ಸುಪ್ರೀಂ ಕೊರ್ಟ್‌ನ ಅಸ್ತಿತ್ವದಲ್ಲಿಲ್ಲದ ತೀರ್ಪುಗಳನ್ನು ಉಲ್ಲೇಖಿಸಿ ಆದೇಶ ನೀಡಿದ್ದ ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರೊಬ್ಬರ ವಿರುದ್ಧ ಕ್ರಮ ಕೈಗೊಳ್ಳಲು ಕರ್ನಾಟಕ ಹೈಕೋರ್ಟ್ ಈಚೆಗೆ ಶಿಫಾರಸ್ಸು ಮಾಡಿದೆ.
ತಪ್ಪು ತೀರ್ಪುಗಳನ್ನು ಉಲ್ಲೇಖಿಸಿ ಸಿವಿಲ್ ನ್ಯಾಯಾಲಯ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಸಮ್ಮಾನ್ ಕ್ಯಾಪಿಟಲ್ ಲಿಮಿಟೆಡ್ ಮತ್ತು ಸಮ್ಮಾನ್ ಫಿನ್ಸರ್ವ್ ಲಿಮಿಟೆಡ್ ಹಾಗೂ ಮತ್ತಿರರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಆರ್ ದೇವದಾಸ್ ಅವರ ಪೀಠ ಪುರಸ್ಕರಿಸಿದೆ.
ಅರ್ಜಿದಾರರ ಪರ ವಕೀಲರು ಪ್ರಸ್ತಾಪ ಮಾಡದಿದ್ದರೂ, ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರು ಸುಪ್ರೀಂ ಕೋರ್ಟ್ ಅಥಾವ ಇತರೆ ನ್ಯಾಯಾಲಯಗಳಲ್ಲಿ ಎಂದೂ ಉಲ್ಲೇಖಿಸದಂತಹ ಎರಡು ತೀರ್ಪುಗಳನ್ನು ಉಲ್ಲೇಖಿಸಿದ್ದಾರೆ. ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರ ಈ ಕೃತ್ಯವನ್ನು ಕಾನೂನಿನ ಅಡಿಯಲ್ಲಿ ತನಿಖೆ ನಡೆಸಬೇಕಾದ ಅಗತ್ಯವಿದೆ. ಆದೇಶವನ್ನು ಮುಖ್ಯ ನ್ಯಾಯಮೂರ್ತಿ ಅವರ ಮುಂದೆ ಇಡಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.
ಪ್ರಕರಣ ಸಂಬಂಧ ದಾಖಲೆಗಳನ್ನು ಗಮನಿಸಿದ ಪೀಠವು ಅರ್ಜಿದಾರರು ವಾಣಿಜ್ಯ ನ್ಯಾಯಾಲಯದಿಂದ ಪ್ರಕರಣ ಹಿಂಪಡೆಯುವುದಕ್ಕೆ ಹಾಗೂ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡುವುದಕ್ಕೆ ಸೂಕ್ತ ಕಾರಣ ನೀಡಿರಲಿಲ್ಲ. ಆದರೂ ಅಸ್ತಿತ್ವದಲ್ಲಿಲ್ಲದ ತೀರ್ಪುಗಳನ್ನು ಉಲ್ಲೇಖಿಸಿ ಆದೇಶಿಸಲಾಗಿದ್ದು, ವಿಚಾರಣೆಗೊಳಪಡಿಸುವುದು ಅತ್ಯವಿದೆ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು “ಸಾಕಷ್ಟು ಶೋಧ ನಡೆಸಿದರೂ ವಿಚಾರಣಾಧೀನ ನ್ಯಾಯಾಲಯ ಹೊರಡಿಸಿರುವ ಆದೇಶಗಳು ದೊರೆತಿಲ್ಲ. ಅಸ್ತಿತ್ವದಲ್ಲಿಲ್ಲದ ತೀರ್ಪುಗಳನ್ನು ವಿಚಾರಣಾಧೀನ ನ್ಯಾಯಾಧೀಶರು ಉಲ್ಲೇಖಿಸಿರಬಹುದು” ಎಂದರು.
ಮಂತ್ರಿ ಇನ್‌ಫ್ರಾಸ್ಟ್ರಕ್ಚರ್ ಪರ ವಾದ ಮಂಡಿಸಿದ ಹಿರಿಯ ವಕೀಲ ಎಂ ಎಸ್ ಶ್ಯಾಮ್ ಸುಂದರ್ ಅವರು “ವಿಚಾರಣಾ ನ್ಯಾಯಾಲಯದಲ್ಲಿ ಏನು ನಡೆಯಿತು ಎಂಬುದು ಗೊತ್ತಿಲ್ಲ. ಆದರೆ, ವಿಚಾರಣಾ ನ್ಯಾಯಾಲಯ ಉಲ್ಲೇಖಿಸಿರುವ ಆದೇಶಗಳು ಪ್ರಸ್ತುತ ಅಸ್ತಿತ್ವದಲ್ಲಿಲ್ಲ. ಆದರೆ, ಕೃತಕ ಬುದ್ದಿಮತ್ತೆ ಮತ್ತು ಚಾಟ್‌ಜಿಪಿಟಿ ಬಳಸುವ ಸಂದರ್ಭಗಳಲ್ಲಿ ತಪ್ಪಾಗಿದೆ” ಎಂದು ಪೀಠಕ್ಕೆ ವಿವರಿಸಿದ್ದರು.
