Prajewal Revanna Facebook
ಸುದ್ದಿಗಳು

ಅತ್ಯಾಚಾರ ಪ್ರಕರಣ: ಪ್ರಜ್ವಲ್‌ ರೇವಣ್ಣರ ಎಸ್‌ಐಟಿ ಕಸ್ಟಡಿ ಅಂತ್ಯ; ಜೂನ್‌ 24ರವರೆಗೆ ನ್ಯಾಯಾಂಗ ಬಂಧನ

ಪ್ರಕರಣದ ಮಾಹಿತಿ ಪಡೆದ ನ್ಯಾಯಾಲಯವು ಪ್ರಜ್ವಲ್‌ಗೆ ಜೂನ್‌ 24ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿತು. ಈ ಹಿನ್ನೆಲೆಯಲ್ಲಿ ಅವರನ್ನು ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರೀಯ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ.

Bar & Bench

ಅತ್ಯಾಚಾರ ಪ್ರಕರಣದ ಆರೋಪಿಯಾಗಿರುವ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣರನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಸೋಮವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದೆ.

ಪ್ರಜ್ವಲ್‌ ಅವರ ಎಸ್‌ಐಟಿ ಕಸ್ಟಡಿಯು ಇಂದಿಗೆ ಅಂತ್ಯವಾಗುತ್ತಿದ್ದ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳು ಅವರನ್ನು ವಿಶೇಷ ಮ್ಯಾಜಿಸ್ಟ್ರೇಟ್‌ ಕೆ ಎನ್‌ ಶಿವಕುಮಾರ್‌ ಅವರ ಮುಂದೆ ಹಾಜರುಪಡಿಸಿದರು.

ಪ್ರಕರಣದ ಮಾಹಿತಿ ಪಡೆದ ನ್ಯಾಯಾಲಯವು ಪ್ರಜ್ವಲ್‌ಗೆ ಜೂನ್‌ 24ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿತು. ಈ ಹಿನ್ನೆಲೆಯಲ್ಲಿ ಅವರನ್ನು ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರೀಯ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ.

ಮೇ ೩೧ರಂದು ವಿದೇಶದಿಂದ ಬಂದಿಳಿದ್ದ ಪ್ರಜ್ವಲ್‌ರನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದರು. ಮಾರನೇಯ ದಿನ ನ್ಯಾಯಾಲಯದ ಮುಂದೆ ಹಾಜರುಪಡಿಸಿ ತನಿಖಾಧಿಕಾರಿಗಳು ಅವರನ್ನು ಜೂನ್‌ 6ರವರೆಗೆ ತನಿಖೆಗಾಗಿ ಕಸ್ಟಡಿಗೆ ಪಡೆದಿದ್ದರು. ಬಳಿಕ, ಜೂನ್‌ 10ರವರೆಗೆ ಪ್ರಜ್ವಲ್‌ ಅವರ ಕಸ್ಟಡಿ ವಿಸ್ತರಿಸಲಾಗಿತ್ತು.

ಪ್ರಜ್ವಲ್‌ ವಿರುದ್ಧ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಅವುಗಳ ತನಿಖೆಯನ್ನು ಎಸ್‌ಐಟಿಗೆ ವಹಿಸಲಾಗಿದೆ.

ಜೆಡಿಎಸ್‌ ಶಾಸಕ ಎಚ್‌ ಡಿ ರೇವಣ್ಣ ಅವರ ಮನೆಯಲ್ಲಿ ಮನೆ ಕೆಲಸ ಮಾಡುತ್ತಿದ್ದ ಮಹಿಳೆ ನೀಡಿದ ದೂರು ಆಧರಿಸಿ ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಪ್ರಜ್ವಲ್‌ ರೇವಣ್ಣ 2ನೇ ಆರೋಪಿಯಾಗಿದ್ದಾರೆ. ಅವರ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 354 (ಎ), 354 (ಡಿ), 376, 506, 505 ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ 66ಇ ಅಡಿ ಪ್ರಕರಣ ದಾಖಲಿಸಲಾಗಿದೆ.

ಇನ್ನು, ಬೆಂಗಳೂರಿನ ಸಿಐಡಿ ಠಾಣೆಯಲ್ಲಿ ಪ್ರಜ್ವಲ್‌ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 376 (2) (ಎನ್‌), 506, 354ಎ(1)(ii), 354(ಬಿ), 354(ಸಿ) ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ 66ಇ ಅಡಿ ಪ್ರಕರಣ ದಾಖಲಿಸಲಾಗಿದೆ.

ಇದಲ್ಲದೇ, ಬೆಂಗಳೂರಿನ ಸಿಐಡಿ ಪೊಲೀಸ್‌ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ಗಳಾದ 376(2)(ಎನ್)‌, 376(2)(ಕೆ), 506, 354ಎ(1)(ii), 354(ಬಿ), 354(ಸಿ) ಮತ್ತು ಐಟಿ ಕಾಯಿದೆ ಸೆಕ್ಷನ್‌ 66ಇ ಅಡಿ ಪ್ರಜ್ವಲ್‌ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.