Prajwal Revanna Facebook
ಸುದ್ದಿಗಳು

ಮಹಿಳಾ ರಾಜಕಾರಣಿ ಮೇಲೆ ಅತ್ಯಾಚಾರ: ಜೂನ್‌ 24ರವರೆಗೆ ಪ್ರಜ್ವಲ್‌ ಎಸ್‌ಐಟಿ ಕಸ್ಟಡಿಗೆ

ಮಹಿಳಾ ರಾಜಕಾರಣಿಯ ಮೇಲೆ ಸರ್ಕಾರಿ ಬಂಗ್ಲೆಯಲ್ಲಿ ಗನ್‌ ತೋರಿಸುವ ಮೂಲಕ ಅತ್ಯಾಚಾರ ಎಸಗಿ, ಆ ಕೃತ್ಯದ ವಿಡಿಯೋ ಮಾಡಿಕೊಂಡ ಆರೋಪ ಪ್ರಜ್ವಲ್‌ ಮೇಲಿದೆ.

Bar & Bench

ಮಹಿಳಾ ರಾಜಕಾರಣಿಯೊಬ್ಬರ (ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ) ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಜೂನ್‌ 24ರವರೆಗೆ ಎಸ್‌ಐಟಿ ಕಸ್ಟಡಿಗೆ ನೀಡಿ ಆದೇಶಿಸಿದೆ.

ನ್ಯಾಯಾಂಗ ಬಂಧನದಲ್ಲಿದ್ದ ಪ್ರಜ್ವಲ್‌ ರೇವಣ್ಣ ಅವರನ್ನು ವಿಡಿಯೊ ಕಾನ್ಫರೆನ್ಸ್‌ ಮೂಲಕ ವಿಶೇಷ ಮ್ಯಾಜಿಸ್ಟ್ರೇಟ್‌ ಕೆ ಎನ್‌ ಶಿವಕುಮಾರ್‌ ಅವರ ಮುಂದೆ ಹಾಜರುಪಡಿಸಲಾಯಿತು.

ಎಸ್‌ಐಟಿ ವಿಶೇಷ ಸರ್ಕಾರಿ ಅಭಿಯೋಜಕರಾದ ಅಶೋಕ್‌ ನಾಯಕ್‌ ಅವರು “ಮೂರನೇ ಅತ್ಯಾಚಾರ ಪ್ರಕರಣವು ಸಂಸದರ ಬಂಗ್ಲೆಯಲ್ಲಿ ನಡೆದಿದೆ. ಅಲ್ಲಿ ಸ್ಥಳ ಮಹಜರ್‌ ಮಾಡಬೇಕು, ವಿಚಾರಣೆ ನಡೆಸಬೇಕಿದೆ. ಎಸ್‌ಐಟಿಯ ಮುಖ್ಯಸ್ಥರು ಒಬ್ಬರೇ ಇದ್ದರೂ ಇಲ್ಲಿ ಪ್ರತ್ಯೇಕವಾಗಿ ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ತನಿಖಾಧಿಕಾರಿಗಳು ಬೇರೆ ಬೇರೆ ಇದ್ದಾರೆ. ಸಂತ್ರಸ್ತೆಯರು ಬೇರೆ ಬೇರೆ ಇದ್ದಾರೆ. ಸಿಆರ್‌ಪಿಸಿ ಸೆಕ್ಷನ್‌ 53(ಎ) ಅಡಿ ಆರೋಪಿಯ ಪುರುಷತ್ವ ಸೇರಿದಂತೆ ವಿವಿಧ ವೈದ್ಯಕೀಯ ಪರೀಕ್ಷೆ ನಡೆಸಬೇಕಿದೆ. ವಿಚಾರಣೆ ಸಂದರ್ಭದಲ್ಲಿ ಇದು ಪ್ರಾಸಿಕ್ಯೂಷನ್‌ಗೆ ಅತ್ಯಂತ ಮಹತ್ವದ್ದಾಗಿದೆ. ಬೇರೆ ಪ್ರಕರಣದ ತನಿಖಾ ದಾಖಲೆಗಳು ಮತ್ತು ಅಂಶಗಳನ್ನು ಇನ್ನೊಂದು ಪ್ರಕರಣಕ್ಕೆ ಅನ್ವಯಿಸಲು ಅವಕಾಶವಿಲ್ಲ ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ. ಹೀಗಾಗಿ, ಆರೋಪಿಯನ್ನು 14 ದಿನ ಎಸ್‌ಐಟಿ ಕಸ್ಟಡಿಗೆ ನೀಡಬೇಕು. ವೈದ್ಯಕೀಯ ಪರೀಕ್ಷೆಯ ಮೂಲಕ ಆರೋಪಿಗೆ ಕಿರುಕುಳ ನೀಡುವ ಯಾವುದೇ ಉದ್ದೇಶವಿಲ್ಲ” ಎಂದು ಹೇಳಿದರು.

ಇದಕ್ಕೆ ಆಕ್ಷೇಪಿಸಿದ ಪ್ರಜ್ವಲ್‌ ಪರ ವಕೀಲ ಅರುಣ್‌ ಅವರು “ಈಗಾಗಲೇ ಎರಡು ಪ್ರಕರಣಗಳಲ್ಲಿ ವಿಚಾರಣೆಯಾಗಿದೆ. ಫೋನ್‌ ಜಪ್ತಿ ಮಾಡಿ, ಅದನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಪದೇಪದೇ ಸಿಆರ್‌ಪಿಸಿ ಸೆಕ್ಷನ್‌ 53(ಎ) ಅಡಿ ಗುಪ್ತಾಂಗ ಸಂಬಂಧಿತ ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವ ಮೂಲಕ ಪ್ರಜ್ವಲ್‌ ಅವರಿಗೆ ಕಿರುಕುಳ ನೀಡಲಾಗುತ್ತಿದೆ. ಈಗಾಗಲೇ ಬೇರೆ ಪ್ರಕರಣದಲ್ಲಿ ವೈದ್ಯಕೀಯ ಪರೀಕ್ಷೆಗೆ ಅವಕಾಶ ಮಾಡಿಕೊಟ್ಟಿರುವಾಗ ಮತ್ತದೇ ಪರೀಕ್ಷೆ ಮಾಡುವ ಅಗತ್ಯವಿಲ್ಲ. ಸ್ಥಳ ಮಹಜರ್‌ ಮತ್ತು ತನಿಖೆಗಾಗಿ ಎರಡು ದಿನ ಎಸ್‌ಐಟಿಗೆ ನೀಡಬಹುದು” ಎಂದು ವಾದಿಸಿದರು.

ಪ್ರಜ್ವಲ್‌ರನ್ನು ಮೇ 31ರಿಂದ ಜೂನ್‌ 10ರವರೆಗೆ ಎಸ್‌ಐಟಿ ವಶಕ್ಕೆ ನೀಡಲಾಗಿತ್ತು. ಆನಂತರ ಎರಡನೇ ಪ್ರಕರಣದಲ್ಲಿ ಜೂನ್‌ 13ರಿಂದ 18ರವರೆಗೆ ಎಸ್‌ಐಟಿ ಕಸ್ಟಡಿಗೆ ನೀಡಲಾಗಿತ್ತು. ಈಗ ಮೂರನೇ ಪ್ರಕರಣದಲ್ಲಿ ಜೂನ್‌ 24ರವರೆಗೆ ಎಸ್‌ಐಟಿ ವಶಕ್ಕೆ ನೀಡಲಾಗಿತ್ತು.