Supreme Court  
ಸುದ್ದಿಗಳು

ಮೇಲ್ಮನವಿ ಸಲ್ಲಿಕೆಯ ನಿಗದಿತ ಕಾಲಮಿತಿ ಮೀರುತ್ತಿರುವ ಇತ್ತೀಚಿನ ಕಾನೂನುಗಳಿಂದ ಗೊಂದಲ ಸೃಷ್ಟಿ: ಸುಪ್ರೀಂ ಕೋರ್ಟ್‌

ನಿರ್ದಿಷ್ಟ ಶಾಸನದ ಅಡಿ ಮೇಲ್ಮನವಿ ಸಲ್ಲಿಸಲು ವಿಭಿನ್ನ ಕಾಲಮಿತಿ ಅವಧಿ ನಿಗದಿಗೊಳಿಸಲಾಗಿದೆ ಎಂಬುದನ್ನು ಅರಿಯಲು ಕೆಲವೊಮ್ಮೆ ವಕೀಲರೇ ವಿಫಲರಾಗುತ್ತಾರೆ ಎಂದ ನ್ಯಾಯಾಲಯ.

Bar & Bench

ಮೇಲ್ಮನವಿ ಸಲ್ಲಿಕೆಯ ಸಂಬಂಧ ಬೇರೆಬೇರೆ ಕಾನೂನುಗಳಿಗೆ ವಿಭಿನ್ನ ಕಾಲಮಿತಿ ಅವಧಿ ನಿಗದಿಗೊಳಿಸುವುದಕ್ಕೆ ಬದಲಾಗಿ ಈ ಕಾಲಮಿತಿ ಅವಧಿಯನ್ನು ಏಕರೂಪಗೊಳಿಸಬೇಕು ಎಂದು ಈಚೆಗೆ ಸುಪ್ರೀಂ ಕೋರ್ಟ್‌ ಹೇಳಿದೆ.

ಕಾಲಪರಿಮಿತಿ ಅಧಿನಿಯಮ (ಲಿಮಿಟೇಷನ್‌ ಆಕ್ಟ್‌) ಅಡಿ ಉಲ್ಲೇಖಿಸಿರುವುದಕ್ಕೆ ವಿರುದ್ಧವಾಗಿ ಶಾಸನಗಳನ್ನು ಜಾರಿಗೊಳಿಸುವ ಪರಿಪಾಠ ಹೆಚ್ಚಾಗುತ್ತಿದೆ. ಎಲ್ಲಾ ಶಾಸನಗಳಿಗೂ ಸಮಾನ ಚೌಕಟ್ಟು ಅಳವಡಿಸಿಕೊಳ್ಳಬೇಕು ಎಂದು ನ್ಯಾಯಮೂರ್ತಿಗಳಾದ ಪಿ ಎಸ್‌ ನರಸಿಂಹ ಮತ್ತು ನ್ಯಾಯಮೂರ್ತಿ ಪಂಕಜ್‌ ಮಿತ್ತಲ್‌ ಅವರ ವಿಭಾಗೀಯ ಪೀಠ ಹೇಳಿದೆ.

Justice PS Narasimha and Justice Pankaj Mithal

“ಈ ರೀತಿ ನಿರ್ಬಂಧ ಮತ್ತು ನಿಗದಿತ ಚೌಕಟ್ಟನ್ನು ಮೀರುವುದು ಗೊಂದಲಕ್ಕೆ ನಾಂದಿ ಹಾಡಲಿದೆ. ನಿರ್ದಿಷ್ಟ ಶಾಸನದ ಅಡಿ ಮೇಲ್ಮನವಿ ಸಲ್ಲಿಸಲು ವಿಭಿನ್ನ ಮಿತಿ ಅವಧಿ ನಿಗದಿಗೊಳಿಸಲಾಗಿದೆ ಎಂಬುದನ್ನು ಅರಿಯಲು ಕೆಲವೊಮ್ಮೆ ವಕೀಲರೇ ವಿಫಲರಾಗುತ್ತಾರೆ” ಎಂದು ನ್ಯಾ. ಮಿತ್ತಲ್‌ ವಾಸ್ತವಕ್ಕೆ ಕನ್ನಡಿ ಹಿಡಿದರು.

