Rape 
ಸುದ್ದಿಗಳು

ಭಾರತದಲ್ಲಿ ವಿದೇಶಿ ಮಹಿಳೆಯ ಅತ್ಯಾಚಾರ ಅತ್ಯಂತ ಗಂಭೀರ ವಿಚಾರ: ಹೈಕೋರ್ಟ್‌

ಹೋಮ್‌ಸ್ಟೇನಲ್ಲಿ ಕೆಲಸ ಮಾಡುತ್ತಿದ್ದ 25 ವರ್ಷದ ಯುವಕ ಅಮೆರಿಕಾದ ಮಹಿಳೆಗೆ ಮತ್ತು ಬರುವ ಪದಾರ್ಥ ಹಾಕಿ ಪೇಯ ನೀಡಿದ್ದು, ಅದನ್ನು ಸೇವಿಸಿದ ಆಕೆ ಪ್ರಜ್ಞೆ ತಪ್ಪಿದ್ದರು. ಈ ಸಂದರ್ಭದಲ್ಲಿ ಆತ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದನು ಎಂಬುದು ಆರೋಪ.

Bar & Bench

ಕೊಡಗಿನ ಹೋಂ ಸ್ಟೇನಲ್ಲಿ ಅಮೆರಿಕಾದ ಪ್ರವಾಸಿ ಮಹಿಳೆಯ ಮೇಲೆ ಕಳೆದ ಏಪ್ರಿಲ್‌ನಲ್ಲಿ ನಡೆದಿದೆ ಎನ್ನಲಾದ ನಡೆದಿದೆ ಎನ್ನಲಾದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ತನಿಖಾ ದಾಖಲೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಸೋಮವಾರ ನಿರ್ದೇಶಿಸಿದೆ.

ಕುಟ್ಟಾದ ತನ್ನ ಹೋಮ್‌ಸ್ಟೇನಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣವನ್ನು ತಡೆ ಹಿಡಿದ ಆರೋಪದ ಮೇಲೆ ಕುಟ್ಟಾ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದತಿ ಕೋರಿ ಪಾಲೇಕಂಡ ಪೊನ್ನಪ್ಪ ಅಲಿಯಾಸ್‌ ವಿಶಾಲ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.

Justice M Nagaprasanna

ನೇರವಾಗಿ ತಡೆ ನೀಡುವ ಪ್ರಕರಣ ಇದಲ್ಲ. ತನಿಖಾ ದಾಖಲೆಗಳನ್ನು ನೋಡಬೇಕಿದೆ. ಬೇರೆ ದೇಶದ ಪ್ರಜೆಯ ಮೇಲೆ ನಮ್ಮ ದೇಶದಲ್ಲಿ ಅತ್ಯಾಚಾರ ನಡೆಯುವುದು ಗಂಭೀರ ಅಪರಾಧ” ಎಂದು ನ್ಯಾಯಾಲಯ ಹೇಳಿತು. ಅಲ್ಲದೇ, ತನಿಖಾ ದಾಖಲೆಗಳನ್ನು ಸಲ್ಲಿಸುವಂತೆ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕರಿಗೆ ನಿರ್ದೇಶಿಸಿದ ನ್ಯಾಯಾಲಯವು ವಿಚಾರಣೆಯನ್ನು ಜೂನ್‌ 10ಕ್ಕೆ ಮುಂದೂಡಿತು.

ಹೋಮ್‌ಸ್ಟೇನಲ್ಲಿ ಕೆಲಸ ಮಾಡುತ್ತಿದ್ದ 25 ವರ್ಷದ ಯುವಕ ಅಮೆರಿಕಾದ ಪ್ರವಾಸಿ ಮಹಿಳೆಗೆ ಮತ್ತು ಬರುವ ಪದಾರ್ಥ ಹಾಕಿ ಪೇಯ ನೀಡಿದ್ದು, ಅದನ್ನು ಸೇವಿಸಿದ ಆಕೆ ಪ್ರಜ್ಞೆ ತಪ್ಪಿದ್ದರು. ಈ ಸಂದರ್ಭದಲ್ಲಿ ಆತ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದನು. ಆತ ಸದ್ಯ ಜೈಲಿನಲ್ಲಿದ್ದು, ವಿಚಾರಣಾಧೀನ ನ್ಯಾಯಾಲಯವು ಆತನಿಗೆ ಜಾಮೀನು ನಿರಾಕರಿಸಿದೆ.

