Justice K Natarajan and Karnataka HC 
ಸುದ್ದಿಗಳು

ಮಲತಂದೆಯಿಂದ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಪ್ರಕರಣ: 20 ವರ್ಷಗಳ ಶಿಕ್ಷೆಯನ್ನು 10 ವರ್ಷಕ್ಕೆ ಇಳಿಸಿದ ಹೈಕೋರ್ಟ್‌

“ಸಂವಿಧಾನದ 20ನೇ ವಿಧಿ ಪ್ರಕಾರ ಘಟನೆ ನಡೆದಾಗ ಯಾವ ಕಾನೂನು ಜಾರಿಯಲ್ಲಿರುತ್ತದೋ ಅದರಲ್ಲಿ ಎಷ್ಟು ಪ್ರಮಾಣದ ಶಿಕ್ಷೆಗೆ ಅವಕಾಶವಿರುತ್ತದೋ ಅಷ್ಟೇ ಪ್ರಮಾಣದ ಶಿಕ್ಷೆ ವಿಧಿಸಬೇಕೆ ವಿನಾ ಹೆಚ್ಚಿನ ಶಿಕ್ಷೆ ವಿಧಿಸಲು ಅವಕಾಶವಿಲ್ಲ” ಎಂದು ಹೇಳಿದ ಪೀಠ.

Bar & Bench

ಸಂವಿಧಾನದ 20ನೇ ವಿಧಿಯ ಪ್ರಕಾರ ಕಾನೂನಿನಲ್ಲಿ ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ಶಿಕ್ಷೆ ವಿಧಿಸಲು ಅವಕಾಶವಿಲ್ಲ ಎಂದು ಅಭಿಪ್ರಾಯಪಟ್ಟಿರುವ ಕರ್ನಾಟಕ ಹೈಕೋರ್ಟ್ ಈಚೆಗೆ ತನ್ನ ಮಲ ಮಗಳ ಮೇಲೆ ಅತ್ಯಾಚಾರ ಎಸಗಿದ್ದ ತಂದೆಗೆ ಅಧೀನ ನ್ಯಾಯಾಲಯ ನೀಡಿದ್ದ 20 ವರ್ಷಗಳ ಶಿಕ್ಷೆಯನ್ನು 10 ವರ್ಷಕ್ಕೆ ಇಳಿಕೆ ಮಾಡಿದೆ.

ಬೆಂಗಳೂರಿನ ಅಬ್ದುಲ್ ಖಾದರ್‌ ಅಲಿಯಾಸ್ ರಫೀಕ್ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಕೆ ನಟರಾಜನ್ ಅವರ ನೇತೃತ್ವದ ಏಕಸದಸ್ಯ ಪೀಠವು ಮಾನ್ಯ ಮಾಡಿದೆ.

“ಸಂವಿಧಾನದ 20ನೇ ವಿಧಿಯ ಪ್ರಕಾರ ಘಟನೆ ನಡೆದಾಗ ಯಾವ ಕಾನೂನು ಜಾರಿಯಲ್ಲಿರುತ್ತದೋ ಅದರಲ್ಲಿ ಎಷ್ಟು ಪ್ರಮಾಣದ ಶಿಕ್ಷೆಗೆ ಅವಕಾಶವಿರುತ್ತದೋ ಅಷ್ಟೇ ಪ್ರಮಾಣದ ಶಿಕ್ಷೆ ವಿಧಿಸಬೇಕೆ ವಿನಾ ಹೆಚ್ಚಿನ ಶಿಕ್ಷೆ ವಿಧಿಸಲು ಅವಕಾಶವಿಲ್ಲ” ಎಂದು ಪೀಠ ಹೇಳಿದೆ.

“ಘಟನೆ ನಡೆದಿರುವುದು 2015ರಲ್ಲಿ, ಅಗ ಚಾಲ್ತಿಯಲ್ಲಿದ್ದ ಕಾನೂನು ಪ್ರಕಾರ ಅಂದರೆ ಐಪಿಸಿ ಸೆಕ್ಷನ್ 376(2) ಪ್ರಕಾರ ಶಿಕ್ಷೆ ವಿಧಿಸಬೇಕು, ಆದರೆ ವಿಚಾರಣಾಧೀನ ನ್ಯಾಯಾಲಯವು 2018ರ ಏಪ್ರಿಲ್‌ನಿಂದ ಜಾರಿಗೆ ಬಂದಿರುವ ಐಪಿಸಿ ಸೆಕ್ಷನ್ 376(3) ಪ್ರಕಾರ 20 ವರ್ಷ ಶಿಕ್ಷೆ ವಿಧಿಸಿರುವುದು ಸರಿಯಲ್ಲ” ಎಂದು ನ್ಯಾಯಾಲಯ ಹೇಳಿದೆ.

