Justice Mohammad Nawaz and K V Aravind
Justice Mohammad Nawaz and K V Aravind 
ಸುದ್ದಿಗಳು

ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ 229 ಸಹಾಯಕ ಎಂಜಿನಿಯರ್‌ ನೇಮಕ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

Bar & Bench

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ 229 ಸಹಾಯಕ ಎಂಜಿನಿಯರ್-ಗ್ರೇಡ್ 1 ಹುದ್ದೆಗಳ ನೇಮಕಾತಿ ಸಂಬಂಧ ಅರ್ಹ ಸ್ಥಳೀಯ ಅಭ್ಯರ್ಥಿಗಳನ್ನು ಮೊದಲು ಸ್ಥಳಿಯೇತರ ವೃಂದದಲ್ಲಿ ಪರಿಗಣಿಸಬೇಕು ಎಂದು ರಾಜ್ಯ ಸರ್ಕಾರ ಹೊರಡಿಸಿದ್ದ ಸುತ್ತೋಲೆಯನ್ನು ರಾಜ್ಯ ಆಡಳಿತ ನ್ಯಾಯಾಧಿಕರಣ (ಕೆಎಸ್‌ಎಟಿ) ರದ್ದುಪಡಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ಸಂಬಂಧ ಸರ್ಕಾರಕ್ಕೆ ಹೈಕೋರ್ಟ್ ಮಂಗಳವಾರ ನೋಟಿಸ್ ಜಾರಿಗೊಳಿಸಿದೆ.

ಕರ್ನಾಟಕ ಲೋಕಸೇವಾ ಆಯೋಗ ಪ್ರಕಟಿಸಿದ್ದ ತಾತ್ಕಾಲಿಕ ಪಟ್ಟಿಯಲ್ಲಿ ಸಹಾಯಕ ಎಂಜಿನಿಯರ್ ಗ್ರೇಡ್-1 ಹುದ್ದೆಗೆ ಆಯ್ಕೆಯಾಗಿದ್ದ ರಾಯಚೂರು ಜಿಲ್ಲೆ ಮಸ್ಕಿ ತಾಲ್ಲೂಕಿನ ರುದ್ರಮುನಿ ಸೇರಿದಂತೆ ಹೈದರಾಬಾದ್‌ ಕರ್ನಾಟಕ ಭಾಗದ 23 ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಮೊಹಮ್ಮದ್ ನವಾಜ್ ಮತ್ತು ಕೆ ವಿ ಅರವಿಂದ ಅವರ ನೇತೃತ್ವದ ರಜಾಕಾಲೀನ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ಕರ್ನಾಟಕ ಲೋಕಸೇವಾ ಆಯೋಗ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಕೆಎಸ್‌ಎಟಿ ಮೆಟ್ಟಿಲೇರಿದ್ದ ಇಬ್ಬರು ಅಭ್ಯರ್ಥಿಗಳಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಜನವರಿ 5ಕ್ಕೆ ಮುಂದೂಡಿತು. ಕೆಎಸ್‌ಎಟಿ ಆದೇಶಕ್ಕೆ ತಡೆ ನೀಡಬೇಕು ಎಂದು ಅರ್ಜಿದಾರರ ಮಧ್ಯಂತರ ಮನವಿಯನ್ನು ಮುಂದಿನ ವಿಚಾರಣೆ ವೇಳೆ ಪರಿಗಣಿಸುವುದಾಗಿ ಪೀಠ ಹೇಳಿತು. ಅರ್ಜಿದಾರರ ಪರ ವಕೀಲ ಎ ಎಲ್ ಪರಶುರಾಮ ವಾದ ಮಂಡಿಸಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ 129 ಮೂಲ ಉಳಿಕೆ ವೃಂದ ಹಾಗೂ 59 ಸ್ಥಳೀಯ ವೃಂದದ (ಹೈದರಾಬಾದ್‌ ಕರ್ನಾಟಕ ವೃಂದ) ಹುದ್ದೆ ಸೇರಿ ಒಟ್ಟು 188 ಸಹಾಯಕ ಎಂಜಿನಿಯರ್ ಗ್ರೇಡ್-1 ಹುದ್ದೆಗಳ ನೇಮಕಕ್ಕೆ ಕೆಪಿಎಸ್‌ಸಿ 2022ರ ಫೆಬ್ರವರಿ 21ರಂದು ಅಧಿಸೂಚನೆ ಹೊರಡಿಸಿತ್ತು. ಬಳಿಕ ಉಳಿಕೆ ಮೂಲ ವೃಂದದ 100 ಹುದ್ದೆಗಳನ್ನು ಹೆಚ್ಚಿಸಿ ಒಟ್ಟು 229 ಹುದ್ದೆಗಳಿಗೆ ಸೆಪ್ಟೆಂಬರ್‌ 1ರಂದು ಪರಿಷ್ಕೃತ ಅಧಿಸೂಚನೆ ಹೊರಡಿಸಲಾಗಿತ್ತು. ಅದರಂತೆ 2023ರ ಮಾರ್ಚ್‌ 2ರಂದು ಮತ್ತೊಂದು ಸುತ್ತೋಲೆ ಹೊರಡಿಸಿದ್ದ ರಾಜ್ಯ ಸರ್ಕಾರವು ಅರ್ಹ ಸ್ಥಳೀಯ ಅಭ್ಯರ್ಥಿಗಳನ್ನು ಸ್ಥಳೀಯೇತರ ವೃಂದದ ಹುದ್ದೆಗಳಿಗೆ ಮೊದಲು ಪರಿಗಣಿಸಿ, ಬಳಿಕ ಅವರನ್ನು ಸ್ಥಳೀಯ ವೃಂದದ ಹುದ್ದೆಗಳಿಗೆ ಪರಿಗಣಿಸಬೇಕು ಎಂದು ಸೂಚಿಸಿತ್ತು.

ಈ ಸುತ್ತೋಲೆ ಪ್ರಶ್ನಿಸಿ ಉಳಿಕೆ ಮೂಲ ವೃಂದದ ಇಬ್ಬರು ಅಭ್ಯರ್ಥಿಗಳು ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯ ಮೆಟ್ಟಿಲೇರಿದ್ದರು. ಈ ನಡುವೆ ಫೆಬ್ರವರಿ 1ರ ಸುತ್ತೋಲೆ ಆಧರಿಸಿ ಕೆಪಿಎಸ್‌ಸಿ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಿತ್ತು. ಈ ಪಟ್ಟಿಯಲ್ಲಿ ಅರ್ಜಿದಾರ ಅಭ್ಯರ್ಥಿಗಳೂ ಆಯ್ಕೆಯಾಗಿದ್ದರು. ಇದಲ್ಲದೆ 2023ರ ಆಗಸ್ಟ್‌ 22ರ ಆದೇಶದಲ್ಲಿ ಹೈಕೋರ್ಟ್ ಫೆಬ್ರವರಿ 1ರ ಸುತ್ತೋಲೆಯನ್ನು ಎತ್ತಿಹಿಡಿದಿತ್ತು. ಆದಾಗ್ಯೂ, ಸುತ್ತೋಲೆಯನ್ನು ರದ್ದುಪಡಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಕೆಎಸ್‌ಎಟಿ ಅಂಗೀಕರಿಸಿ ನವೆಂಬರ್‌ 8ರಂದು ಸುತ್ತೋಲೆ ರದ್ದುಪಡಿಸಿತ್ತು. ಇದರಿಂದಾಗಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.