ಪ್ರಕರಣ ಮಾಹಿತಿ ಮುಚ್ಚಿಟ್ಟ ಆರೋಪದ ಮೇಲೆ ಪೊನ್ನಪ್ಪನನ್ನು ಏಪ್ರಿಲ್‌ 19ರಂದು ಪೊಲೀಸರು ಬಂಧಿಸಿದ್ದು, ಮೇ 2ರಂದು ಜಾಮೀನು ಮಂಜೂರಾಗಿತ್ತು. ಸದ್ಯ ಹಾಲಿ ಅರ್ಜಿಯ ಮೂಲಕ ಪ್ರಕರಣವನ್ನು ಪ್ರಶ್ನಿಸುವುದಲ್ಲದೇ ಅಕ್ರಮವಾಗಿ ಬಂಧಿಸಿದ್ದಕ್ಕಾಗಿ ₹15 ಲಕ್ಷ ಪರಿಹಾರ ಕೋರದ್ದಾರೆ.

ಪೊನ್ನಪ್ಪನನ್ನು ಪ್ರತಿನಿಧಿಸಿರುವ ವಕೀಲ ಅಂಗದ್‌ ಕಾಮತ್‌ ಅವರು “ಅರ್ಜಿದಾರರ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದ್ದು, ಅತ್ಯಾಚಾರ ಕೃತ್ಯದ ಬಗ್ಗೆ ಪೊನ್ನಪ್ಪಗೆ ಮೊದಲೇ ಮಾಹಿತಿ ಇದ್ದು, ದೂರುದಾರೆಯನ್ನು ಅಲ್ಲೇ ಇಟ್ಟಿದ್ದರು ಎಂಬರ್ಥದ ವರದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಆದರೆ, ದೂರಿನಲ್ಲಿ ಆ ಅಂಶಗಳೇ ಇಲ್ಲ. ಈ ಪ್ರಕರಣದಿಂದ ಪೊನ್ನಪ್ಪ ಅವರ ಉದ್ಯಮಕ್ಕೆ ಹೊಡೆತ ಬಿದ್ದಿದೆ” ಎಂದರು.

ಆಗ ಪೀಠವು “ನೀವು ಹೋಮ್‌ಸ್ಟೇ ರಿಪೇರಿ ಮಾಡಬೇಕೆ?” ಎಂದು ಪ್ರಶ್ನಿಸಿತು.

ಮುಂದುವರಿದು, “ತನಿಖಾಧಿಕಾರಿಗಳಿಗೆ ಸಿಸಿಟಿವಿ ಮತ್ತು ವಿಡಿಯೊ ರೆಕಾರ್ಡಿಂಗ್‌ ಒದಗಿಸಲಾಗಿದೆ. ತನಿಖಾಧಿಕಾರಿಗಳು ಕೃತ್ಯದಲ್ಲಿ ಬೇರೆ ಯಾರಾದರೂ ಭಾಗಿಯಾಗಿರುವ ಕೃತ್ಯ ತನಿಖೆ ನಡೆಸುತ್ತಿದ್ದು, ಈಚೆಗೆ ಡ್ರೈವರ್‌ನನ್ನು ಬಂಧಿಸಲಾಗಿದೆ” ಎಂದರು.

ಇದನ್ನು ಆಲಿಸಿದ ಪೀಠವು ಪ್ರಕರಣದಲ್ಲಿ ನಿಮ್ಮ ಪಾತ್ರದ ಬಗ್ಗೆ ತನಿಖಾ ದಾಖಲೆಗಳನ್ನು ನೋಡಿದ ಮೇಲೆ ತಿಳಿಯಲಿದೆ. ಇದರಲ್ಲಿ ನಿಮ್ಮ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆಯೇ ಎಂಬುದು ತಿಳಿಯಲಿದೆ. ತನಿಖಾ ದಾಖಲೆಗಳು ಬರಲಿ” ಎಂದಿತು.