Justices B Veerappa and T Venkatesh Naik
Justices B Veerappa and T Venkatesh Naik 
ಸುದ್ದಿಗಳು

ಮೃತದೇಹಗಳ ಮೇಲೆ ಅತ್ಯಾಚಾರ: ಐಪಿಸಿ ಸೆಕ್ಷನ್‌ 377 ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್‌ ಶಿಫಾರಸ್ಸು

Bar & Bench

ಮೃತದೇಹಗಳ ಮೇಲೆ ಅತ್ಯಾಚಾರ ನಡೆಸುವವರಿಗೆ ಅತ್ಯಾಚಾರ ಪ್ರಕರಣದಡಿ ಶಿಕ್ಷೆ ವಿಧಿಸುವ ಅವಕಾಶವಿಲ್ಲದಿರುವುದರಿಂದ ಅಂತಹ ಅಪರಾಧ ಎಸಗಿದವರಿಗೆ ಸೂಕ್ತ ಶಿಕ್ಷೆ ವಿಧಿಸಲು ಅವಕಾಶವಾಗುವ ರೀತಿಯಲ್ಲಿ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 377ಕ್ಕೆ (ಅಸ್ವಾಭಾವಿಕ ಅಪರಾಧಗಳು) ತಿದ್ದುಪಡಿ ಮಾಡಬೇಕು ಅಥವಾ ಹೊಸ ನಿಬಂಧನೆ ರೂಪಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಶಿಫಾರಸ್ಸು ಮಾಡಿದೆ [ರಂಗರಾಜು ಅಲಿಯಾಸ್‌ ವಾಜಪೇಯಿ ವರ್ಸಸ್‌ ಕರ್ನಾಟಕ ರಾಜ್ಯ].

ಯುವತಿಯೊಬ್ಬಳನ್ನು ಹತ್ಯೆಗೈದು, ಆಕೆಯ ಮೃತದೇಹದ ಮೇಲೆ ಅತ್ಯಾಚಾರ ನಡೆಸಿದ ಹಿನ್ನೆಲೆಯಲ್ಲಿ ವಿಚಾರಣಾಧೀನ ನ್ಯಾಯಾಲಯ ತನಗೆ ಶಿಕ್ಷೆ ವಿಧಿಸಿರುವುದನ್ನು ಪ್ರಶ್ನಿಸಿ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಗೋಳಿಗೇನಹಳ್ಳಿ ನಿವಾಸಿ ರಂಗರಾಜು ಅಲಿಯಾಸ್ ವಾಜಪೇಯಿ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿ, ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿಗಳಾದ ಬಿ ವೀರಪ್ಪ ಮತ್ತು ಟಿ ವೆಂಕಟೇಶ್‌ ನಾಯ್ಕ್‌ ಅವರ ನೇತೃತ್ವದ ವಿಭಾಗೀಯ ಪೀಠವು ಮಂಗಳವಾರ ಪ್ರಕಟಿಸಿತು.

ಯುವತಿಯನ್ನು ರಂಗರಾಜು ಕೊಲೆ ಮಾಡಿರುವುದನ್ನು ಪ್ರಾಸಿಕ್ಯೂಷನ್ ಸಂಶಯಾತೀತವಾಗಿ ಸಾಬೀತುಪಡಿಸಿದೆ. ಇದರಿಂದ ಕೊಲೆ ಪ್ರಕರಣಕ್ಕೆ ವಿಚಾರಣಾಧೀನ ನ್ಯಾಯಾಲಯ ವಿಧಿಸಿರುವ ಜೀವಾವಧಿ ಶಿಕ್ಷೆಯನ್ನು ಕಾಯಂಗೊಳಿಸಲಾಗುತ್ತಿದೆ. ಆದರೆ, ಐಪಿಸಿ ಸೆಕ್ಷನ್ 375 ಮತ್ತು 376ರಲ್ಲಿ ಮೃತದ ದೇಹವನ್ನು ಮನುಷ್ಯ ಅಥವಾ ವ್ಯಕ್ತಿಯಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂಬುದಾಗಿ ಸ್ಪಷ್ಟವಾಗಿ ಹೇಳಿದೆ. ಆದ್ದರಿಂದ, ಈ ಪ್ರಕರಣದಲ್ಲಿ ರಂಗರಾಜುಗೆ ಅತ್ಯಾಚಾರ ಪ್ರಕರಣ ಅನ್ವಯಿಸುವುದಿಲ್ಲ. ಈ ಪ್ರಕರಣವನ್ನು ಕ್ರೌರ್ಯರತಿ (ಸ್ಯಾಡಿಸಂ) ಮತ್ತು ಶವಗಳ ಮೇಲಿನ ಸಂಭೋಗ (ನೆಕ್ರೋಫಿಲಿಯಾ) ಎಂಬುದಾಗಿ ಪರಿಗಣಿಸಬೇಕಾಗುತ್ತದೆ. ಹೀಗಾಗಿ, ಯುವತಿಯ ಮೃತದೇಹದ ಜೊತಗೆ ಸಂಭೋಗ ನಡೆಸಿರುವುದಕ್ಕೆ ಅತ್ಯಾಚಾರ ಅಪರಾಧ (ಐಪಿಸಿ ಸೆಕ್ಷನ್ 376) ಅಡಿ ವಿಧಿಸಲಾಗಿದ್ದ 10 ವರ್ಷ ಜೈಲು ಶಿಕ್ಷೆಯನ್ನು ರದ್ದುಪಡಿಸಲಾಗುತ್ತಿದೆ ಎಂದು ಆದೇಶದಲ್ಲಿ ನ್ಯಾಯಾಲಯ ವಿವರಿಸಿದೆ.

