ವಿದ್ಯಾರ್ಥಿಗಳನ್ನು ಶಿಸ್ತಿನಲ್ಲಿಡುವುದಕ್ಕಾಗಿ ಶಿಕ್ಷಕರು ಪೆಟ್ಟು ನೀಡಲು ಬಳಸುವ ಬೆತ್ತವನ್ನು ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 118ರಡಿ ಅಪಾಯಕಾರಿ ಆಯುಧ ಎಂದು ಕರೆಯಲಾಗದು ಎಂದು ಕೇರಳ ಹೈಕೋರ್ಟ್ ಈಚೆಗೆ ಮಹತ್ವದ ತೀರ್ಪು ನೀಡಿದೆ [ಸಿಬಿನ್ ಎಸ್‌ವಿ ಮತ್ತು ಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಬಿಎನ್‌ಎಸ್ ಸೆಕ್ಷನ್ 118 ಅಪಾಯಕಾರಿ ಆಯುಧ ಅಥವಾ ಸಾಧನವನ್ನು ಬಳಸಿ ಸ್ವಯಂಪ್ರೇರಿತವಾಗಿ ಗಾಯಗೊಳಿಸುವ, ಗಂಭೀರವಾಗಿ ಹಲ್ಲೆ ಮಾಡುವುದಕ್ಕೆ ಸಂಬಂಧಿಸಿದ್ದಾಗಿದೆ.
ವಿದ್ಯಾರ್ಥಿಯನ್ನು ಬೆತ್ತದಿಂದ ಹೊಡೆದ ಆರೋಪ ಎದುರಿಸುತ್ತಿದ್ದ ಶಾಲಾ ಶಿಕ್ಷಕರ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸಿದ ನ್ಯಾಯಮೂರ್ತಿ ಸಿ. ಪ್ರದೀಪ್ ಕುಮಾರ್ ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಶಿಕ್ಷಕರಿಗೆ ವಿದ್ಯಾರ್ಥಿಗಳ ಮೇಲೆ ಶಿಸ್ತು ಕ್ರಮಕೈಗೊಳ್ಳಲು ಹಾಗೂ ಅವರನ್ನು ಸರಿಪಡಿಸಲು ಸಮಂಜಸವಾದ ದೈಹಿಕ ಶಿಕ್ಷೆ ವಿಧಿಸುವ ಪರೋಕ್ಷ ಅಧಿಕಾರವಿದೆ. ಆದರೆ, ಅದು ವಿದ್ಯಾರ್ಥಿಗೆ ಹಾನಿ ಮಾಡುವ ದುರುದ್ದೇಶವಿಲ್ಲದೆ, ಸದ್ಭಾವನೆಯಿಂದ ಮಾಡಿದ್ದಾಗಿರಬೇಕು ಎಂದು ಅವರು ಸ್ಪಷ್ಟಪಡಿಸಿದರು.
ಮೇಲಿನ ತೀರ್ಪುಗಳಿಂದ ಸ್ಪಷ್ಟವಾಗುವುದೇನೆಂದರೆ, ಶಾಲಾ ಶಿಕ್ಷಕರು ತಮ್ಮ ವಿಶೇಷ ಸ್ಥಾನಮಾನವನ್ನು ಗಮನದಲ್ಲಿಟ್ಟುಕೊಂಡು, ತಮ್ಮ ಸುಪರ್ದಿಯಲ್ಲಿರುವ ವಿದ್ಯಾರ್ಥಿಗಳಲ್ಲಿ ಶಿಸ್ತು ಜಾರಿಗೊಳಿಸಲು ಮತ್ತು ಅವರನ್ನು ಸರಿಪಡಿಸಲು ಪರೋಕ್ಷ ಅಧಿಕಾರ ಹೊಂದಿದ್ದಾರೆ. ಪೋಷಕರು ತಮ್ಮ ಮಗುವನ್ನು ಶಿಕ್ಷಕರಿಗೆ ಒಪ್ಪಿಸಿದಾಗ, ಶಿಕ್ಷಕರು ವಿದ್ಯಾರ್ಥಿಗಳ ಮೇಲೆ ಅಗತ್ಯವಾದ ಅಧಿಕಾರವನ್ನು ಬಳಸಲು ಪರೋಕ್ಷ ಅನುಮತಿ ನೀಡಿದಂತಾಗುತ್ತದೆ. ವಿದ್ಯಾರ್ಥಿ ಸರಿಯಾಗಿ ವರ್ತಿಸದಿದ್ದರೆ ಅಥವಾ ಶಾಲೆಯ ನಿಯಮಗಳನ್ನು ಪಾಲಿಸದಿದ್ದರೆ, ಶಿಕ್ಷಕರು ಅವರ ಸ್ವಭಾವ ಮತ್ತು ನಡೆಯನ್ನು ಸುಧಾರಿಸುವ ಉದ್ದೇಶದಿಂದ ದೈಹಿಕ ಶಿಕ್ಷೆ ನೀಡಿದರೆ, ಆ ಕೃತ್ಯ ಸದ್ಭಾವನೆಯಿಂದ ಮಾಡಲ್ಪಟ್ಟಿದೆಯೇ ಅಥವಾ ಇಲ್ಲವೇ ಎಂಬುದನ್ನು ನ್ಯಾಯಾಲಯ ಪರಿಶೀಲಿಸಬೇಕು. ಶಿಕ್ಷಕರು ವಿದ್ಯಾರ್ಥಿಯನ್ನು ಸುಧಾರಿಸುವ ಉದ್ದೇಶದಿಂದ ಸದ್ಭಾವನೆಯಿಂದ ನಡೆದುಕೊಂಡಿದ್ದಾರೆ ಎಂದು ಕಂಡುಬಂದರೆ, ಅವರು ತಮ್ಮ ಮಿತಿಗಳೊಳಗೆ ಕಾರ್ಯನಿರ್ವಹಿಸಿದ್ದಾಗಿ ಪರಿಗಣಿಸಲಾಗುತ್ತದೆ,” ಎಂದು ನ್ಯಾಯಾಲಯ ವಿವರಿಸಿತು.
