A1
ಸುದ್ದಿಗಳು

ಭಯೋತ್ಪಾದಕರ ಸೇರ್ಪಡೆ ಪ್ರಕರಣ: ಅಪರೂಪ ಎಂಬಂತೆ ಬಿಎಸ್ಎನ್ಎಲ್ ಅಧಿಕಾರಿಯ ಸಾಕ್ಷ್ಯ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್

ಹದಿಮೂರು ಮಂದಿಯನ್ನು ದೋಷಿಗಳೆಂದು ತೀರ್ಪು ನೀಡಿ ಐವರನ್ನು ಖುಲಾಸೆಗೊಳಿಸಿದ್ದ ಎನ್ಐಎ ನ್ಯಾಯಾಲಯದ ತೀರ್ಪಿನ ವಿರುದ್ಧ ದೋಷಿತರು ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಸಲ್ಲಿಸಿದ ಮೇಲ್ಮನವಿಗಳನ್ನು ನ್ಯಾಯಾಲಯ ವಿಚಾರಣೆಗೆ ಪರಿಗಣಿಸಿತು.

Bar & Bench

ಅಪರೂಪ ಎಂಬಂತೆ ಕಾಶ್ಮೀರ ಭಯೋತ್ಪಾದಕರ ಸೇರ್ಪಡೆ ಪ್ರಕರಣದ ಸಾಕ್ಷಿಯನ್ನು ಕೇರಳ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಒಳಪಡಿಸಲು ಉಚ್ಚ ನ್ಯಾಯಾಲಯ ಮಂಗಳವಾರ ಅನುಮತಿಸಿತು.

13 ಮಂದಿಯನ್ನು ದೋಷಿಗಳೆಂದು ತೀರ್ಪು ನೀಡಿ ಐವರನ್ನು ಖುಲಾಸೆಗೊಳಿಸಿದ್ದ ಎನ್‌ಐಎ ವಿಶೇಷ ನ್ಯಾಯಾಲಯದ ತೀರ್ಪಿನ ವಿರುದ್ಧ ದೋಷಿತರು ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸಲ್ಲಿಸಿದ ಮೇಲ್ಮನವಿಗಳನ್ನು ನ್ಯಾಯಾಲಯ ವಿಚಾರಣೆಗೆ ಪರಿಗಣಿಸಿತು. ಇವರಲ್ಲಿ ಕೆಲವರು ಜಾಮೀನಿನ ಮೇಲೆ ಜೈಲಿನಿಂದ ಹೊರಗಿದ್ದಾರೆ.

ಸಾಮಾನ್ಯವಾಗಿ, ಕ್ರಿಮಿನಲ್ ಮೇಲ್ಮನವಿಗಳಲ್ಲಿ ವಿಚಾರಣಾ ನ್ಯಾಯಾಲಯದ ಮುಂದೆ ಸಲ್ಲಿಸಿದ ಸಾಕ್ಷ್ಯವನ್ನು ಮಾತ್ರ ಹೈಕೋರ್ಟ್ ಪರಿಗಣಿಸುತ್ತದೆ. ಆದರೆ ಪ್ರಸ್ತುತ ಪ್ರಕರಣದಲ್ಲಿ ಆರೋಪಿಗಳು ಮತ್ತು ಕಾಶ್ಮೀರದ ಕೆಲವು ವ್ಯಕ್ತಿಗಳ ನಡುವಿನ ಸಂವಹನವನ್ನು ತೋರಿಸುವ ಕರೆ ದಾಖಲೆಯನ್ನು ನೀಡಿದ ಬಿಎಸ್ಎನ್ಎಲ್ ಅಧಿಕಾರಿಯನ್ನು ಕರೆಸಲು ಹೈಕೋರ್ಟ್ ನಿರ್ಧರಿಸಿತು.

ಭಾರತೀಯ ಸಾಕ್ಷ್ಯ ಕಾಯಿದೆಯ ಸೆಕ್ಷನ್ 65 ಬಿ ಅಡಿ ಬಿಎಸ್‌ಎನ್‌ಎಲ್ ಅಧಿಕಾರಿ ಅಗತ್ಯ ದೃಢೀಕರಣ ನೀಡಿಲ್ಲ ಎಂದು ಅಪರಾಧಿಗಳ ಪರ ವಕೀಲರು ವಾದಿಸಿದರು. ಇದಕ್ಕೆ ಪ್ರತಿಯಾಗಿ ಎನ್ ಐಎ ಪರ ವಾದ ಮಂಡಿಸಿದ ಸಹಾಯಕ ಸಾಲಿಸಿಟರ್ ಜನರಲ್ ಎಸ್ ಮನು ಅವರು ಅಧಿಕಾರಿಯನ್ನು ಪಾಟಿ ಸವಾಲಿಗೊಳಪಡಿಸಲು ಅನುಮತಿ ಕೋರಿದರು.

ಜಾಮೀನಿನ ಮೇಲಿರುವ ಆರೋಪಿಗಳು ಖುದ್ದು ಹಾಜರಾಗಬೇಕು ಹಾಗೂ ಜೈಲುಗಳಲ್ಲಿರುವವರು ವೀಡಿಯೊ ಕಾನ್ಫರೆನ್ಸ್‌ ಮೂಲಕ ವಿಚಾರಣೆಗೆ ಹಾಜರಾಗಬೇಕು ಎಂದು ನ್ಯಾಯಾಲಯ ಆದೇಶಿಸಿತ್ತು.

ಅದರಂತೆ ಹೈಕೋರ್ಟ್‌ನಲ್ಲಿ ಬಿಎಸ್‌ಎನ್‌ಎಲ್ ಅಧಿಕಾರಿಯನ್ನು ಮಂಗಳವಾರವೇ ವಿಚಾರಣೆಗೆ ಒಳಪಡಿಸಿ ಬಿಎಸ್‌ಎನ್‌ಎಲ್‌ ನೀಡಿದ ಕಾಲ್‌ ರೆಕಾರ್ಡ್‌ ಪ್ರಮಾಣ ಪತ್ರವನ್ನು ಹೆಚ್ಚುವರಿ ಸಾಕ್ಷಿಯನ್ನಾಗಿ ಪರಿಗಣಿಸಿತು.

2008ರಲ್ಲಿ ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಕೆಲವು ಶಂಕಿತ ಭಯೋತ್ಪಾದಕರನ್ನು ಹೊಡೆದುರುಳಿಸಿದಾಗ ಕಾಶ್ಮೀರ ಭಯೋತ್ಪಾದಕರ ಸೇರ್ಪಡೆ ಪ್ರಕರಣ ಬೆಳಕಿಗೆ ಬಂದಿತ್ತು. ಹಾಗೆ ನೇಮಕಗೊಂಡವರಲ್ಲಿ ನಾಲ್ವರು ಕೇರಳ ಯುವಕರು ಇದ್ದರು.