ಅಲ್ಲದೆ, “ಐಪಿಸಿ ಸೆಕ್ಷನ್ 376(2) ರಲ್ಲಿ ಪೋಷಕರು ಅಥವಾ ಶಿಕ್ಷಕರು ಮಹಿಳೆಯರ ಮೇಲೆ ಅತ್ಯಾಚಾರವೆಸಗಿದರೆ ಗರಿಷ್ಠ 10 ವರ್ಷ ಜೈಲು ಶಿಕ್ಷೆಗೆ ಅವಕಾಶವಿದೆ. 376(3)ರಲ್ಲಿ 20 ವರ್ಷ ಜೈಲು ಶಿಕ್ಷೆಗೆ ಅವಕಾಶವಿದೆ” ಎಂದು ನ್ಯಾಯಾಲಯ ತಿಳಿಸಿದೆ.

“ಪ್ರಕರಣದ ವಾಸ್ತವಾಂಶ ಮತ್ತು ಸ್ಥಿತಿಗತಿ ಗಮನಿಸಿದರೆ, ವಿಚಾರಣಾಧೀನ ನ್ಯಾಯಾಲಯ ಆರೋಪಿಗೆ ವಿಧಿಸಿರುವ 20 ವರ್ಷ ಜೈಲು ಶಿಕ್ಷೆಯನ್ನು ನಿಯಮದಂತೆ 10 ವರ್ಷಕ್ಕೆ ಇಳಿಕೆ ಮಾಡಬೇಕಾಗುತ್ತದೆ ಎಂದು ಆದೇಶ ನೀಡಿರುವ ನ್ಯಾಯಾಲಯವು ಆರೋಪಿಗೆ 5 ಸಾವಿರ ರೂಪಾಯಿ ದಂಡ ಪಾವತಿಸಲು ಆದೇಶ ನೀಡಿದೆ.

ಅಲ್ಲದೆ, “ಆರೋಪಿ 2015ರ ಅಕ್ಟೋಬರ್‌ 13ರಿಂದ ಜೈಲಿನಲ್ಲಿರುವ ಕಾರಣ ಅಪರಾಧ ದಂಡ ಸಂಹಿತೆ ಸೆಕ್ಷನ್ 428 ರಡಿ ಶಿಕ್ಷೆ ಮುಕ್ತಾಯಕ್ಕೆ ಮನವಿ ಮಾಡಬಹುದು” ಎಂದೂ ಸಹ ನ್ಯಾಯಾಲಯ ಹೇಳಿದೆ.

“ದಾಖಲೆಗಳನ್ನು ಪರಿಶೀಲಿಸಿದರೆ ದೂರು ನೀಡಿದ್ದ ಮಹಿಳೆ ತನ್ನ ಮೊದಲನೇ ಪತಿ ನಿಧನದ ನಂತರ ಆರೋಪಿಯನ್ನು ಎರಡನೇ ಮದುವೆಯಾಗಿದ್ದಾರೆ. ಅವರಿಗೆ ನಾಲ್ಕು ಮಕ್ಕಳು ಇದ್ದಾರೆ. ಆದರೆ ಆರೋಪಿ ಪತ್ನಿ ಇಲ್ಲದ ಸಮಯ ನೋಡಿಕೊಂಡು ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವುದು ದೃಢಪಟ್ಟಿದೆ” ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದ ಹಿನ್ನೆಲೆ: 2015ರ ಅಕ್ಟೋಬರ್‌ 13ರಂದು ಮಹಿಳೆಯೊಬ್ಬರು ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ತನ್ನ ಎರಡನೇ ಪತಿ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ದೂರು ನೀಡಿದ್ದರು.

ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ಸಂಬಂಧಿಸಿದ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. 2019ರ ಸೆಪ್ಟೆಂಬರ್‌ 29ರಂದು ವಿಶೇಷ ನ್ಯಾಯಾಲಯ ಆರೋಪಿ ಅತ್ಯಾಚಾರ ಎಸಗಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಪೋಕ್ಸೊ ಕಾಯಿದೆ ಸೆಕ್ಷನ್ 6 ಹಾಗೂ ಐಪಿಸಿ ಕಾಯಿದೆ ಸೆಕ್ಷನ್ 376(3) ಅಡಿಯಲ್ಲಿ 20 ವರ್ಷ ಜೈಲು ಶಿಕ್ಷೆ ವಿಧಿಸಿತ್ತು.

ಇದನ್ನು ಪ್ರಶ್ನಿಸಿದ್ದ ಆರೋಪಿಯು ಮೇಲ್ಮನವಿ ಸಲ್ಲಿಸಿ, ತಮಗೆ 20 ವರ್ಷ ಶಿಕ್ಷೆ ವಿಧಿಸಲಾಗಿದೆ. ಕಾನೂನಿನಲ್ಲಿ ಇರುವುದಕ್ಕಿಂತ ಅಧಿಕ ಶಿಕ್ಷೆ ವಿಧಿಸಲಾಗಿದೆ. ದೂರು ದಾಖಲಿಸುವುದು ವಿಳಂಬವಾಗಿದೆ. ಅದನ್ನೂ ವಿಚಾರಣಾಧೀನ ನ್ಯಾಯಾಲಯ ಪರಿಗಣಿಸಿಲ್ಲ ಎಂದು ಆಕ್ಷೇಪಿಸಿದ್ದರು.