Karnataka HC and KPSC 
ಸುದ್ದಿಗಳು

ಎಸ್‌ಸಿ-ಎಸ್‌ಟಿ ಮೀಸಲಾತಿ ಕಾಯಿದೆ ಅನ್ವಯ ನೇಮಕಾತಿ: ರಾಜ್ಯ ಸರ್ಕಾರ, ಕೆಪಿಎಸ್‌ಸಿಗೆ ಹೈಕೋರ್ಟ್‌ ನೋಟಿಸ್‌

ಕರ್ನಾಟಕ ಲೋಕಸೇವಾ ಆಯೋಗವು ನೇಮಕಾತಿ ಪ್ರಕ್ರಿಯೆಯನ್ನು ಮುಂದುವರಿಸಬಹುದು. ಆದರೆ, ನ್ಯಾಯಾಲಯದ ಅನುಮತಿಯಿಲ್ಲದೆ ನೇಮಕಾತಿಯ ಅಂತಿಮ ಫಲಿತಾಂಶ ಪ್ರಕಟಿಸುವಂತಿಲ್ಲ ಎಂದೂ ಹೈಕೋರ್ಟ್ ನಿರ್ದೇಶಿಸಿದೆ.

Bar & Bench

ರಾಜ್ಯದಲ್ಲಿ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ವರ್ಗಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿನ ಮೀಸಲಾತಿಯನ್ನು ಹೆಚ್ಚಳ ಮಾಡಲು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕರ್ನಾಟಕ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ (ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳು ಮತ್ತು ಸರ್ಕಾರದ ಅಧೀನ ಸೇವೆಗಳಲ್ಲಿನ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿ) ಕಾಯಿದೆ-2022 ಹಾಗೂ ಈ ಕಾಯಿದೆ ಆಧರಿಸಿ ಬಿಬಿಎಂಪಿಯಲ್ಲಿನ 92 ಸಹಾಯಕ ಸಿವಿಲ್ ಎಂಜಿನಿಯರ್‌ಗಳ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗ 2024ರ ಜುಲೈ 13ರಂದು ಹೊರಡಿಸಿದ ನೇಮಕಾತಿ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಗುರುವಾರ ನೋಟಿಸ್ ಜಾರಿಗೊಳಿಸಿದೆ.

ಅಲ್ಲದೇ, ಕರ್ನಾಟಕ ಲೋಕಸೇವಾ ಆಯೋಗವು ನೇಮಕಾತಿ ಪ್ರಕ್ರಿಯೆಯನ್ನು ಮುಂದುವರಿಸಬಹುದು. ಆದರೆ, ನ್ಯಾಯಾಲಯದ ಅನುಮತಿಯಿಲ್ಲದೆ ನೇಮಕಾತಿಯ ಅಂತಿಮ ಫಲಿತಾಂಶ ಪ್ರಕಟಿಸುವಂತಿಲ್ಲ ಎಂದೂ ಹೈಕೋರ್ಟ್ ನಿರ್ದೇಶಿಸಿದೆ.
ಸಹಾಯಕ ಸಿವಿಲ್ ಎಂಜಿನಿಯರ್ ಹುದ್ದೆಗೆ ಅರ್ಹರಾಗಿರುವ ಬಿ ಇ ಸಿವಿಲ್ ಪದವೀಧರರಾದ ತುಮಕೂರು ಜಿಲ್ಲೆಯ ಎಚ್ ಆರ್ ಸಾಗರ್, ಮೈಸೂರಿನ ಡಿ ಪ್ರಜ್ವಲ್ ಕುಮಾರ್ ಮತ್ತು ಜಿ ಎಂ ಪುರುಷೋತ್ತಮಗೌಡ ಎಂಬುವರು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಚ್ ಟಿ ನರೇಂದ್ರ ಪ್ರಸಾದ್ ಅವರ ಏಕಸದಸ್ಯ ಪೀಠ ನಡೆಸಿತು.

ಅರ್ಜಿ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಮುಂದೂಡಿತು.

ಉಳಿಕೆ ಮೂಲ ವೃಂದದಲ್ಲಿ 92 ಸಹಾಯಕ ಸಿವಿಲ್ ಎಂಜಿನಿಯರ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಇದರಲ್ಲಿ 41 ಹುದ್ದೆಗಳನ್ನು ಸಾಮಾನ್ಯ ಕೆಟಗರಿ ಹಾಗೂ 51 ಹುದ್ದೆಗಳನ್ನು ಮೀಸಲು ಕೆಟಗರಿಗೆ ನಿಗದಿಪಡಿಸಲಾಗಿದೆ. ಮೀಸಲು ಹುದ್ದೆಗಳ ಶೇಕಡವಾರು ಪ್ರಮಾಣ ಶೇ.56ರಷ್ಟು ಆಗಲಿದ್ದು, ಸಾಮಾನ್ಯ ವರ್ಗಕ್ಕೆ ಶೇ.44ರಷ್ಟು ಹುದ್ದೆಗಳನ್ನು ಮೀಸಲಿಟ್ಟಂತಾಗಲಿದೆ. ಮೀಸಲು ಹುದ್ದೆಗಳ ಪ್ರಮಾಣ ಶೇ.56ರಷ್ಟು ಆಗಿರುವುದು, ಒಟ್ಟಾರೆ ಪ್ರಮಾಣ ಶೇ.50ಕ್ಕೆ ಮೀರಬಾರದು ಎಂಬ ಸುಪ್ರೀಂ ಕೋರ್ಟ್ ಮಿತಿಯನ್ನು ದಾಟಿದೆ. ಆದ್ದರಿಂದ ಕಾಯಿದೆ ಸಂವಿಧಾನಬಾಹಿರ ಎಂದು ಘೋಷಿಸಬೇಕು ಹಾಗೂ ನೇಮಕಾತಿ ಅಧಿಸೂಚನೆ ರದ್ದುಪಡಿಸಬೇಕು ಎಂದು ಅರ್ಜಿದಾರರ ಪರ ವಕೀಲರು ಮನವಿ ಮಾಡಿದ್ದರು. 2022ರ ಕಾಯಿದೆ ಅಡಿ ಎಸ್ಸಿ ವರ್ಗಗಳಿಗೆ ಮೀಸಲಾತಿಯನ್ನು ಶೇ.15ರಿಂದ 17ಕ್ಕೆ ಹಾಗೂ ಎಸ್ಟಿ ವರ್ಗಗಳಿಗೆ ಶೇ.3ರಿಂದ 7ಕ್ಕೆ ಹೆಚ್ಚಿಸಲಾಗಿದೆ. ಅದನ್ನು ಪ್ರಶ್ನಿಸಲಾಗಿದೆ.