ಮೃತದೇಹದ ಮೇಲೆ ಸಂಭೋಗ ನಡೆಸಿದಂತಹ ಪ್ರಕರಣದಲ್ಲಿ ಅಪರಾಧಿಗೆ ಶಿಕ್ಷೆ ವಿಧಿಸಲು ಯಾವುದೇ ನಿಯಮಗಳು ಇಲ್ಲವಾಗಿದೆ. ಐಪಿಸಿ ಸೆಕ್ಷನ್ 377 ಅಡಿಯಲ್ಲಿ ಪುರುಷ, ಮಹಿಳೆ ಅಥವಾ ಪ್ರಾಣಿಗಳ ಮೇಲೆ ಅಸ್ವಾಭಾವಿಕವಾಗಿ ಲೈಂಗಿಕ ಕ್ರಿಯೆ ನಡೆಸಿದರೆ, ಗರಿಷ್ಠ 10 ವರ್ಷ ಜೈಲು ಶಿಕ್ಷೆ ವಿಧಿಸುವುದಕ್ಕೆ ಅವಕಾಶವಿದೆ. ಈ ಸೆಕ್ಷನ್‌ಗೆ ತಿದ್ದುಪಡಿ ತಂದು ಪುರುಷ, ಮಹಿಳೆ ಅಥವಾ ಪ್ರಾಣಿಗಳ ಮೃತದೇಹ ಎಂಬುದಾಗಿ ಸೇರಿಸುವುದಕ್ಕೆ ಇದು ಸಕಾಲವಾಗಿದೆ. ಇಲ್ಲವೇ, ಇಂತಹ ಅಪರಾಧಗಳಿಗೆ ಶಿಕ್ಷೆ ವಿಧಿಸಲು ಅನುಕೂಲವಾಗುವಂತೆ ಐಪಿಸಿಯಲ್ಲಿ ಹೊಸ ನಿಯಮವನ್ನು ರೂಪಿಸಬೇಕು. ಇದರಿಂದ ಮೃತದೇಹದ ಘನತೆ ರಕ್ಷಣೆ ಮಾಡಿದಂತಾಗುತ್ತದೆ. ಕೆನಡಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಸೇರಿದಂತೆ ಹಲವಾರು ದೇಶಗಳಲ್ಲಿ ಮಹಿಳೆಯ ಮೃತದೇಹದ ಮೇಲೆ ಎಸಗುವ ಅಪರಾಧವು ಶಿಕ್ಷಾರ್ಹ. ಅಂತಹ ನಿಯಮಗಳನ್ನು ಭಾರತದಲ್ಲಿಯೂ ಪರಿಚಯಿಸಬೇಕಿದೆ. ಕೇಂದ್ರ ಸರ್ಕಾರವು ಈ ದಿಸೆಯಲ್ಲಿ ಆರು ತಿಂಗಳ ಒಳಗೆ ಅಗತ್ಯ ಕ್ರಮ ಜರುಗಿಸಬೇಕು ಎಂದು ಪೀಠವು ಆದೇಶದಲ್ಲಿ ಶಿಫಾರಸ್ಸು ಮಾಡಿದೆ.

ಈ ಆದೇಶದ ಪ್ರತಿಯನ್ನು ಕೇಂದ್ರ ಗೃಹ ಸಚಿವಾಲಯ, ಕಾನೂನು, ನ್ಯಾಯ ಮತ್ತು ಸಂಸದೀಯ ವ್ಯವಹಾರಗಳ ಸಚಿವಾಲಯ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ರಾಜ್ಯ ಆರೋಗ್ಯ, ಕುಟುಂಬ ಕಲ್ಯಾಣ ಪ್ರಧಾನ ಕಾರ್ಯದರ್ಶಿಗೆ ರವಾನಿಸಬೇಕು ಎಂದು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್‌ಗೆ ಪೀಠವು ನಿರ್ದೇಶಿಸಿದೆ.