ವೆಂಗಲೂರಿನ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 36 ವರ್ಷದ ಶಿಕ್ಷಕರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 118(1) ಮತ್ತು ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆಯ ಸೆಕ್ಷನ್ 75ರ (ಮಕ್ಕಳ ಮೇಲಿನ ಕ್ರೂರತೆಯ ಶಿಕ್ಷೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. 2025ರ ಫೆಬ್ರವರಿ 10ರಂದು ಶಿಕ್ಷಕರು ಶಾಲೆಯ ಸ್ಟಾಫ್ ರೂಮ್‌ನಲ್ಲಿ ವಿದ್ಯಾರ್ಥಿಯನ್ನು ಬೆತ್ತದಿಂದ ಹೊಡೆದಿದ್ದಾರೆ ಎಂಬ ಆರೋಪ ಹೊರಿಸಲಾಗಿತ್ತು. ಆದರೆ ಘಟನೆ ನಡೆದ ದಿನವೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದರೂ, ವೈದ್ಯರು ಯಾವುದೇ ಹೊರಗಾಯಗಳಾಗಿಲ್ಲ ಎಂದು ದಾಖಲಿಸಿದ್ದರು. ಜೊತೆಗೆ, ಘಟನೆ ಫೆಬ್ರವರಿ 10ರಂದು ನಡೆದಿದ್ದರೂ ಫೆಬ್ರವರಿ 13ರಂದು ಎಫ್‌ಐಆರ್ ದಾಖಲಿಸಿದ್ದನ್ನು ನ್ಯಾಯಾಲಯ ಗಣನೆಗೆ ತೆಗೆದುಕೊಂಡಿತು.
ಕಾನೂನಲ್ಲಿ ಉಲ್ಲೇಖಿಸಲಾಗಿರುವ ವಿಧಿಗಳನ್ನು ಪರಿಶೀಲಿಸಿದ ನ್ಯಾಯಾಲಯ, ಬಿಎನ್‌ಎಸ್ ಸೆಕ್ಷನ್ 118(1) ಅನ್ವಯಿಸಲು ಬಳಸಿದ ಸಾಧನ ಸ್ವಭಾವತಃ ಅಪಾಯಕಾರಿಯಾಗಿರಬೇಕು. ಆದರೆ ಬೆತ್ತ ಆ ವರ್ಗಕ್ಕೆ ಸೇರದು ಎಂದು ಸ್ಪಷ್ಟಪಡಿಸಿತು.
ಇದೇ ವೇಳೆ, ಬಾಲ ನ್ಯಾಯ ಕಾಯಿದೆಯ ಸೆಕ್ಷನ್ 75ರ ಅಡಿಯಲ್ಲಿ ಶಿಕ್ಷಕರು ಬೆತ್ತದೇಟು ನೀಡಿರುವುದು “ಕ್ರೂರತೆ” ಆಗುತ್ತದೆಯೇ ಎಂಬುದನ್ನೂ ನ್ಯಾಯಾಲಯ ಪರಿಶೀಲಿಸಿತು. ಹಿಂದಿನ ತೀರ್ಪುಗಳನ್ನು ಉಲ್ಲೇಖಿಸಿದ ಅದು, ಶಿಕ್ಷಕರು ವಿಶ್ವಾಸ ಮತ್ತು ಅಧಿಕಾರದ ವಿಶೇಷ ಸ್ಥಾನದಲ್ಲಿದ್ದಾರೆ ಎಂದು ಹೇಳಿತು.
ಈ ಪ್ರಕರಣದಲ್ಲಿ ಶಿಕ್ಷಕರು ದುರುದ್ದೇಶದಿಂದ ವರ್ತಿಸಿರುವುದಕ್ಕೆ ಯಾವುದೇ ಸಾಕ್ಷ್ಯ ಇಲ್ಲ ಎಂದು ಕಂಡುಬಂದ ಹಿನ್ನೆಲೆಯಲ್ಲಿ, ಅವರ ವಿರುದ್ಧದ ಪ್ರಕರಣವನ್ನು ಮುಂದುವರಿಸುವುದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗುತ್ತದೆ ಎಂದು ನ್ಯಾಯಾಲಯ ತೀರ್ಮಾನಿಸಿತು. ಹೀಗಾಗಿ, ತಿರುವನಂತಪುರಂನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದಲ್ಲಿ ಬಾಕಿ ಇದ್ದ ಎಲ್ಲಾ ವಿಚಾರಣೆಯನ್ನು ಹೈಕೋರ್ಟ್ ರದ್ದುಗೊಳಿಸಿದೆ.