Allahabad High Court, Rahul Gandhi 
ಸುದ್ದಿಗಳು

ವಾಕ್‌ ಸ್ವಾತಂತ್ರ್ಯವನ್ನು ಸೇನೆಯನ್ನು ಟೀಕಿಸಲು ಬಳಸಲಾಗದು: ರಾಹುಲ್‌ ಹೇಳಿಕೆಗೆ ಅಲಾಹಾಬಾದ್‌ ಹೈಕೋರ್ಟ್‌ ಅಸಮಾಧಾನ

ಲಖನೌ ನ್ಯಾಯಾಲಯ ತಮ್ಮ ವಿರುದ್ಧ ಹೊರಡಿಸಿದ್ದ ಸಮನ್ಸ್ ಆದೇಶ ಪ್ರಶ್ನಿಸಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸುವ ವೇಳೆ ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

Bar & Bench

ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಭಾರತೀಯ ಸೇನೆಯ ವಿರುದ್ಧ ಮಾನನಷ್ಟ ಹೇಳಿಕೆಗಳನ್ನು ನೀಡುವುದಕ್ಕೆ ವಿಸ್ತರಿಸುವುದಿಲ್ಲ ಎಂದು ಅಲಾಹಾಬಾದ್‌ ಹೈಕೋರ್ಟ್ ಇತ್ತೀಚೆಗೆ ಹೇಳಿದೆ [ರಾಹುಲ್ ಗಾಂಧಿ ವಿರುದ್ಧ ಉತ್ತರ ಪ್ರದೇಶ ರಾಜ್ಯ].

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಭಾರತೀಯ ಸೇನೆಯ ವಿರುದ್ಧ ಮಾನನಷ್ಟ ಹೇಳಿಕೆಗಳನ್ನು ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಲಖನೌ ನ್ಯಾಯಾಲಯ ಹೊರಡಿಸಿದ ಸಮನ್ಸ್ ಆದೇಶದ ವಿರುದ್ಧ ವಿರೋಧ ಪಕ್ಷದ ನಾಯಕ (ಎಲ್‌ಒಪಿ) ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸುವ ವೇಳೆ ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

"ನಿಸ್ಸಂದೇಹವಾಗಿ, ಭಾರತದ ಸಂವಿಧಾನದ 19(1)(ಎ) ವಿಧಿಯು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಖಾತರಿಪಡಿಸುತ್ತದೆ, ಈ ಸ್ವಾತಂತ್ರ್ಯವು ಸಮಂಜಸವಾದ ನಿರ್ಬಂಧಗಳಿಗೆ ಒಳಪಟ್ಟಿರುತ್ತದೆ ಮತ್ತು ಯಾವುದೇ ವ್ಯಕ್ತಿಗೆ ಮಾನಹಾನಿ ಉಂಟು ಮಾಡುವಂತಹ ಅಥವಾ ಭಾರತೀಯ ಸೇನೆಗೆ ಮಾನಹಾನಿ ನೀಡುವಂತಹ ಹೇಳಿಕೆಗಳನ್ನು ನೀಡುವ ಸ್ವಾತಂತ್ರ್ಯವನ್ನು ಇದು ಒಳಗೊಳ್ಳುವುದಿಲ್ಲ" ಎಂದು ಏಕ ಸದಸ್ಯ ಪೀಠದ ನ್ಯಾಯಮೂರ್ತಿ ಸುಭಾಷ್ ವಿದ್ಯಾರ್ಥಿ ತಿಳಿಸಿದರು.

ರಾಹುಲ್‌ ವಿರುದ್ಧ ದಾಖಲಾಗಿರುವ ಮಾನಹಾನಿ ಮೊಕದ್ದಮೆಯಲ್ಲಿ ಮಾರ್ಚ್ 24 ರಂದು ವಿಚಾರಣೆಗೆ ಹಾಜರಾಗುವಂತೆ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅಲೋಕ್ ವರ್ಮಾ ಅವರು ನಿರ್ದೇಶನ ನೀಡಿದ್ದರು. ಇದನ್ನು ಪ್ರಶ್ನಿಸಿ ರಾಹುಲ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ರಾಹುಲ್‌ ವಿರುದ್ಧದ ಮಾನಹಾನಿ ಮೊಕದ್ದಮೆಯನ್ನು ಗಡಿ ರಸ್ತೆಗಳ ಸಂಸ್ಥೆಯ ಮಾಜಿ ನಿರ್ದೇಶಕ ಉದಯ್ ಶಂಕರ್ ಶ್ರೀವಾಸ್ತವ ಹೂಡಿದ್ದು, ಅವರ ಪರವಾಗಿ ವಕೀಲ ವಿವೇಕ್ ತಿವಾರಿ ಅವರು ದೂರು ದಾಖಲಿಸಿದ್ದರು.

ಭಾರತ ಮತ್ತು ಚೀನಾ ಸೇನೆಗಳ ನಡುವಿನ ಘರ್ಷಣೆಯ ಕುರಿತು ರಾಹುಲ್‌ ಗಾಂಧಿಯವರು ಭಾರತ್‌ ಜೋಡೋ ಯಾತ್ರೆಯ ವೇಳೆ ಡಿಸೆಂಬರ್ 16, 2022 ರಂದು ನೀಡಿದ್ದ ಹೇಳಿಕೆಗಳು ಭಾರತೀಯ ಸೇನಾ ಪಡೆಗಳ ಕುರಿತು ಅವಹೇಳನ ಹಾಗೂ ಮಾನಹಾನಿ ಮಾಡುವಂತಿವೆ ಎಂದು ತಿವಾರಿ ಆರೋಪಿಸಿದ್ದರು.

"ಚೀನಾದ ಸೈನಿಕರು ಅರುಣಾಚಲ ಪ್ರದೇಶದಲ್ಲಿ ಭಾರತೀಯ ಸೇನಾ ಸಿಬ್ಬಂದಿಯನ್ನು ಥಳಿಸುತ್ತಿದ್ದಾರೆ" ಎಂದು ರಾಹುಲ್‌ ಗಾಂಧಿ ಹೇಳಿದ್ದರು ವಾಸ್ತವ ನಿಯಂತ್ರಣ ರೇಖೆಯಲ್ಲಿ ಚೀನಾ ನಡೆಸಿದ್ದ ಅತಿಕ್ರಮಗಳ ಬಗ್ಗೆ ಸರ್ಕಾರವನ್ನು ಗುರಿಯಾಗಿರಿಸಿಕೊಂಡು ರಾಹುಲ್‌ ಟೀಕೆ ಮಾಡಿದ್ದರು.