ಪ್ರಕರಣದ ಹಿನ್ನೆಲೆ: ತುಮಕೂರು ಜಿಲ್ಲೆ ಶಿರಾ ತಾಲೂಕಿನಲ್ಲಿ ಗೋಳಿಗೇನಹಳ್ಳಿಯ 21 ವರ್ಷದ ಯುವತಿಯನ್ನು ಅದೇ ಗ್ರಾಮದ ರಂಗರಾಜು (ಅಪರಾಧಿ) 2015ರ ಜೂನ್‌ 25ರಂದು ಕತ್ತು ಸೀಳಿ ಕೊಲೆ ಮಾಡಿದ್ದನು. ಇದಾದ ಬಳಿಕ ಸಂತ್ರಸ್ತೆ ಮೃತ ದೇಹದ ಜೊತೆಗೆ ಸಂಭೋಗ ನಡೆಸಿದ್ದ. ಸಂತ್ರಸ್ತೆಯ ಸಹೋದರ ನೀಡಿದ ದೂರನ್ನು ಪರಿಗಣಿಸಿ ಘಟನೆ ನಡೆದ ಏಳು ದಿನಗಳ ಬಳಿಕ ರಂಗರಾಜುವನ್ನು ಪೊಲೀಸರು ಬಂಧಿಸಿದ್ದರು. ತನಿಖೆ ನಡೆಸಿದ್ದ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದರು. ಅಧೀನ ನ್ಯಾಯಾಲಯವು ಕೊಲೆ ಪ್ರಕರಣಕ್ಕೆ ಜೀವಾವಧಿ ಶಿಕ್ಷೆ ಮತ್ತು 50 ಸಾವಿರ ರೂಪಾಯಿ ದಂಡ, ಅತ್ಯಾಚಾರ ಪ್ರಕರಣಕ್ಕೆ 10 ವರ್ಷ ಜೈಲು ಶಿಕ್ಷೆ ಮತ್ತು 25 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿದ್ದ ರಂಗರಾಜು ಹೈಕೋರ್ಟ್‌ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದನು. ರಂಗರಾಜು ಪರ ಹಿರಿಯ ವಕೀಲ ಸಿ ಎಚ್ ಹನುಮಂತರಾಯ ವಾದ ಮಂಡಿಸಿದ್ದರು.

ರಾಜ್ಯ ಸರ್ಕಾರಕ್ಕೆ ಶಿಫಾರಸ್ಸುಗಳು

  • ಆಸ್ಪತ್ರೆಯ ಶವಾಗಾರಗಳಲ್ಲಿನ ಶವಗಳ ಮೇಲೆ, ವಿಶೇಷವಾಗಿ ಯುವತಿಯರ ಶವಗಳ ಮೇಲೆ ಅಲ್ಲಿನ ಸಿಬ್ಬಂದಿ ಅತ್ಯಾಚಾರ ನಡೆಸುತ್ತಾರೆ ಎಂಬ ಮಾಹಿತಿ ನ್ಯಾಯಾಲಯದ ಗಮನಕ್ಕೆ ಬಂದಿದೆ. ಹೀಗಾಗಿ, ಮಹಿಳೆಯ ಮೃತದೇಹದ ಮೇಲೆ ನಡೆಯುವ ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ ಆರು ತಿಂಗಳಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಶವಾಗಾರಗಳಲ್ಲಿ ಸಿಸಿಟಿವಿ ಅಳವಡಿಸಬೇಕು.

  • ಶವಾಗಾರಗಳಲ್ಲಿ ನೈರ್ಮಲ್ಯ ಕಾಪಾಡಬೇಕು.

  • ಮೃತರ ಮಾಹಿತಿಯನ್ನು ಮುಖ್ಯವಾಗಿ ಎಚ್‌ಐವಿ, ಆತ್ಮಹತ್ಯೆ ಪ್ರಕರಣಗಳ ಮಾಹಿತಿಯನ್ನು ಗೌಪ್ಯ ಮತ್ತು ಭದ್ರವಾಗಿಡಬೇಕು.

  • ಶವಪರೀಕ್ಷೆ ನಡೆಸುವ ಕೋಣೆಗಳಿಗೆ ಸಾರ್ವಜನಿಕರ ದೃಷ್ಟಿ ಬೀಳುವಂತಿರಬಾರದು. ಅದಕ್ಕಾಗಿ ಪರದೆಗಳನ್ನು ಅಳವಡಿಸಬೇಕು. ಶವಪರೀಕ್ಷಾ ಕೇಂದ್ರಗಳನ್ನು ನಿಷೇಧಿತ ಪ್ರದೇಶವಾಗಿ ನಿರ್ವಹಣೆ ಮಾಡಬೇಕು.

  • ಭಾರತೀಯ ಸಾರ್ವಜನಿಕ ಪ್ರಮಾಣಿಕೃತ ಮಾನದಂಡಗಳ (ಐಎಸ್‌ಐ) ಪ್ರಕಾರ ಶವ ನಿರ್ವಹಣೆಗೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಒದಗಿಸಬೇಕು.

Rangaraju @ Vajapeyi Vs State of Karnataka.pdf
Preview