾರ ಪ್ರಕರಣ: ಪ್ರಜ್ವಲ್‌ ರೇವಣ್ಣ 14 ದಿನ ನ್ಯಾಯಾಂಗ ಬಂಧನಕ್ಕೆ

ಪ್ರಜ್ವಲ್‌ ವಿರುದ್ಧ ಮೂರು ಪ್ರತ್ಯೇಕ ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು, ಅವರನ್ನು ಮೊದಲನೇ ಪ್ರಕರಣದಲ್ಲಿ ಬಂಧಿಸಲಾಗಿದೆ. ಎರಡನೇ ಪ್ರಕರಣದಲ್ಲಿ ಅವರನ್ನು ಬಾಡಿ ವಾರೆಂಟ್‌ ಮೇಲೆ ಎಸ್‌ಐಟಿಯು ವಶಕ್ಕೆ ಪಡೆದುಕೊಂಡಿತ್ತು.

Bar & Bench

ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಪ್ರಜ್ವಲ್‌ ರೇವಣ್ಣ ಅವರನ್ನು ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಮಂಗಳವಾರ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿದೆ.

ಎರಡನೇ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್‌ ರೇವಣ್ಣ ಅವರನ್ನು ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್‌ ಕೆ ಎನ್‌ ಶಿವಕುಮಾರ್‌ ಅವರು ಜೂನ್‌ 13ರಿಂದ 18ರವರೆಗೆ ಎಸ್‌ಐಟಿ ಕಸ್ಟಡಿಗೆ ನೀಡಿದ್ದರು. ಇಂದು ಎಸ್‌ಐಟಿ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಪ್ರಜ್ವಲ್‌ರನ್ನು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು.

ಪ್ರಜ್ವಲ್‌ ವಿರುದ್ಧ ಮೂರು ಪ್ರತ್ಯೇಕ ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು, ಅವರನ್ನು ಮೊದಲನೇ ಪ್ರಕರಣದಲ್ಲಿ ಬಂಧಿಸಲಾಗಿದೆ. ಎರಡನೇ ಪ್ರಕರಣದಲ್ಲಿ ಅವರನ್ನು ಬಾಡಿ ವಾರೆಂಟ್‌ ಮೇಲೆ ಎಸ್‌ಐಟಿಯು ವಶಕ್ಕೆ ಪಡೆದುಕೊಂಡಿತ್ತು. ಕಾನೂನಾತ್ಮಕ ಪ್ರಶ್ನೆಗಳಿರುವ ಹಿನ್ನೆಲೆಯಲ್ಲಿ ಅವರನ್ನು ಮೂರನೇ ಅತ್ಯಾಚಾರ ಪ್ರಕರಣದಲ್ಲಿ ಎಸ್‌ಐಟಿಯು ಇಂದು ವಶಕ್ಕೆ ಪಡೆದಿಲ್ಲ. ಬದಲಿಗೆ ನ್ಯಾಯಾಂಗ ಬಂಧನಕ್ಕೆ ನೀಡಬಹುದು ಎಂದು ಪ್ರಾಸಿಕ್ಯೂಷನ್‌ ಪೀಠಕ್ಕೆ ತಿಳಿಸಿತ್ತು. ಅದರಂತೆ ನ್ಯಾಯಾಲಯವು ಪ್ರಜ್ವಲ್‌ರನ್ನು ಔಪಚಾರಿಕವಾಗಿ ನ್ಯಾಯಾಂಗ ಬಂಧನಕ್ಕೆ ನೀಡಿದೆ.

ನಾಳೆ ಜೈಲಿನಿಂದಲೇ ಪ್ರಜ್ವಲ್‌ ಅವರನ್ನು ವಿಡಿಯೊ ಕಾನ್ಫರೆನ್ಸ್‌ ಮೂಲಕ ಮ್ಯಾಜಿಸ್ಟ್ರೇಟ್‌ ಮುಂದೆ ಹಾಜರುಪಡಿಸಲಾಗುತ್ತದೆ. ಅಲ್ಲಿ, ಮೂರನೇ ಪ್ರಕರಣದಲ್ಲಿ ಪ್ರಜ್ವಲ್‌ ಅವರನ್ನು ಎಸ್‌ಐಟಿ ವಶಕ್ಕೆ ಕೇಳಲಾಗುವುದು ಎಂದು ಪ್ರಾಸಿಕ್ಯೂಷನ್‌ ಮೂಲಗಳು “ಬಾರ್‌ ಅಂಡ್‌ ಬೆಂಚ್‌”ಗೆ ತಿಳಿಸಿವೆ.

ಮೇ 31ರಂದು ಪ್ರಜ್ವಲ್‌ ರೇವಣ್ಣ ಬಂಧನವಾಗಿದ್ದು, ಮೊದಲಿಗೆ ಅವರನ್ನು ಜೂನ್‌ 6ವರೆಗೆ ಎಸ್‌ಐಟಿ ಕಸ್ಟಡಿಗೆ ನೀಡಲಾಗಿತ್ತು. ಆನಂತರ ಜೂನ್‌ 10ರವರೆಗೆ ಎಸ್‌ಐಟಿ ಕಸ್ಟಡಿ ವಿಸ್ತರಿಸಲಾಗಿತ್ತು. ತದನಂತರ ಪ್ರಜ್ವಲ್‌ರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ಈ ಮಧ್ಯೆ, ಜೂನ್‌ 13ರಂದು 18ರವರೆಗೆ ಪ್ರಜ್ವಲ್‌ರನ್ನು ಮತ್ತೆ ಎಸ್‌ಐಟಿ ಕಸ್ಟಡಿಗೆ ನೀಡಲಾಗಿತ್ತು.