ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲಾ, ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಸಂವಿಧಾನದ ಪೀಠಿಕೆ ಓದುವುದನ್ನು ಕಡ್ಡಾಯಗೊಳಿಸುವ ಮೂಲಕ ಚಾರಿತ್ರಿಕ ತೀರ್ಮಾನವನ್ನು ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್ ಸಿ ಮಹದೇವಪ್ಪ ಗುರುವಾರ ತಿಳಿಸಿದರು.
ಸಂಪುಟ ಸಭೆಯ ಬಳಿಕ ಮಾತನಾಡಿದ ಅವರು “ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ನಗರಸಭೆಯ ಕಚೇರಿಗಳು ಸೇರಿ ಸರ್ಕಾರಿ, ಅರೆ ಸರ್ಕಾರಿ ಕಚೇರಿಗಳಲ್ಲಿ ಸಂವಿಧಾನದ ಪೀಠಿಕೆಯನ್ನು ಅಳವಡಿಸಬೇಕು. ಇದಕ್ಕೆ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ” ಎಂದು ತಿಳಿಸಿದರು.
“ದೇಶದ ನಿರ್ಮಾಣದಲ್ಲಿ ಯುವ ಜನರನ್ನು ತೊಡಗಿಸಲು ಮತ್ತು ಎಲ್ಲಾ ಜಾತಿ, ಧರ್ಮದ ಜನರನ್ನು ಸಮಾನತೆಯಿಂದ ಕಾಣಲು ಸಂವಿಧಾನದಿಂದ ಸಾಧ್ಯವಾಗಿದೆ. ಜನರ ನೈತಿಕ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿಯೂ ಸಂವಿಧಾನದ ಓದು ಅಗತ್ಯ” ಎಂದು ತಿಳಿಸಿದರು.
“ನಾವೇ ಪಡೆದುಕೊಂಡಿರುವ ಸ್ವಾತಂತ್ರ್ಯವನ್ನು ಮೈಮರೆತು ಕಳೆದುಕೊಂಡರೆ ಮತ್ತೆ ಅದನ್ನು ಪಡೆಯಲಾಗದು ಎಂದು ಡಾ. ಅಂಬೇಡ್ಕರ್ ತಿಳಿಸಿದ್ದಾರೆ” ಎಂದು ಇದೇ ಸಂದರ್ಭದಲ್ಲಿ ಅವರು ಒತ್ತಿ ಹೇಳಿದರು.