ಕಾಲಪರಿಮಿತಿ ಅಧಿನಿಯಮದ ಅಡಿ ಕಲ್ಪಿಸಲಾಗಿರುವ ನಿಗದಿತ ಕಾಲಮಿತಿ ಅವಧಿಗಿಂತ ಕೆಲ ಕಾಯಿದೆಗಳಲ್ಲಿ ಕಾಲಮಿತಿ ಅವಧಿಯು ವ್ಯತ್ಯಯ ಹೊಂದಿದ್ದು ಕಠಿಣವಾಗಿರುತ್ತದೆ. ಇದರಿಂದ ಅರ್ಹ ಪ್ರಕರಣಗಳಿಗೆ ಹಾನಿಯಾಗಲಿದ್ದು, ಸಮರ್ಪಕ ಕಾರಣಗಳ ಹೊರತಾಗಿಯೂ ಕೆಲವೊಮ್ಮೆ ದಾವೆದಾರರು ನ್ಯಾಯಾಲಯದ ಮೆಟ್ಟಿಲೇರಲಾಗದು. ಇದು ಅವರ ನಿಯಂತ್ರಣ ಮೀರಿರುತ್ತದೆ. ಇಂಥ ಸಂದರ್ಭದಲ್ಲಿ ಕೆಲವೊಮ್ಮೆ ದಾವೆ ಹೂಡುವುದು ತಡವಾಗಿರುವುದಕ್ಕೆ ನ್ಯಾಯಾಲಯವು ವಿನಾಯಿತಿ ನೀಡಬಹುದಾಗಿರುತ್ತದೆ.

“ಈ ನೆಲೆಯಲ್ಲಿ ಶಾಸನ ರೂಪಿಸುವವರು ಹೊಸ ಕಾನೂನುಗಳನ್ನು ರೂಪಿಸುವಾಗ ಎಲ್ಲಾ ಶಾಸನಗಳಿಗೂ ಪ್ರಸ್ತುತ ಮತ್ತು ಭವಿಷ್ಯದಲ್ಲಿ ಏಕರೂಪ ವ್ಯವಸ್ಥೆ ಅನ್ವಯಿಸುವಂತೆ ಗಮನದಲ್ಲಿಟ್ಟುಕೊಳ್ಳಬೇಕು” ಎಂದು ನ್ಯಾ. ಮಿತ್ತಲ್‌ ಹೇಳಿದರು.

ಮಧ್ಯಸ್ಥಿಕೆ ವಿವಾದಕ್ಕೆ ಸಂಬಂಧಿಸಿದ ಒಮ್ಮತದ ತೀರ್ಪಿನಲ್ಲಿ ನ್ಯಾ. ಮಿತ್ತಲ್‌ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನ್ಯಾ. ನರಸಿಂಹ ಮತ್ತು ನ್ಯಾ. ಮಿತ್ತಲ್‌ ಅವರನ್ನು ಒಳಗೊಂಡಿದ್ದ ವಿಭಾಗೀಯ ಪೀಠದ ಮುಂದೆ ಈ ಪ್ರಕರಣ ಇತ್ತು.

ನ್ಯಾ. ನರಸಿಂಹ ಅವರು ಹಾಲಿ ಕಾನೂನುಗಳಲ್ಲಿ ಕಾಲಮಿತಿ ಅವಧಿಯ ನಿಷ್ಠುರತೆಯ ಬಗ್ಗೆ ಕಳಕಳಿ ವ್ಯಕ್ತಪಡಿಸಿದ್ದು, “ಮಧ್ಯಸ್ಥಿಕೆ ಆದೇಶದ ಸಿಂಧುತ್ವ ಪ್ರಶ್ನಿಸಲು ಮಧ್ಯಸ್ಥಿಕೆ ಪಕ್ಷಕಾರರಿಗೆ ಲಭ್ಯವಿರುವ ಪರಿಹಾರವನ್ನು ಇದು ಮೊಟಕುಗೊಳಿಸುತ್ತದೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಅಂತಿಮವಾಗಿ ಪೀಠವು ಈ ಸಮಸ್ಯೆಯನ್ನು ಪರಿಹರಿಸುವಂತೆ ಸಂಸತ್‌ಗೆ ಆಗ್ರಹಿಸಿತು.