ಗುಜರಾತ್ ಹೈಕೋರ್ಟ್ ಮತ್ತು ವೈವಾಹಿಕ ಅತ್ಯಾಚಾರ 
ಸುದ್ದಿಗಳು

ಪತಿಯೇ ಅತ್ಯಾಚಾರ ಎಸಗಿದರೂ ಅದು ಅತ್ಯಾಚಾರ: ಗುಜರಾತ್ ಹೈಕೋರ್ಟ್

ಹೆಣ್ಣುಮಕ್ಕಳನ್ನು ಹಿಂಬಾಲಿಸುವಿಕೆ ಮತ್ತು ಕಾಡುವಿಕೆಯನ್ನು (ಈವ್‌ ಟೀಸಿಂಗ್‌) ಸಾಮಾನ್ಯೀಕರಿಸುವ 'ಹುಡುಗರು ಸದಾ ಹುಡುಗರೇ' ಎಂಬ ಸಾಮಾಜಿಕ ಮನೋಭಾವ ಬದಲಿಸುವ ಅಗತ್ಯ ಇದೆ ಎಂದು ನ್ಯಾ. ದಿವ್ಯೇಶ್ ಜೋಶಿ ಒತ್ತಿ ಹೇಳಿದರು.

Bar & Bench

ವಿವಿಧ ದೇಶಗಳು ವೈವಾಹಿಕ ಅತ್ಯಾಚಾರವನ್ನು ಅಪರಾಧ ಎಂದು ಪರಿಗಣಿಸಿದ್ದು ಸಂತ್ರಸ್ತೆಯ ಮೇಲೆ ಆಕೆಯ ಪತಿಯೇ ಅತ್ಯಾಚಾರ ನಡೆಸಿದ್ದರೂ ಅದು ಅತ್ಯಾಚಾರ ಎನಿಸಿಕೊಳ್ಳುತ್ತದೆ ಎಂದು ಗುಜರಾತ್‌ ಹೈಕೋರ್ಟ್‌ ಈಚೆಗೆ ಹೇಳಿದೆ (ಅಂಜನಾಬೆನ್ ಮೋಧಾ ಮತ್ತು ಗುಜರಾತ್‌ ಸರ್ಕಾರ ನಡುವಣ ಪ್ರಕರಣ).

ಅಮೆರಿಕಾದ ಐವತ್ತು ರಾಜ್ಯಗಳು, ಆಸ್ಟ್ರೇಲಿಯಾದ ಮೂರು ರಾಜ್ಯಗಳು, ನ್ಯೂಜಿಲೆಂಡ್, ಕೆನಡಾ, ಇಸ್ರೇಲ್, ಫ್ರಾನ್ಸ್, ಸ್ವೀಡನ್, ಡೆನ್ಮಾರ್ಕ್, ನಾರ್ವೆ, ಸೋವಿಯತ್ ಒಕ್ಕೂಟ, ಪೋಲೆಂಡ್ ಮತ್ತು ಜೆಕೊಸ್ಲೊವಾಕಿಯಾ ಮತ್ತಿತರ ಹಲವು ದೇಶಗಳಲ್ಲಿ ವೈವಾಹಿಕ ಅತ್ಯಾಚಾರ ಕಾನೂನುಬಾಹಿರವಾಗಿದೆ ಎಂದು ನ್ಯಾಯಮೂರ್ತಿ ದಿವ್ಯೇಶ್ ಜೋಶಿ ಡಿಸೆಂಬರ್ 8 ರಂದು ನೀಡಿದ ಆದೇಶದಲ್ಲಿ ವಿವರಿಸಿದ್ದಾರೆ.

"ಐಪಿಸಿ ಹೆಚ್ಚಾಗಿ ಅನುಸರಿಸುವ ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ 1991ಲ್ಲಿ ನೀಡಿದ ತೀರ್ಪಿನಂತೆ (ಪತಿಗೆ ಅತ್ಯಾಚಾರ ಆರೋಪದಿಂದ ವಿನಾಯಿತಿ ನೀಡುವ ಸೆಕ್ಷನ್ 376 ಕ್ಕೆ) ವಿನಾಯಿತಿಯನ್ನು ತೆಗೆದು ಹಾಕಲಾಗಿದೆ. ಹೀಗಾಗಿನ ಆಗಿನ ಆಡಳಿತಗಾರರು ರೂಪಿಸಿದ ಐಪಿಸಿ ಗಂಡಂದರಿಗೆ ನೀಡಲಾದ ವಿನಾಯಿತಿಯನ್ನು ಖುದ್ದು ರದ್ದುಗೊಳಿಸಿದೆ" ಎಂದು ಅದು ಹೇಳಿದೆ.

