Sowmya Reddy and Karnataka HC 
ಸುದ್ದಿಗಳು

ಜಯನಗರ ಕ್ಷೇತ್ರದ ಮತಗಳ ಮರುಪರಿಶೀಲನೆ, ಮರು ಎಣಿಕೆ ಪ್ರಕ್ರಿಯೆ ಕಾನೂನುಬಾಹಿರ: ಹೈಕೋರ್ಟ್‌ಗೆ ಸೌಮ್ಯಾ ರೆಡ್ಡಿ ವಿವರಣೆ

ಮತದಾನದ ವೇಳೆ ಚಲಾವಣೆಯಾದ ಎಲ್ಲಾ 827 ಅಂಚೆ ಮತಗಳನ್ನು ಮರು ಎಣಿಕೆ ಮಾಡಲು ನಿರ್ದೇಶಿಸಬೇಕು ಎಂದು ಅವರು ಸಲ್ಲಿಸಿರುವ ಚುನಾವಣಾ ಅರ್ಜಿಯನ್ನು ನ್ಯಾಯಮೂರ್ತಿ ಎಸ್ ರಾಚಯ್ಯ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

Bar & Bench

ರಾಜ್ಯದಲ್ಲಿ 2023ರಲ್ಲಿ ಜರುಗಿದ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಜಯನಗರ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ವೇಳೆ ನಡೆದ ಮತಗಳ ಮರುಪರಿಶೀಲನೆ ಮತ್ತು ಮರು ಎಣಿಕೆ ಪ್ರಕ್ರಿಯೆ ಸಂಪೂರ್ಣವಾಗಿ ಕಾನೂನುಬಾಹಿರವಾಗಿತ್ತು ಎಂದು ಕಾಂಗ್ರೆಸ್‌ನ ಪರಾಜಿತ ಅಭ್ಯರ್ಥಿ ಸೌಮ್ಯಾ ರೆಡ್ಡಿ ದೂರಿದ್ದಾರೆ.

ಮತದಾನದ ವೇಳೆ ಚಲಾವಣೆಯಾದ ಎಲ್ಲಾ 827 ಅಂಚೆ ಮತಗಳನ್ನು ಮರು ಎಣಿಕೆ ಮಾಡಲು ನಿರ್ದೇಶಿಸಬೇಕು ಎಂದು ಅವರು ಸಲ್ಲಿಸಿರುವ ಚುನಾವಣಾ ಅರ್ಜಿಯನ್ನು ನ್ಯಾಯಮೂರ್ತಿ ಎಸ್ ರಾಚಯ್ಯ ಅವರ ಏಕಸದಸ್ಯ ಪೀಠ ಗುರುವಾರ ವಿಚಾರಣೆ ನಡೆಸಿತು.

ಈ ವೇಳೆ ಸಾಕ್ಷಿ ವಿಚಾರಣೆಗೆ ಹಾಜರಾಗಿ ಪ್ರತಿವಾದಿಯಾಗಿರುವ ವಿಜೇತ ಅಭ್ಯರ್ಥಿ ಸಿ ಕೆ ರಾಮಮೂರ್ತಿ ಪರ ವಕೀಲರ ಸವಾಲುಗಳಿಗೆ ಸೌಮ್ಯಾ ರೆಡ್ಡಿ ಉತ್ತರಿಸಿದರು.

ನಿಮ್ಮ ಮನವಿಯಂತೆ ಚುನಾವಣಾಧಿಕಾರಿ ಮತ್ತು ಚುನಾವಣಾ ವೀಕ್ಷಕರು ತಿರಸ್ಕೃತಗೊಂಡ 198 ಅಂಚೆ ಮತಗಳಲ್ಲಿ ಮರು ಪರಿಶೀಲಿಸಿ ಅದರಲ್ಲಿ 124 ಮತಗಳು ಸಿಂಧು ಎಂದು ನಿರ್ಧರಿಸಿದ್ದು, ಬಳಿಕ ಒಟ್ಟಾರೆ ಮತಗಳ ಮರು ಎಣಿಕೆ, ಮರು ಪರಿಶೀಲನೆ ನಡೆಸಿದ ನಂತರ ಅಂತಿಮವಾಗಿ ಸಿ ಕೆ ರಾಮಮೂರ್ತಿ 16 ಮತಗಳ ಅಂತರಿಂದ ಗೆಲವು ಸಾಧಿಸಿದ್ದಾಗಿ ಘೋಷಿಸಿದ್ದು ಹೌದೇ ಎಂದು ವಕೀಲರು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಸೌಮ್ಯಾ ರೆಡ್ಡಿ ಅವರು ಚುನಾವಣಾಧಿಕಾರಿ ಮತ್ತು ಚುನಾವಣಾ ವೀಕ್ಷಕರ ಘೋಷಣೆ ತಾಂತ್ರಿಕವಾಗಿ ಸರಿ ಹೌದು. ಆದರೆ, ಮತಗಳ ಮರು ಎಣಿಕೆ ಮತ್ತು ಮರು ಪರಿಶೀಲನೆ ಪ್ರಕ್ರಿಯೆ ಸಂಪೂರ್ಣವಾಗಿ ಕಾನೂನುಬಾಹಿರವಾಗಿ ಮಾಡಲಾಗಿದೆ ಅನ್ನುವುದು ನನ್ನ ಬಲವಾದ ಆಕ್ಷೇಪವಾಗಿತ್ತು. ಅದಕ್ಕಾಗಿಯೇ ನಾನು ಹೈಕೋರ್ಟ್ ಮೆಟ್ಟಿಲೇರಿದ್ದೇನೆ ಎಂದರು.

ಇದೇ ವೇಳೆ ವಕೀಲರ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸೌಮ್ಯಾ ರೆಡ್ಡಿ ಅವರು ನಾನು 42 ಮತಗಳ ಅಂತದಿಂದ ಗೆದ್ದಿದ್ದೇನೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಯಿತು. ಅದನ್ನು ನೋಡಿ ಗೆಲುವಿನ ಸರ್ಟಿಫಿಕೇಟ್ ಪಡೆದುಕೊಳ್ಳಲು ಮತ ಎಣಿಕೆ ಕೇಂದ್ರಕ್ಕೆ ಬಂದೆ, ಅಲ್ಲಿಗೆ ಬಂದಾಗ ಇದೆಲ್ಲ ವಿವಾದ, ಗೊಂದಲ ಪ್ರಾರಂಭವಾಯಿತು ಎಂದರು. ಇದರ ಜೊತೆಗೆ ವಕೀಲರ ಇನ್ನೂ ಕೆಲವು ಪ್ರಶ್ನೆಗೆಗಳಿಗೆ ಅವರು ಉತ್ತರ ನೀಡಿದರು. ಸಾಕ್ಷಿ ವಿಚಾರಣೆಗೆ ವಕೀಲರ ಇನ್ನೂ ಕೆಲವು ಪ್ರಶ್ನೆಗಳು ಇದ್ದ ಕಾರಣಕ್ಕೆ ವಿಚಾರಣೆಯನ್ನು ಸೋಮವಾರಕ್ಕೆ (ಏಪ್ರಿಲ್‌ 6) ಮುಂದೂಡಲಾಯಿತು.