ಪ್ರಕರಣದ ಹಿನ್ನೆಲೆ: ಮಂತ್ರಿ ಇನ್‌ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ಅವರು ಸಮ್ಮಾನ್ ಫಿನ್ಸರ್ವ್ ಲಿಮಿಟೆಡ್‌ನಲ್ಲಿ ಷೇರುಗಳನ್ನು ಅಡವಿಟ್ಟು ಸಾಲವನ್ನು ಪಡೆದುಕೊಂಡಿದ್ದರು. ಈ ಸಾಲ ಪಾವತಿಸಲಾಗದೆ ಸುಸ್ತಿದಾರರಾದ ಬಳಿಕ ಸಾಲದಾತರು ಸೆಪ್ಟೆಂಬರ್ 2024ರಲ್ಲಿ ಅಡವಿಟ್ಟ ಷೇರುಗಳನ್ನು ವರ್ಗಾವಣೆ ಮಾಡುವಂತೆ ಕೋರಿ ನೋಟಿಸ್ ಜಾರಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಮಂತ್ರಿ ಇನ್ಫಾಸ್ಟ್ರಕ್ಷರ್ ಬೆಂಗಳೂರು ವಾಣಿಜ್ಯ ನ್ಯಾಯಾಲದಲ್ಲಿ ಪ್ರಕರಣ ದಾಖಲಿಸಿತ್ತು. ಅಲ್ಲದೆ, ಷೇರುಗಳನ್ನು ವರ್ಗಾವಣೆ ಮಾಡುವ ಸಂಬಂಧ ಮುಂದುವರೆದ ಪ್ರಕ್ರಿಯೆಗೆ ಶಾಶ್ವತ ತಡೆಯಾಜ್ಞೆ ಕೋರಿದ್ದರು.
2024ರ ಅಕ್ಟೋಬರ್ 1ರಂದು ಹೊಸದಾಗಿ ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ಕೋರಿ ಮಂತ್ರಿ ಇನ್‌ಫ್ರಾಸ್ಟ್ರಕ್ಚರ್ ಸಂಸ್ಥೆಯು ವಾಣಿಜ್ಯ ನ್ಯಾಯಾಲಯದಲ್ಲಿದ್ದ ಪ್ರಕರಣ ಹಿಂಪಡೆದುಕೊಂಡಿತ್ತು. ಆದರೆ, ವಾಣಿಜ್ಯ ನ್ಯಾಯಾಲಯದಲ್ಲಿ ಹೊಸದಾಗಿ ಅರ್ಜಿ ಸಲ್ಲಿಸುವುದಕ್ಕೆ ಬದಲಾಗಿ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಅರ್ಜಿ ಹೂಡಿದ್ದರು.
ಇದಕ್ಕೆ ಆಕ್ಷೇಪಿಸಿದ್ದ ಸಮ್ಮಾನ್ ಫಿನ್ಸರ್ವ್ ಲಿಮಿಟೆಡ್, ಇದೊಂದು ವಾಣಿಜ್ಯ ವ್ಯವಹಾರದ ಪ್ರಕರಣ. ಸಿವಿಲ್ ನ್ಯಾಯಾಲಯಕ್ಕೆ ಇದರ ವಿಚಾರಣೆ ನಡೆಸುವು ಅಧಿಕಾರವಿಲ್ಲ. ಹೀಗಾಗಿ, ಅರ್ಜಿ ವಜಾಗೊಳಿಸಬೇಕು ಎಂದು ಮಧ್ಯಂತರ ಅರ್ಜಿ ಸಲ್ಲಿಸಿತ್ತು.
ಈ ಮಧ್ಯಂತರ ಅರ್ಜಿ ವಿಚಾರಣೆ ನಡೆಸಿದ್ದ ಸಿಟಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರು, ಅಸ್ಥಿತ್ವದಲ್ಲಿಲ್ಲದ ಜಲನ್ ಟ್ರೇಡಿಂಗ್ ಕಂಪೆನಿ ಲಿಮಿಟೆಡ್ ವರ್ಸಸ್ ಮಿಲೇನಿಯಂ ಟೆಲಿಕಾಮ್ ಲಿಮಿಟೆಡ್; ಮೆಸರ್ಸ್ ಕಾವಲ್ನರ್ ಸೆಮಿಂಟೇಶನ್ ಇಂಡಿಯಾ ಲಿಮಿಟೆಡ್ ವರ್ಸಸ್ ಅಚಿಲ್ ಬಿಲ್ಡರ್ಸ್ ಪ್ರೇವೇಟ್ ಲಿಮಿಟೆಡ್ ಎಂಬ ಎರಡು ಸುಪ್ರೀಂ ಕೋರ್ಟ್‌ನ ಆದೇಶಗಳನ್ನು ಉಲ್ಲೇಖಿಸಿ ಮಧ್ಯಂತರ ಅರ್ಜಿ ವಜಾಗೊಳಿಸಿದ್ದರು. ಇದಾದ ನಂತರ ಈ ಎರಡು ಆದೇಶಗಳು ಅಸ್ತಿತ್ವದಲ್ಲಿಲ್ಲ ಎಂಬ ಅಂಶ ಸಮ್ಮಾನ್ ಫಿನ್ಸರ್ವ್ ಲಿಮಿಟೆಡ್‌ಗೆ ಗೊತ್ತಾಗಿತ್ತು. ಹೀಗಾಗಿ, ಈ ಮಧ್ಯಂತರ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.