ಆದ್ದರಿಂದ, ಪುರುಷ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಅಥವಾ ಅತ್ಯಾಚಾರ ಮಾಡಿದರೆ, ಐಪಿಸಿಯ ಸೆಕ್ಷನ್ 376 ರ ಅಡಿಯಲ್ಲಿ ಶಿಕ್ಷೆಗೆ ಅರ್ಹನಾಗುತ್ತಾನೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

"ಅಂತಹ ಹೆಚ್ಚಿನ ಸಂದರ್ಭಗಳಲ್ಲಿ, ಸಾಮಾನ್ಯ ಅಭ್ಯಾಸವೆಂದರೆ, ಪುರುಷ ಗಂಡನಾಗಿದ್ದು, ಇನ್ನೊಬ್ಬ ಪುರುಷನಂತೆ ಅದೇ ಕೃತ್ಯ ಎಸಗಿದರೆ, ಅವನಿಗೆ ವಿನಾಯಿತಿ ನೀಡಲಾಗುತ್ತದೆ. ನನ್ನ ಪರಿಗಣಿತ ದೃಷ್ಟಿಕೋನದಲ್ಲಿ, ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಪುರುಷ ಎಂದರೆ ಪುರುಷನಷ್ಟೆ; ಕೃತ್ಯ ಕೃತ್ಯವಷ್ಟೇ; ಪುರುಷನಾದ 'ಪತಿ' ಮಹಿಳೆಯಾದ ʼಹೆಂಡತಿʼ ಮೇಲೆ ಅತ್ಯಾಚಾರ ನಡೆಸಿದ್ದರೆ ಆ ಅತ್ಯಾಚಾರ ಅತ್ಯಾಚಾರವೇ" ಎಂದು ನ್ಯಾಯಮೂರ್ತಿ ಜೋಶಿ ಒತ್ತಿಹೇಳಿದರು. 

ನ್ಯಾಯಮೂರ್ತಿ ದಿವ್ಯೇಶ್ ಜೋಶಿ, ಗುಜರಾತ್ ಹೈಕೋರ್ಟ್

ಇದಲ್ಲದೆ, ಹೆಣ್ಣುಮಕ್ಕಳನ್ನು ಹಿಂಬಾಲಿಸುವಿಕೆ ಮತ್ತು ಕಾಡುವಿಕೆಯನ್ನು (ಈವ್‌ ಟೀಸಿಂಗ್‌) ಸಾಮಾನ್ಯೀಕರಿಸುವ 'ಹುಡುಗರು ಸದಾ ಹುಡುಗರೇ' ಎಂಬ ಸಾಮಾಜಿಕ ಮನೋಭಾವ ಬದಲಿಸುವ ಅಗತ್ಯತೆ ಕುರಿತು ನ್ಯಾಯಾಲಯ ಮಾತನಾಡಿತು.

ಲೈಂಗಿಕ ಹಿಂಸಾಚಾರವು ವಿವಿಧ ಸ್ವರೂಪ ಹೊಂದಿದ್ದು, ಹಿಂಸಾತ್ಮಕವಾಗಿರಲಿ ಅಥವಾ ಇಲ್ಲದಿರಲಿ ಅದರ ಅತಿರೇಕದ ಹಂತ ಅತ್ಯಾಚಾರ ನಡೆಯುತ್ತದೆ. ಆದರೂ ಲೈಂಗಿಕ ಹಿಂಸಾಚಾರದ ವ್ಯಾಪ್ತಿಯಲ್ಲಿ ಬರುವ ಗಣನೀಯ ಸಂಖ್ಯೆಯ ಘಟನೆಗಳಿವೆ, ಇದು ವಿವಿಧ ದಂಡನಾತ್ಮಕ ಕಾನೂನುಗಳ ಅಡಿಯಲ್ಲಿ ಅಪರಾಧಗಳಿಗೆ ಸಮನಾಗಿರುತ್ತದೆ ಎಂದು ನ್ಯಾಯಾಲಯ ನುಡಿದಿದೆ.

"ಹಿಂಬಾಲಿಸುವುದು, ಈವ್-ಟೀಸಿಂಗ್, ಮೌಖಿಕ ಮತ್ತು ದೈಹಿಕ ದಾಳಿ ಮತ್ತು ಕಿರುಕುಳಗಳು ಕಾನೂನುಬಾಹಿರ ನಡವಳಿಕೆಗಳಾಗಿವೆ. ಸಾಮಾಜಿಕ ವರ್ತನೆಗಳು ಸಾಮಾನ್ಯವಾಗಿ ಈ ಎರಡನೆಯ ವರ್ಗದ ಅಪರಾಧಗಳನ್ನು 'ಸಣ್ಣ ಅಪರಾಧಗಳು' ಎಂದು ನಿರೂಪಿಸುತ್ತವೆ. ಇಂತಹ ಅಪರಾಧಗಳನ್ನು ಕ್ಷುಲ್ಲಕಗೊಳಿಸುವುದು ಅಥವಾ ಸಾಮಾನ್ಯೀಕರಿಸುವುದು ಮಾತ್ರವಲ್ಲ, ಅವು ಶೃಂಗಾರಮಯವಾಗಿರುತ್ತವೆ. ಆದ್ದರಿಂದ ಸಿನೆಮಾದಂತಹ ಜನಪ್ರಿಯ ಕಥೆಗಳಲ್ಲಿ ಅವುಗಳಿಗೆ ಉತ್ತೇಜನ ಇರುತ್ತದೆ. 'ಹುಡುಗರು ಸದಾ ಹುಡುಗರೇ' ಎಂಬಂತಹ ದೃಷ್ಟಿಕೋನಗಳ ಮೂಲಕ ಅಪರಾಧವನ್ನು ರಂಜನೀಯವಾಗಿಸಿ ಪ್ರೀತಿಯಿಂದ ನೋಡುವ ಮತ್ತು ಅವರನ್ನು ಕ್ಷಮಿಸುವ ಇಂತಹ ವರ್ತನೆಗಳು ಸಂತ್ರಸ್ತರ ಮೇಲೆ ಶಾಶ್ವತ ಮತ್ತು ಹಾನಿಕಾರಕ ಪರಿಣಾಮ ಬೀರುತ್ತವೆ" ಎಂದು ನ್ಯಾಯಮೂರ್ತಿ ಜೋಶಿ ಒತ್ತಿಹೇಳಿದರು. 

ಆದ್ದರಿಂದ, ಲಿಂಗಾಧಾರಿತ ಹಿಂಸಾಚಾರದ ಬಗ್ಗೆ 'ಮೌನ' ಮುರಿಯುವ ಅಗತ್ಯವಿದೆ. ಭಾರತದಲ್ಲಿ, ಅಪರಾಧಿಗಳು ಹೆಚ್ಚಾಗಿ ಮಹಿಳೆಯರಿಗೆ ತಿಳಿದಿದ್ದರೂ ಅಂತಹ ಅಪರಾಧಗಳನ್ನು ವರದಿ ಮಾಡುವಾಗ ತೆರುವ ಸಾಮಾಜಿಕ ಮತ್ತು ಆರ್ಥಿಕ 'ದಂಡ' ದೊಡ್ಡದು ಎಂದು ನ್ಯಾಯಾಲಯ ನುಡಿದಿದೆ.

ಮಹಿಳೆಯರ ವಿರುದ್ಧದ ಹಿಂಸಾಚಾರ ತಡೆಗಟ್ಟುವಲ್ಲಿ ಮತ್ತು ಎದುರಿಸುವಲ್ಲಿ ಬಹುಶಃ ಮಹಿಳೆಯರಿಗಿಂತ ಹೆಚ್ಚಾಗಿ ನಿರ್ವಹಿಸಬೇಕಾದ ಕರ್ತವ್ಯ ಮತ್ತು ಪಾತ್ರ ಪುರುಷರದ್ದಾಗಿದೆ. ಎಂದು ನ್ಯಾಯಾಧೀಶರು ಹೇಳಿದರು.

ತನ್ನ ನಗ್ನ ಚಿತ್ರಗಳನ್ನು ಸೆರೆಹಿಡಿದು ಅವುಗಳನ್ನು ತನ್ನ ಅತ್ತೆಯ ಮನೆಯ ಕಡೆಯವರು ಅಶ್ಲೀಲ ಜಾಲತಾಣಗಳಲ್ಲಿ ಪ್ರಸಾರ ಮಾಡುತ್ತಿದ್ದರು. ಹಣಕ್ಕಾಗಿ ಈ ಕೃತ್ಯ ನಡೆಸಿದ್ದು ಅಶ್ಲೀಲ ದೃಶ್ಯ ಚಿತ್ರೀಕರಿಸುವಂತೆ ಮಾವನೇ ತನ್ನ ಮಗನಿಗೆ ಪ್ರಚೋದನೆ ನೀಡುತ್ತಿದ್ದರು. ಅತ್ತೆಯ ಕುಮ್ಮಕ್ಕೂ ಅದಕ್ಕೆ ಇತ್ತು. ಹೆತ್ತವರ ಪ್ರಚೋದನೆಯಿಂದ ಪತಿ ತನಗೆ "ಅಸ್ವಾಭಾವಿಕ" ಕೃತ್ಯಗಳಲ್ಲಿ ತೊಡಗಲು ಒತ್ತಾಯಿಸುತ್ತಿದ್ದ. ತಮ್ಮ ಹೋಟೆಲ್‌ ಬೇರೆಯವರಿಗೆ ಮಾರಾಟ ಮಾಡುವುದನ್ನು ತಪ್ಪಿಸುವುದಕ್ಕಾಗಿ ಹಣ ಸಂಪಾದಿಸಲು ಈ ಮಾರ್ಗ ಹಿಡಿದಿದ್ದರು ಎಂದು ಸಂತ್ರಸ್ತೆ ಪತ್ನಿ ದೂರಿದ್ದರು.